Site icon Vistara News

ಸಂಸ್ಕೃತ ವಿವಿ ಘಟಿಕೋತ್ಸವ; ಶ್ರೀ ಮಾತಾ ಮಹಾಪಾಠ ಶಾಲಾ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ

karnataka sanskrit university

ಶಿರಸಿ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 9ನೇ ದೀಕ್ಷಾಂತರ ಘಟಿಕೋತ್ಸವದಲ್ಲಿ ಶ್ರೀ ಮಾತಾ ಮಹಾಪಾಠ ಶಾಲಾ ವಿದ್ಯಾರ್ಥಿಗಳ ಸಾಧನೆಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರತಿಷ್ಠಿತ ಸಂಸ್ಕೃತ ಕಾಲೇಜುಗಳಲ್ಲೊಂದಾದ ಶ್ರೀ ಮಾತಾ ಕಾಲೇಜಿನ ಜ್ಯೋತಿಷ ವಿದ್ಯಾರ್ಥಿಗಳು ಎಂಎ ಮತ್ತು ಬಿಎ ಪದವಿ ಪರೀಕ್ಷೆಗಳಲ್ಲಿ ರಾಜ್ಯದಲ್ಲಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆ ಗೊಂಡು ಉಪರಾಷ್ಟ್ರ ಪತಿಗಳಿಂದ ಸುವರ್ಣ ಪದಕ ಮತ್ತು ಇನ್ಫೋಸಿಸ್‌ ಸಂಸ್ಥೆಯು ಕೊಡುವ ವಿಶೇಷ ಪುರಸ್ಕಾರವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಂದ ವಿಶೇಷ ಪುರಸ್ಕಾರ ಪಡೆಯುತ್ತಿರುವ ಗಣೇಶ್‌ ಪ್ರಸಾದ್‌

ಶಾಲೆಯ ವಿದ್ಯಾರ್ಥಿ ಮಂಜುನಾಥ್ ಗಾವ್ಕಾರ್ ಎಂಎಯಲ್ಲಿ ಸರ್ವಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕವನ್ನು ಪಡೆದಿದ್ದರೆ, ಗುರುಪ್ರಸಾದ ಹೆಗಡೆ ಮತ್ತು ಗಣೇಶ್ ಪ್ರಸಾದ್ ಇವರು ಇನ್ಫೋಸಿಸ್‌ ವಿಶೇಷ ಪುರಸ್ಕಾರವನ್ನು ಪಡೆದಿದ್ದಾರೆ. ಮಂಜುನಾಥ್ ಗಾವ್ಕಾರ್ 2017ರಲ್ಲಿ ಬಿಎ ಮೊದಲವರ್ಷದಲ್ಲಿ ಲೀಲಾವತಿ ಗಣಿತ ಶಾಸ್ತ್ರ ದಲ್ಲಿ 100ಕ್ಕೆ ನೂರು ಅಂಕಗಳಿಸಿ ದಾಖಲೆಯನ್ನು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಂದ ವಿಶೇಷ ಪುರಸ್ಕಾರ ಪಡೆಯುತ್ತಿರುವ ಗುರುಪ್ರಸಾದ್‌

ಜುಲೈ ೯ ರಂದು ರಾಜಭವನದ ಗಾಜಿನಮನೆಯಲ್ಲಿ ಈ ಘಟಿಕೋತ್ಸವ ನಡೆದಿದೆ. ಈ ಸಂದರ್ಭದಲ್ಲಿ ವಿವಿಯ ದಶಮಾನೋತ್ಸವ ಕಾರ್ಯಕ್ರಮಗಳನ್ನೂ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಉದ್ಘಾಟಿಸಿದ್ದಾರೆ. ಅವರು ಈ ಸಂದರ್ಭದಲ್ಲಿ ಮಾತನಾಡಿ, ಸಂಸ್ಕೃತ ಭಾಷೆ ನಮ್ಮ ದೇಶದ ಪರಂಪರೆ, ದೇಶದ ಆತ್ಮವನ್ನು ತಿಳಿಯಲು ನೆರವಾಗುವ ಭಾಷೆ. ಇಂತಹ ಭಾಷೆಯ ಕಲಿಕೆಯನ್ನು ಪುನರುಜ್ಜೀವನಗೊಳಿಸಲು ಭಾಷಾ ಪಂಡಿತರು, ಸಾಹಿತಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಾಮೂಹಿಕ ಆಂದೋಲನ ನಡೆಸಬೇಕು ಎಂದು ಕರೆ ನೀಡಿದ್ದರು.

ಈ ಘಟಿಕೋತ್ಸವದಲ್ಲಿ ಹಿರಿಯ ವಿದ್ವಾಂಸರಾದ ಆಚಾರ್ಯ ಪ್ರದ್ಯುಮ್ನ, ಡಾ.ವಿ.ಎಸ್‌.ಇಂದಿರಮ್ಮ ಮತ್ತು ವಿದ್ವಾನ್‌ ಉಮಾಕಾಂತ್‌ ಭಟ್‌ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಇ.ದೇವನಾಥನ್‌ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ| ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಚಿನ್ನದ ಪದಕ ಪಡೆದ ಡಾ.ಕುಮುದಾ ಹೆಗಡೆ

Exit mobile version