Site icon Vistara News

Karnataka Election : ಇದು ಧರ್ಮ ಮತ್ತು ಹಣದ ನಡುವಿನ ಚುನಾವಣೆ; ಮಾಜಿ ಸಚಿವ ಸಂತೋಷ್‌ ಲಾಡ್‌

#image_title

ಮುಂಡಗೋಡ: ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆ ಎಲ್ಲೆಡೆ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ. ಮುಂಡಗೋಡದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಸಂತೋಷ್ ಲಾಡ್‌ ಅವರು‌, “ಈ ಬಾರಿಯ ಚುನಾವಣೆಯು ಹಣ ಮತ್ತು ಧರ್ಮದ ನಡುವಿನ ಚುನಾವಣೆ” ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಗುರುವಾರ ಅವರು ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. “ಗಾಂಧಿಗಿರಿ ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಬಹುಮತದಿಂದ ಆಯ್ಕೆ ಮಾಡಿ. ಪಕ್ಷದ ಕಾರ್ಯಕರ್ತರು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಬಿಜೆಪಿಯವರು ಪ್ರಚಾರ ಮಾಡುತ್ತಾರೆ ಆದರೆ ಅಭಿವೃದ್ಧಿ ಮಾತ್ರ ಏನೂ ಇಲ್ಲ. ಟಿವಿ, ಪತ್ರಿಕೆ ಮೂಲಕ ಪ್ರಚಾರ ಮಾಡಿ ಆಮೇಲೆ ದುಡ್ಡಿನ ಮೂಲಕ ಮತದಾರರನ್ನು ಹಾದಿ ತಪ್ಪಿಸುತ್ತಾರೆ. ಸಾವಿರಾರು ಕೋಟಿ ಹಣ ಖರ್ಚು ಮಾಡಿ ಚುನಾವಣೆ ಮಾಡುತ್ತಾರೆ. ಅವರ ಬಳಿ ಬೇರೇನೂ ಮಂತ್ರವಿಲ್ಲ” ಎಂದು ಅವರು ದೂರಿದರು.

“ಕೇಂದ್ರದಲ್ಲಿ ಮೋದಿಯವರ ಸರ್ಕಾರ 9 ವರ್ಷ ಅವಧಿಯಲ್ಲಿ ಒಂದು ರೂಪಾಯಿ ಸಾಲ ಮನ್ನಾ ಮಾಡಲಿಲ್ಲ. ಆದರೆ ಮನಮೋಹನ್ ಸಿಂಗ್ ಸರ್ಕಾರದಲ್ಲಿ 73 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರವಿದ್ದಾಗ 8500 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಬಿಜೆಪಿ ಕೋವಿಡ್, ಅತಿವೃಷ್ಟಿ, ಅನಾವೃಷ್ಟಿ ಪರಿಹಾರ ನೀಡಲಿಲ್ಲ. ಆದರೆ, ಕಾಂಗ್ರೆಸ್‌ನಿಂದ ಈಗಾಗಲೇ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ನೀಡಲಾಗಿದೆ. ಪ್ರತಿಯೊಂದು ಮನೆಗೂ ಐದು ಸಾವಿರ ರೂ.ಗಳಷ್ಟು ಸವಲತ್ತುಗಳನ್ನು ಒದಗಿಸಲಾಗುವುದು” ಎಂದು ಅವರು ಹೇಳಿದರು.

ಹಾಗೆಯೇ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಪಾಟೀಲ್ ಅವರ ಬಗ್ಗೆ ಮಾತನಾಡಿದ ಅವರು, “ಹಲವಾರು ಜನಪರ ಕಾರ್ಯ ಮಾಡಿರುವ ವಿ.ಎಸ್.ಪಾಟೀಲ ಸರಳ ಸಜ್ಜನಿಕೆ ವ್ಯಕ್ತಿ. ನಿಮ್ಮ ಮತ ಅವರಿಗೆ ನೀಡುವ ಮೂಲಕ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿ ಕೊಡಬೇಕು. ನಮ್ಮ ಭಾಷಣ ಕೇಳಿ ಚಪ್ಪಾಳೆ ತಟ್ಟಿದರೆ ಸಾಲದು” ಎಂದರು.

ಇದನ್ನೂ ಓದಿ: Karnataka Election: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮೇಲೆ ಕಲ್ಲೆಸೆತ; ತಲೆಗೆ ಗಂಭೀರ ಗಾಯ

ಅಭ್ಯರ್ಥಿ ವಿ.ಎಸ್.ಪಾಟೀಲ ಮಾತನಾಡಿ, “ಅಭಿವೃದ್ಧಿ ನಿರಂತರ. ಹಣ ಬಲವೋ ಜನ ಬಲವೋ ಎಂಬ ಚುನಾವಣೆ ನಡೆಯಲಿದೆ. 40 ಪರ್ಸೆಂಟ್ ಸರ್ಕಾರವೆಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ. ಭಗೀರಥ ಎಂದು ಹೇಳಲಾಗುತ್ತಿದ್ದ ಕ್ಷೇತ್ರದಲ್ಲಿ ಕೆರೆಯಲ್ಲಿ ನೀರೇ ಇಲ್ಲ. ರೈತರ ಜೇಬಿನಲ್ಲಿ ನೀರು ತುಂಬಿಸಿದ್ದಾರೆ. ಕರೋನಾ ಬಂದಾಗ ಅವರಿಗೆ ಹಬ್ಬದ ವಾತಾವರಣ. ಕಿಟ್‌ನಲ್ಲಿಯೂ ಪರ್ಸೆಂಟೇಜ್ ಹೊಡೆದರು. ಪ್ರತಿಯೊಂದರಲ್ಲಿನ ನಿಮ್ಮ ಜಿ.ಎಸ್.ಟಿ. ಹಣವನ್ನೇ ನಿಮಗೆ ಕೊಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಿಂದ ಬಂದರೆ ಯೋಜನೆಗಳ ಪ್ರಯೋಜನ ಪಡೆಯಬಹುದು. ಬಂದ ಅನುದಾನ ನೇರವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಬಳಸಲಾಗುವುದು” ಎಂದರು.

ಇದಕ್ಕೂ ಮುನ್ನ ವಿ.ಎಸ್.ಪಾಟೀಲ ಮತ್ತು ಸಂತೋಷ ಲಾಡ್ ಅವರನ್ನು ಡೊಳ್ಳಿನ ಮೆರವಣಿಗೆಯೊಂದಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ನಂತರ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ ಬ್ಲಾಕ್ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಎಚ್.ಎಮ್.ನಾಯ್ಕ, ಮರಿಯೋಜಿರಾವ್, ಎಮ್.ಎನ್.ದುಂಡಶಿ, ಬಸವರಾಜ ನಡುವಿನಮನಿ, ನಿಂಗಜ್ಜ ಕೋಣನಕೇರಿ, ಗ್ರಾ.ಪಂ. ಉಪಾಧ್ಯಕ್ಷೆ ಗಂಗವ್ವ, ರಾಮಕೃಷ್ಣ ಮೂಲಿಮನಿ, ಬಾಪೂಗೌಡ ಪಾಟೀಲ, ಕೃಷ್ಣ ಹಿರೇಹಳ್ಳಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Exit mobile version