ಕಾರವಾರ: “ಸಾಗರಮಾಲಾ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ 20 ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಅಲ್ಲದೇ ಇನ್ನೂ 40 ಯೋಜನೆಗಳು ಜಾರಿಗೊಳ್ಳಲಿವೆ” ಎಂದು ಕರ್ನಾಟಕ ಮೆರಿಟೈಮ್ ಬೋರ್ಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಪಿಲ್ ಮೋಹನ್ ಹೇಳಿದರು.
ನಗರದ ಅಲಿಗದ್ದಾದ ಜಲ ಸಾರಿಗೆ ಮಂಡಳಿ ಕಚೇರಿಯ ಆವರಣದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಮೆರಿಟೈಮ್ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: Karwar News: ಕಾರವಾರದಲ್ಲಿ ಸರ್ಕಾರಿ ನೌಕರರ ಬೈಕ್ ಜಾಥಾ; ಚುನಾವಣೆಗೆ ಸಿದ್ಧ ಎಂದ ಜಿಲ್ಲಾಡಳಿತ
“ಖಾಸಗಿ ಬಂಡವಾಳದಿಂದ ಬೇರೆ ರಾಜ್ಯದಲ್ಲಿ ಉತ್ತಮವಾದ ಅಭಿವೃದ್ಧಿಗಳಾಗಿವೆ. ಆದರೆ ಕರ್ನಾಟಕದಲ್ಲಿ ಯಾವುದೇ ಹೊಸ ಬಂದರು ಸ್ಥಾಪನೆ ಮಾಡಿಲ್ಲ. ರಸ್ತೆ, ರೈಲ್ವೆ ಮಾರ್ಗಗಳನ್ನು ಗಮನದಲ್ಲಿಟ್ಟುಕೊಂಡು ಸಾಗರ ಮಾಲಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಯಾವುದೇ ಯೋಜನೆಗಳು ಸರ್ಕಾರದಿಂದ ಮಾತ್ರ ಸಫಲವಾಗುವುದಿಲ್ಲ. ಸ್ಥಳೀಯರ ಬೆಂಬಲವೂ ಅಗತ್ಯವಿರುತ್ತದೆ. ದೇಶವು ಉತ್ತಮ ಜಲಸಾರಿಗೆ ವ್ಯವಸ್ಥೆ ಹೊಂದಿದೆ. ಜತೆಗೆ ಸಿಬ್ಬಂದಿಯ ಉತ್ತಮ ಕಾರ್ಯಕ್ಷಮತೆಯಿಂದ ಇಂದು ದೇಶದ ಆರ್ಥಿಕತೆಯಲ್ಲಿ ಪಾಲುದಾರರಾಗಲು ಸಾಧ್ಯವಾಗಿದೆ” ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, “ಯೋಜನೆಗಳಿಗೆ ಸ್ಥಳೀಯವಾಗಿ ಸಹಾಯ ಮಾಡಲು ಜಿಲ್ಲಾಡಳಿತ ಸಿದ್ಧವಿದೆ. ಈಗಾಗಲೇ ಜಿಲ್ಲಾಡಳಿತ ಸುಪರ್ದಿಯಲ್ಲಿ ಬಂದರಿನಲ್ಲಿ ಸಂಗ್ರಹಿಸಲಾಗಿದ್ದ ಕಬ್ಬಿಣದ ಅದಿರಿನ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಸದ್ಯದಲ್ಲಿಯೇ ಅದನ್ನು ತೆರವುಗೊಳಿಸಲಿದ್ದೇವೆ. ಅಭಿವೃದ್ಧಿಯ ವಿಷಯದಲ್ಲಿ ಕಾಲ ಬದಲಾಗಿದ್ದು, ರಸ್ತೆ ಮಾತ್ರವಲ್ಲದೆ ಎಲ್ಲ ರೀತಿಯ ಸಾರಿಗೆ ವ್ಯವಸ್ಥೆಗಳನ್ನು ನೋಡಿ ಅಭಿವೃದ್ಧಿಯನ್ನು ಅಳೆಯಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಜಲ ಸಾರಿಗೆ ಮಂಡಳಿಯು ಉತ್ತಮ ಕೆಲಸ ಮಾಡುತ್ತಿದೆ” ಎಂದು ತಿಳಿಸಿದರು.
ಕೊಸ್ಟ್‌ಗಾರ್ಡ್‌ನ ಕಾರವಾರ ವಿಭಾಗದ ಕಮಾಂಡೆಂಟ್ ಸುರೇಶ್ ಕುರುಪ್ ಮಾತನಾಡಿ, “ಜಲ ಸಾರಿಗೆ ವಿಭಾಗದಲ್ಲಿ ಈಗಾಗಲೇ ಕರ್ನಾಟಕವು ಉತ್ತಮ ಸ್ಥಿತಿಯಲ್ಲಿದೆ. ಅದರಲ್ಲಿಯೂ ಉತ್ತರಕನ್ನಡ ಜಿಲ್ಲೆ ಉಳಿದ ಕರಾವಳಿ ಜಿಲ್ಲೆಗಳಿಗಿಂತ ಹೆಚ್ಚು ಆದಾಯ ಗಳಿಸಲಿದೆ” ಎಂದರು. ಕಾರ್ಯಕ್ರಮದಲ್ಲಿ ಕಾರವಾರ ಬಂದರಿನ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ ಮಾತನಾಡಿದರು.
ಮೈಸೂರು ಮರ್ಕಂಟೈಲ್ ಕಂಪೆನಿಗೆ ಪ್ರಶಸ್ತಿ
ಇದೇ ಸಂದರ್ಭದಲ್ಲಿ 2022-23ನೇ ಆರ್ಥಿಕ ವರ್ಷದಲ್ಲಿ ಸಾಧನೆ ಮಾಡಿದ ವಿವಿಧ ಶಿಫ್ಟಿಂಗ್ ಕಂಪೆನಿಗಳಿಗೆ ಪ್ರಶಸ್ತಿ ನೀಡಲಾಯಿತು. ಮೈಸೂರು ಮರ್ಕಂಟೈಲ್ ಕಂಪೆನಿಯು 3,67,707 ಮೆಟ್ರಿಕ್ ಟನ್ ಕಾಕಂಬಿ ಮತ್ತು 63,006 ಮೆಟ್ರಿಕ್ ಟನ್ ಬಿಟುಮಿನ್ ಸೇರಿ ಒಟ್ಟೂ 4,30,713 ಮೆಟ್ರಿಕ್ ಟನ್ ದ್ರವ ಸರಕನ್ನು ನಿರ್ವಹಣೆ ಮಾಡಿತ್ತು. ಇದು 2022-23ನೇ ಸಾಲಿನಲ್ಲಿ ಕಾರವಾರ ವಾಣಿಜ್ಯ ಬಂದರಿನಲ್ಲಿ ನಿರ್ವಹಿಸಲಾದ ಒಟ್ಟು 9,13,319 ಮೆಟ್ರಿಕ್ ಟನ್ ದ್ರವ ಸರಕಿನ ಶೇಕಡಾ 53 ರಷ್ಟಾಗಿದೆ.
ಇದನ್ನೂ ಓದಿ: Karwar News: ಕಾರವಾರದ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಭೋವಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ
ಜತೆಗೆ ಕಾರವಾರ ಬಂದರಿಗೆ ಈ ಸಾಲಿನಲ್ಲಿ ಆಗಮಿಸಿದ 148 ಸರಕು ಸಾಗಣೆ ಹಡಗುಗಳ ಪೈಕಿ 53 ಬಿಟುಮಿನ್ ಹಡಗು, 23 ಕಾಕಂಬಿ ಸರಕು ಹೊತ್ತ ಹಡಗು ಸೇರಿ ಒಟ್ಟೂ 76 ಹಡಗುಗಳನ್ನು ಮೈಸೂರು ಮರ್ಕಂಟೈಲ್ ಕಂಪೆನಿ ನಿರ್ವಹಿಸಿದ್ದು, ಬಂದರಿನ ಶೇಕಡಾ 49ರಷ್ಟು ಸರಕು ಹಡಗುಗಳ ನಿರ್ವಹಣೆಯೊಂದಿಗೆ ಅತಿ ಹೆಚ್ಚು ಸರಕು ಸಾಗಣೆ ಹಡಗುಗಳನ್ನು ನಿರ್ವಹಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಒಂದೇ ದಿನ 18,501 ಮೆಟ್ರಿಕ್ ಟನ್ ಕಾಕಂಬಿಯನ್ನು ಹಡಗಿಗೆ ತುಂಬಿಸುವ ಮೂಲಕ ಒಂದು ದಿನದಲ್ಲಿ ಅತಿ ಹೆಚ್ಚು ಲೋಡಿಂಗ್ ಮಾಡಿದ ಪ್ರಶಸ್ತಿಗೂ ಮೈಸೂರು ಮರ್ಕಂಟೈಲ್ ಕಂಪೆನಿ ಭಾಜನವಾಗಿದೆ. ಕಂಪೆನಿಯ ಕಾರವಾರ ಮುಖ್ಯಸ್ಥರಾದ ಸುರೇಶ್ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಇದೇ ವೇಳೆ ಮೆರಿಟೈಮ್ ದಿನದ ಅಂಗವಾಗಿ ಬಂದರು ಇಲಾಖೆ ನೌಕರರಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಮೆರಿಟೈಮ್ ಬೋರ್ಡ್‌ನ ಸಿಇಓ ಕಪಿಲ್ ಮೋಹನ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.