ಯಲ್ಲಾಪುರ: ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು ತಾಲೂಕಿನ ಇಬ್ಬರು ಸೇರಿದಂತೆ ಜಿಲ್ಲೆಯ ಒಟ್ಟು ಮೂವರು ಕಲಾವಿದರು ಪ್ರಶಸ್ತಿಗೆ (Karnataka Nataka Akademi Award) ಭಾಜನರಾಗಿದ್ದಾರೆ.
ತಾಲೂಕಿನ ಮಂಚಿಕೇರಿಯ ಗಿರಿಜಾ ಸಿದ್ದಿ, ಬಾಚನಳ್ಳಿ ಗ್ರಾಮದ ಸುರೇಶ ರಾಮಚಂದ್ರ ಸಿದ್ದಿ ಹಾಗೂ ನಿವೃತ್ತ ಶಿಕ್ಷಕ ಮಂಜುನಾಥ ತಿಮ್ಮಣ್ಣ ಭಟ್ಟ ಅವರ ಕಲಾ ಸೇವೆಯನ್ನು ಗಮನಿಸಿ, ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ಗಿರಿಜಾ ಸಿದ್ದಿ
ಮಂಚಿಕೇರಿಯ ಅಣಲೇಸರ ಗ್ರಾಮದ ಗಿರಿಜಾ ಸಿದ್ದಿ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪರಶುರಾಮ ಗಿರಗೋಲಿ ಸಿದ್ದಿ ಹಾಗೂ ಲಕ್ಷ್ಮಿ ಸಿದ್ದಿಯವರ ಪುತ್ರಿಯಾಗಿದ್ದಾರೆ. ನೀನಾಸಮ್ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ಪಡೆದ ಸಿದ್ದಿ ಸಮುದಾಯದ ಪ್ರಥಮ ಮಹಿಳೆಯಾಗಿ ಹೊರಹೊಮ್ಮಿದರು. ಎರಡು ವರ್ಷಗಳ ಕಾಲ ನೀನಾಸಮ್ ತಿರುಗಾಟದ ನಟಿಯಾಗಿ, ವಸ್ತ್ರ ವಿನ್ಯಾಸಕಿಯಾಗಿ ಹಿನ್ನಲೆ ಗಾಯಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ರಂಗಭೂಮಿಯ ಹಲವು ವಿಭಾಗಗಳಾದ ವಸ್ತ್ರ ವಿನ್ಯಾಸ, ರಂಗ ಸಜ್ಜಿಕೆ, ಪ್ರಸಾಧನ, ಮುಂತಾದವುಗಳಲ್ಲಿ ಹಲವು ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ದುಡಿಯುತ್ತಿದ್ದಾರೆ.
ಕನ್ನಡ ಸಿನಿಮಾ ಲೋಕದಲ್ಲಿಯೂ ಸಹ ತಮ್ಮನ್ನು ತಾವು ತಮ್ಮ ಗಾಯನದೊಂದಿಗೆ ಗುರುತಿಸಿಕೊಂಡಿದ್ದಾರೆ. ದುನಿಯಾ ವಿಜಯ ನಿರ್ದೇಶನದ ‘ಸಲಗ’, ಪ್ರಿಯಾಂಕ ಉಪೇಂದ್ರ ನಟನೆಯ “ಉಗ್ರಾವತಾರ’ ಇತ್ತೀಚೆಗೆ ಬಿಡುಗಡೆಯಾದ “ಬ್ಲಿಂಕ್” ಸಿನಿಮಾಗಳಲ್ಲಿ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಸಲಗ ಸಿನಿಮಾದ ‘ಟಿಣಿಂಗ್ ಮಿಣಿಂಗ್ ಟಿಶ್ಯ’ ಮತ್ತು ಉಗ್ರಾವತಾರ ಸಿನಿಮಾದ ‘ಬರ್ತಾಳ್ ಬರ್ತಾಳ್’ ಹಾಡಿಗೆ ಚಂದನವನ ಉತ್ತಮ ಗಾಯಕಿ ಪ್ರಶಸ್ತಿಗಳು ದೊರೆತಿವೆ.
ಸುರೇಶ ರಾಮಚಂದ್ರ ಸಿದ್ದಿ
ಸುರೇಶ ರಾಮಚಂದ್ರ ಸಿದ್ದಿ ಅವರು ಮಂಚಿಕೇರಿಯ ಬಾಚನಳ್ಳಿ ಗ್ರಾಮದ ಇವರ ತಂದೆ ರಾಮಚಂದ್ರ ಪುಟ್ಟಾ ಸಿದ್ದಿ ಸಣ್ಣಾಟದ ಕಲಾವಿದರಾಗಿದ್ದರಿಂದ ಅವರಿಂದ ಬಳುವಳಿಯಾಗಿ ಕುಣಿತ, ಸಂಗೀತ, ವಾದ್ಯ ನುಡಿಸುವಿಕೆಯನ್ನು ಕಲಿತರು. ಕೌಟುಂಬಿಕ ಮತ್ತು ಆರ್ಥಿಕ ಸಮಸ್ಯೆಯಿಂದ ಶಾಲೆಯ ಮೆಟ್ಟಿಲನ್ನೇ ಹತ್ತದ ಇವರು ತಮ್ಮ ಚಿಕ್ಕ ವಯಸ್ಸಿನಿಂದ ಕೃಷಿಯೊಂದಿಗೆ ಸಂಗ್ಯಾ-ಬಾಳ್ಯಾದ ನಟರಾಗಿ ಮತ್ತು ಹಿಮ್ಮೇಳದ ಭಾಗವತರಾಗಿದ್ದಾರೆ.
ಕರ್ನಾಟಕದ ಪ್ರಮುಖ ನಿರ್ದೇಶಕರ ನಾಟಕಗಳಲ್ಲಿ ನಟರಾಗಿ, ವಾದಕರಾಗಿ ಕೆಲಸ ಮಾಡಿದ್ದಾರೆ. ಸಿದ್ದಿ ಡಮಾಮಿ ವಾದಕರಾಗಿ ಕರ್ನಾಟಕದ ಹಲವಾರು ಕಡೆ ತಮ್ಮ ತಂಡದ ಮೂಲಕ ಪ್ರದರ್ಶನ ನೀಡಿದ್ದಾರೆ. ಅವರು ಕಾಕನಕೋಟೆ, ಅಗ್ನಿವರ್ಣ, ಸತ್ತವರ ಕಥೆ ಅಲ್ಲ, ಮಿಸ್ಟರ್ ಪುಂಟಿಲಾ, ಕೋಟೆಮನೆ ಪೊಲೀಸ್ ಸ್ಟೇಷನ್, ಚೋರಚರಣದಾಸ, ತ್ರಿಪೆನ್ನಿ ಓಪೇರಾ, ಕಂತು, ಬೆಟ್ಟದ ಅರಸು, ಸೂರ್ಯಶಿಕಾರಿ ಮುಂತಾದ ಪ್ರಮುಖ ನಾಟಕಗಳಲ್ಲಿ ನಟರಾಗಿ ಹಾಗೂ ವಾದಕರಾಗಿ ಕೆಲಸ ಮಾಡಿದ್ದಾರೆ. ಹವ್ಯಾಸಿ ರಂಗಭೂಮಿಯಲ್ಲಿ ನಟರಾಗಿಯೂ, ವಾದಕರಾಗಿಯೂ ಕಾರ್ಯ ನಿರ್ವಹಿಸುತ್ತಾ, ತಮ್ಮ ಕುಟುಂಬದೊಂದಿಗೆ ಕೃಷಿ ಕಾಯಕ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ಮಂಜುನಾಥ ತಿಮ್ಮಣ್ಣ ಭಟ್ಟ
1944 ರಲ್ಲಿ ಜನಿಸಿದ ಮಂಜುನಾಥ ತಿಮ್ಮಣ್ಣ ಭಟ್ಟ ಅವರು, 33 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 5ನೇ ತರಗತಿಯಲ್ಲಿದ್ದಾಗ ರಂಗಭೂಮಿಗೆ ಪ್ರವೇಶಿಸಿ 20ಕ್ಕೂ ಅಧಿಕ ಏಕಾಂಕ ನಾಟಕಗಳಲ್ಲಿ ಅಭಿನಯ ಮಾಡಿರುತ್ತಾರೆ. ಹೊನ್ನಾವರದ ನವಿಲಗೋಣ ಗ್ರಾಮದ ಪ್ರಸಿದ್ಧ ನಾಟಕಕಾರರಾದ ರಾಮಚಂದ್ರ ಗಣೇಶ ಭಟ್ಟರಮಕ್ಕಿ ಇವರ ಶಿಷ್ಯರಾಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
ರಂಗ ನಟ, ನಿರ್ದೇಶಕರಲ್ಲದೇ ‘ಸ್ತ್ರೀ’ ವೇಷದಲ್ಲಿ ಕೂಡ ತಾಯಿ ಪಾತ್ರವನ್ನು ಹಲವಾರು ನಾಟಕಗಳಲ್ಲಿ ನಿರ್ವಹಿಸಿದ್ದಾರೆ. ಕಥಾನಾಯಕ, ಖಳನಾಯಕ, ಹಾಸ್ಯಪಾತ್ರ, ಪೋಷಕ ಪಾತ್ರ ಹೀಗೆ ಹಲವಾರು ವಿಭಿನ್ನ ಪಾತ್ರಗಳಲ್ಲಿ ಮತ್ತು ವಿಭಾಗಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಈ ಮೂವರ ಸಾಧನೆಗೆ ಮಂಚಿಕೇರಿ ರಂಗಸಮೂಹದ ಅಧ್ಯಕ್ಷ ರಾಮಕೃಷ್ಣ ಭಟ್ಟ ದುಂಡಿ, ಕಲಾವಿದ ಎಂ.ಕೆ. ಭಟ್ ಯಡಳ್ಳಿ ಹಾಗೂ ರಂಗ ಸಮೂಹದ ಎಲ್ಲ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.