ಕಾರವಾರ: ಈ ಸಾಲಿನ ವಿಧಾನಸಭಾ ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರವಾರದಲ್ಲಿ ಶನಿವಾರ ಸರ್ಕಾರಿ ನೌಕರರ ಬೈಕ್ ಜಾಥಾ (Karwar News) ನಡೆಸಲಾಗಿದೆ. ಚುನಾವಣೆಗೆ ಜಿಲ್ಲೆಯಾದ್ಯಂತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದೊಡ್ಡ ಮಟ್ಟದಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ಯೋಜನೆಯಡಿಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನೌಕರರ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಈಗಾಗಲೇ ಕಳೆದ 2-3 ತಿಂಗಳಿಂದ ಗ್ರಾಮ ಪಂಚಾಯಿತಿ ಹಂತದಿಂದ ಜಿಲ್ಲಾ ಮಟ್ಟದವರೆಗೆ ಸ್ವೀಪ್ ಚಟುವಟಿಕೆಯುಳ್ಳ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗಿದೆ. ಹಾಗೆಯೇ ಈ ಚುನಾವಣೆಯಲ್ಲಿ 80 ವರ್ಷ ಪೂರೈಸಿದ ಹಿರಿಯ ನಾಗರಿಕರಿಗೆ ಅಂಚೆ ಮತದಾನ ಹಮ್ಮಿಕೊಂಡಿದ್ದು, ಅಂಚೆ ಮತದಾನದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಎಲ್ಲ ಕ್ರಮ ವಹಿಸಲಾಗಿದೆ” ಎಂದರು.
ಇದನ್ನೂ ಓದಿ: Karwar News: ಕಾರವಾರದ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಭೋವಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ
ಬಳಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಕಾಂದೂ ಮಾತನಾಡಿ, “ಜನರಲ್ಲಿ ಮತದಾನದ ಅರಿವು ಮೂಡಿಸಲು ಈಗಾಗಲೇ ಗ್ರಾಮೀಣ ಪ್ರದೇಶದ ಸಂತೆಗಳಲ್ಲಿ, ಯಕ್ಷಗಾನ, ಜಾತ್ರೆಗಳಂತಹ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಮತದಾನದ ಅರಿವು ಮೂಡಿಸಲು ಕ್ರಮ ವಹಿಸಿದೆ” ಎಂದರು.
ಬೈಕ್ ಜಾಥಾವು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಈಶ್ವರ್ ಕುಮಾರ ಕಾಂದೂ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಿಂದ ಹೊರಟು ಸುಭಾಷ್ ಚಂದ್ರ ಬೋಸ್ ಸರ್ಕಲ್, ಸವಿತಾ ಹೋಟೆಲ್ ಸರ್ಕಲ್, ಕಾಜುಬಾಗ್ ರೋಡ್ ಮುಖಾಂತರ ಕಾಳಿ ನದಿ ಗಾರ್ಡನ್ ಮೂಲಕ ಹಾಯ್ದು ಕಾಪ್ರಿ ದೇವಸ್ಥಾನ ಮೂಲಕ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಹತ್ತಿರ ಮುಕ್ತಾಯಗೊಂಡಿತ್ತು.
ಇದನ್ನೂ ಓದಿ: ಈಗ ಕಾರವಾರ, ಹಾವೇರಿ, ರಾಣೆಬೆನ್ನೂರು ನಗರಗಳಲ್ಲಿ Jio True 5G ಸೇವೆ ಲಭ್ಯ
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.