Site icon Vistara News

Karnataka Election : ಲೂಟಿ ಮಾಡೋದಕ್ಕಿಂತ ಮೀನಿಗೆ ಗಾಳ ಹಾಕೋದೇ ಉತ್ತಮ: ಡಿಕೆಶಿಗೆ ಮಧ್ವರಾಜ್‌ ತಿರುಗೇಟು

#image_title

ಕಾರವಾರ: “ಲೂಟಿ ಮಾಡಿ ದುಡ್ಡು ಸಂಪಾದಿಸಿ ಸಾಮ್ರಾಜ್ಯ ಕಟ್ಟುವ ಬದಲಿಗೆ ಪ್ರಾಮಾಣಿಕವಾಗಿ ಮೀನಿಗೆ ಗಾಳ ಹಾಕಿಕೊಂಡು ಇರುವುದು ಉತ್ತಮ ವೃತ್ತಿ” ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ತಿರುಗೇಟು (Karnataka Election) ನೀಡಿದ್ದಾರೆ.

“ಪ್ರಮೋದ್ ಮಧ್ವರಾಜ್ ಅವರು ಅಧಿಕಾರ ಸಿಗುವ ನಿರೀಕ್ಷೆಯಲ್ಲಿ ಬಿಜೆಪಿ ಸೇರಿದ್ದರು. ಆದರೆ ಬಿಜೆಪಿಯಲ್ಲಿ ಅವರಿಗೆ ಯಾವುದೇ ಅಧಿಕಾರ ನೀಡಿಲ್ಲ. ಹೀಗಾಗಿ ಅವರು ಮೀನಿಗೆ ಗಾಳ ಹಾಕಿ ಕೂರಬೇಕಾಗಿದೆ” ಎಂದು ಇತ್ತೀಚಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಉಡುಪಿಯಲ್ಲಿ ಹೇಳಿಕೆ ನೀಡಿದ್ದರು. ಈ ಕುರಿತು ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಪ್ರಮೋದ್ ಮಧ್ವರಾಜ್, “ಗಾಳ ಹಾಕಿ ಮೀನು ಹಿಡಿಯುವುದು ಒಂದು ಕಾಯಕ. ಸಾವಿರಾರು ವರ್ಷಗಳಿಂದ ಮೀನುಗಾರರು ಇದನ್ನು ಮಾಡಿಕೊಂಡು ಬಂದಿದ್ದಾರೆ. ಆ ಮೂಲಕವೇ ಪ್ರಾಮಾಣಿಕವಾಗಿ ಜೀವನ ಮಾಡುತ್ತಿದ್ದಾರೆ. ಆದರೆ ಡಿ.ಕೆ.ಶಿವಕುಮಾರ ಎಲ್ಲಿಂದ ಎಲ್ಲಿಗೆ ಬಂದಿದ್ದಾರೆ ಎನ್ನುವುದನ್ನು ನೋಡಬೇಕಿದೆ” ಎಂದು ಹೇಳಿದ್ದಾರೆ.

“ಡಿ.ಕೆ.ಶಿವಕುಮಾರ್ 1989ರಲ್ಲಿ ಮೊದಲ ಬಾರಿಗೆ ಶಾಸಕರಿದ್ದಾಗ ನನ್ನ ಸ್ನೇಹಿತರಾಗಿದ್ದರು. ನಮ್ಮ ತಾಯಿ ಮಂತ್ರಿಯಾಗಿದ್ದ ವೇಳೆ ನಮ್ಮ ಮನೆಗೆ ಡಿಕೆಶಿ ಬರುತ್ತಿದ್ದರು. ಆಗ ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು, ಇವತ್ತು ಹೇಗಿದೆ ಎನ್ನುವುದನ್ನ ಗಮನಿಸಬೇಕು. ಪ್ರಾಯಶಃ ಲೂಟಿ ಮಾಡಿ ದುಡ್ಡು ಮಾಡಿ ಸಾಮ್ರಾಜ್ಯ ಕಟ್ಟುವ ಬದಲಿಗೆ ಪ್ರಾಮಾಣಿಕವಾಗಿ ಮೀನಿಗೆ ಗಾಳ ಹಾಕಿ ಹಿಡಿದು ಜೀವನ ನಡೆಸುವುದೇ ಉತ್ತಮವಾದ ವೃತ್ತಿ” ಎಂದಿದ್ದಾರೆ.

ಇದನ್ನೂ ಓದಿ: Karnataka Election : ಕಾಂಗ್ರೆಸ್‌ ಕೈ ಖಾಲಿಯಾಗಿದೆ, ಪ್ರಿಯಾಂಕ ಗಾಂಧಿ ಕೈಯಲ್ಲಿರುವುದೂ ದೋಸೆ ಮಾತ್ರ ಅಂದ ಅಣ್ಣಾಮಲೈ
ಸುವರ್ಣ ತ್ರಿಭುಜ ಅವಘಡದ ಕುರಿತು ಪ್ರತಿಕ್ರಿಯಿಸಿದ ಅವರು, “ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ಏಳು ಮಂದಿ ಮೀನುಗಾರರು ಮೃತಪಟ್ಟಿದ್ದರು. ನಾನು ಮೀನುಗಾರಿಕಾ ಇಲಾಖೆಯ ಮಂತ್ರಿಯಾಗುವ ಮುನ್ನ ಮೀನುಗಾರರು ಹೀಗೆ ಅವಘಡದಲ್ಲಿ ಮೃತಪಟ್ಟರೆ ಪರಿಹಾರ 2 ಲಕ್ಷ ರೂ. ಇತ್ತು. ಅದನ್ನು ನಾನು ಮಂತ್ರಿಯಾದ ಬಳಿಕ 6 ಲಕ್ಷಕ್ಕೆ ಏರಿಸಿದ್ದೆ. ಸುವರ್ಣ ತ್ರಿಭುಜ ಅವಘಡದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಸಮ್ಮಿಶ್ರ ಸಕಾರ ಇತ್ತು. ನಾನು ಪ್ರಯತ್ನಪಟ್ಟು ತಲಾ 11 ಲಕ್ಷ ಕೊಡಿಸಿದ್ದೆ. ಅದಾದ ಬಳಿಕ ಬಿಜೆಪಿ ಸರ್ಕಾರ ಬಂದ ನಂತರ ಮತ್ತೆ ತಲಾ 10 ಲಕ್ಷ ನೀಡಲಾಗಿದೆ. ಬೋಟ್ ಹುಡುಕಲು ನೌಕಾಪಡೆಯಿಂದ ಕಾರ್ಯಾಚರಣೆ ನಡೆಸಿ, ಬೋಟ್ ಮಾಲೀಕರಿಗೆ ಇನ್ಶೂರೆನ್ಸ್ ಹಣವೂ ಬರುವಂತೆ ಮಾಡಿದ್ದೇವೆ. ಮೃತ ಕುಟುಂಬಸ್ಥರಿಗೆ ತಲಾ 21 ಲಕ್ಷ ಪರಿಹಾರ ಕೊಡಿಸಲಾಗಿದೆ” ಎಂದರು.

“ಅಂದು ಘಟನೆ ನಡೆದ ಸಂದರ್ಭದಲ್ಲಿ ನಾನು ಕೂಡ ಈ ಘಟನೆಯ ತನಿಖೆಗೆ ಒತ್ತಾಯಿಸಿದ್ದೆ. ಆದರೆ ನಂತರದಲ್ಲಿ ಮೃತ ಮೀನುಗಾರರ ಕುಟುಂಬಸ್ಥರು ಹಾಗೂ ಮೀನುಗಾರರು ಈ ಬಗ್ಗೆ ಹೆಚ್ಚು ಆಸಕ್ತಿ ತೋರಿಲ್ಲ. ಘಟನೆಗೆ ಕಾರಣ ಇನ್ನೂ ನಿಗೂಢವಾಗಿದೆ. ಬೋಟ್ ಗುರುತಿಸಲಾಗಿದೆ. ಘಟನೆಯ ಹಿನ್ನೆಲೆ ತಿಳಿದು ಬಂದಿಲ್ಲ. ಪ್ರಾಯಶಃ ಯಾವುದೇ ಅವಘಡದಲ್ಲಿ ಆಗಿರಬಹುದು. ಯಾರು ಕೂಡ ಹತ್ಯೆ ನಡೆಸಿರುವ ಘಟನೆ ಇದಲ್ಲ” ಎಂದರು.

ನೌಕಾಪಡೆಯವರು ಆಗಾಗ ಮೀನುಗಾರರ ಮೇಲೆ ಹಲ್ಲೆ ನಡೆಸುತ್ತಿದ್ದಾರೆಂಬ ಪತ್ರಕರ್ತರ ಪ್ರಶ್ನೆಗೆ, “ದೇಶದ ಭದ್ರತೆಗೆ ನೌಕಾನೆಲೆಯೂ ಮಹತ್ವ, ಮೀನುಗಾರರು ಕೂಡ ಅಷ್ಟೇ ಮಹತ್ವ. ಎರಡನ್ನೂ ಸಮತೋಲನದಲ್ಲಿ ಕಾಣಬೇಕಿದೆ. ಹೀಗಾಗಿ ಈ ಬಗ್ಗೆ ಒಮ್ಮೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ಮಾಡುತ್ತೇವೆ. ಚುನಾವಣೆಯಾದ ಬಳಿಕ ನಾನೇ ಖುದ್ದಾಗಿ ಶಾಸಕಿಯೊಂದಿಗೂ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ” ಎಂದರು.

Exit mobile version