ಸಿದ್ದಾಪುರ: ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ (Karnataka Election) ಕಾಲಿಟ್ಟಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈಗಾಗಲೇ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಇದೀಗ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಸಿದ್ದಾಪುರ ತಾಲೂಕಿನ ವಿವಿಧೆಡೆ ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡಿನಿಂದ ರೋಡ್ ಶೋ ಆರಂಭವಾಗಿದ್ದು, ಶಿವರಾಜಕುಮಾರ ಕಾನಗೋಡಿಗೆ ಆಗಮಿಸುತ್ತಿದ್ದಂತೆ ನೆರೆದ ಸಾವಿರಾರು ಜನ ಶಿವಣ್ಣ ಹಾಗೂ ಭೀಮಣ್ಣ ಪರ ಘೋಷಣೆ ಕೂಗಿದರು. ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಅಭಿಮಾನಿಗಳ ಪ್ರೀತಿಗೆ ತಲೆಬಾಗಿದ ಶಿವರಾಜ್‌ಕುಮಾರ ಅವರು ಜನರತ್ತ ಕೈಬೀಸಿದರು. ಆಗ ಜನರ ಜಯಘೋಷ ಮುಗಿಲು ಮುಟ್ಟಿತ್ತು.
ಕಾನಗೋಡನಿಂದ ಆರಂಭವಾದ ಮೆರವಣಿಗೆ ಕೊಂಡ್ಲಿ, ಹಾಳದಕಟ್ಟಾ, ಸಿದ್ದಾಪುರ ಪಟ್ಟಣದ ರಾಜಮಾರ್ಗವಾಗಿ ವಿವಿಧೆಡೆ ಸಂಚರಿಸಿತು. ಶಿವರಾಜ್‌ಕುಮಾರ ಜತೆ ಪತ್ನಿ ಗೀತಾ ಶಿವರಾಜಕುಮಾರ, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮತ್ತಿತರರು ಸಾಥ್ ನೀಡಿದರು.