Site icon Vistara News

Karnataka Election: ಸಿಗದ ಮೂಲಭೂತ ಸೌಲಭ್ಯ; ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ ಮಸ್ತಾನೆ ಗ್ರಾಮಸ್ಥರು

#image_title

ಸಿದ್ದಾಪುರ: ವಿಧಾನಸಭಾ ಚುನಾವಣೆ (Karnataka Election) ಸನ್ನಿಹಿತವಾಗುತ್ತಿರುವಂತೆಯೇ ಎಲ್ಲ ಪಕ್ಷಗಳು ಭಾರೀ ಪ್ರಚಾರ ನಡೆಸುತ್ತಿವೆ. ಇದರ ಮಧ್ಯೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಸ್ತಾನೆ ನಿವಾಸಿಗಳು ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಗ್ರಾಮಕ್ಕೆ ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳು ಸರಿಯಾಗಿ ಸಿಗದ ಹಿನ್ನೆಲೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಊರಿನ ಮುಖ್ಯದ್ವಾರದಲ್ಲಿಯೇ ಚುನಾವಣೆ ಬಹಿಷ್ಕಾರದ ಬಗ್ಗೆ ಬ್ಯಾನರ್‌ ಹಾಕಿದ್ದಾರೆ.

ತಾಲೂಕಿನ ಹಲಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಡ್ಕಣಿ ಗ್ರಾಮದ ಮಸ್ತಾನೆ ನಿವಾಸಿಗಳು ಈ ಬಾರಿಯ ಚುನಾವಣೆಯಲ್ಲಿ ಮತದಾನವನ್ನು ಮಾಡುವುದಿಲ್ಲ ಎಂದು ಊರು ಪ್ರವೇಶಿಸುವ ಪ್ರವೇಶ ದ್ವಾರದ ಬಳಿ ಬ್ಯಾನರ್ ಹಾಕಿದ್ದಾರೆ. ಮಾವಿನಗುಂಡಿ-ಗೇರುಸೊಪ್ಪ ಮುಖ್ಯರಸ್ತೆಯಿಂದ ಎರಡುವರೆ ಕಿಲೋ ಮೀಟರ್ ರಸ್ತೆ ದುರಸ್ತಿ ಮಾಡಿಕೊಡುವಂತೆ ಹತ್ತಾರು ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದು, ಪ್ರತಿ ಬಾರಿಯೂ ರಸ್ತೆ ಮಾಡಲಾಗುವುದು ಎಂದು ಭರವಸೆ ನೀಡಿ ಕಳುಹಿಸಲಾಗುತ್ತಿದೆಯೇ ವಿನಃ ಕೆಲಸವಾಗಿಲ್ಲ. ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಪೊಳ್ಳು ಭರವಸೆಯಿಂದ ಬೇಸತ್ತ ನಾವು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡದೇ ದೂರ ಉಳಿಯುವುದಾಗಿ ಅವರು ತಿಳಿಸಿದ್ದಾರೆ.


“ಮಸ್ತಾನೆಯಲ್ಲಿ 30 ಮನೆಗಳಿಂದ 120ಕ್ಕೂ ಅಧಿಕ ಮತದಾರರಿದ್ದು, ದೇಶಕ್ಕೆ ನಾಲ್ವರು ಸೈನಿಕರನ್ನು ನೀಡಿದ ಊರಿಗೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ರಸ್ತೆ ಹಾಗೂ ಇನ್ನಿತರ ಯಾವುದೇ ಮೂಲಭೂತ ಸೌಲಭ್ಯ ದೊರಕಿಲ್ಲ. ಚುನಾವಣೆ ಬಂದಾಗ ಮಾತ್ರ ಮತ ಕೇಳಿ ಭರವಸೆ ನೀಡಿ ಹೋಗುವುದು ಬಿಟ್ಟರೆ ಸರ್ಕಾರದ ಬಿಡಿಗಾಸು ಅನುದಾನವು ನಮ್ಮೂರಿಗೆ ಬಂದಿಲ್ಲ. ಹತ್ತಾರು ವರ್ಷಗಳಿಂದ ಭರವಸೆ ಮಾತು ಕೇಳಿ ಕೇಳಿ ಸುಸ್ತಾದ ನಾವುಗಳು ಮೇ 10 ರಂದು ನಡೆಯಲಿರುವ ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ” ಎಂದು ಊರಿನ ದ್ಯಾವಪ್ಪ ನಾಯ್ಕ ತಿಳಿಸಿದರು.

ಇದನ್ನೂ ಓದಿ: Karnataka election 2023: ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಕಾಂಗ್ರೆಸ್‌ಗೆ ಗುಡ್ ಬೈ; ಜೆಡಿಎಸ್‌ ಸೇರ್ಪಡೆ

ಈ ವೇಳೆ ಮಸ್ತಾನೆಯ ಲೋಕೇಶ ನಾಯ್ಕ, ಬಲವೀಂದ್ರ ನಾಯ್ಕ, ಶಿವಾನಂದ ನಾಯ್ಕ, ಮಂಜುನಾಥ ನಾಯ್ಕ, ಲೋಕೇಶ ಟಿ. ನಾಯ್ಕ, ಮಂಜುನಾಥ ಟಿ. ನಾಯ್ಕ, ಗಣಪತಿ ನಾಯ್ಕ, ಧರ್ಮರಾಜ ನಾಯ್ಕ, ಸದಾಶಿವ ನಾಯ್ಕ, ಭಾಸ್ಕರ ನಾಯ್ಕ, ರತ್ನಾಕರ ನಾಯ್ಕ, ಉದಯ ನಾಯ್ಕ, ಕನ್ನಪ್ಪ ನಾಯ್ಕ ಉಪಸ್ಥಿತರಿದ್ದರು.

Exit mobile version