ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರಿಗಿನ ಮೇಲ್ಸೇತುವೆಗೆ ಮೇಜರ್ ರಾಮ ರಾಘೋಬಾ ರಾಣೆ (Major Ram Raghoba Rane) ಅವರ ಹೆಸರಿಡುವಂತೆ ಕೋರಿ ಜಿಲ್ಲಾ ಜನಶಕ್ತಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪರಮವೀರ ಚಕ್ರ ಪುರಸ್ಕೃತ ರಾಣೆಯವರು ಸಾಹಸಿ, ಶೌರ್ಯದ ಸೈನಿಕ ಅಧಿಕಾರಿಯಾಗಿದ್ದರು. ಇವರ ಹುಟ್ಟೂರಾದ ಕಾರವಾರದಲ್ಲಿ ಕೇವಲ ಅವರ ಪುತ್ಥಳಿ ಬಿಟ್ಟರೆ ಬೇರೇನೂ ಇಲ್ಲ. ದಿನವೂ ಜನತೆ ಇವರನ್ನು ನೆನೆಯುವಂತಾಗಬೇಕು. ಆ ಮೂಲಕ ಅವರ ಶೌರ್ಯ, ಸಾಹಸ ಯುವ ಪೀಳಿಗೆಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎದುರಿಗಿನ ಮೇಲ್ಸೇತುವೆಗೆ ‘ಮೇಜರ್ ರಾಮ ರಾಘೋಬ ರಾಣೆ ಫ್ಲೈಓವರ್’ ಎಂದು ನಾಮಕರಣ ಮಾಡುವ ಮೂಲಕ ಗೌರವ ಸಲ್ಲಿಸಬೇಕಿದೆ ಎಂದು ತಿಳಿಸಲಾಯಿತು.
ಅವರು ಕಾರವಾರದಲ್ಲಿ ಜನಿಸಿದ್ದರೂ ಕರ್ತವ್ಯದ ನಿಮಿತ್ತ ಪುಣೆಯಲ್ಲಿ ವಾಸವಿದ್ದರು. ಪುಣೆಯಲ್ಲಿ ಸರ್ಕಲ್ ಹಾಗೂ ರಸ್ತೆಗಳಿಗೆ ಅವರ ಹೆಸರಿಡಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಅಂಡಮಾನ್ ಮತ್ತು ನಿಕೋಬಾರ್‌ನ ದ್ವೀಪವೊಂದಕ್ಕೂ ಅವರ ಹೆಸರಿಟ್ಟು ಗೌರವ ಸಲ್ಲಿಸಿದೆ. ಹೀಗಿರುವಾಗ ಹುಟ್ಟೂರಿನಲ್ಲಿ ಅವರ ಹೆಸರು ಎಲ್ಲಿಯೂ ಇಲ್ಲದಿರುವುದು ಅವರಿಗೆ ಅಗೌರವ ಸಲ್ಲಿಸಿದಂತೆ ಹಾಗೂ ಅವರನ್ನು ಯುವಜನತೆ ಮರೆಯುವಂತಾಗಲಿದೆ. ಹೀಗಾಗಿ ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಯಿತು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ರಾಮ ನಾಯ್ಕ, ಬಾಬು ಶೇಖ್, ಅಲ್ತಾಫ್ ಶೇಖ್, ಸುರೇಶ್ ನಾಯ್ಕ, ಕಾಶೀನಾಥ ನಾಯ್ಕ, ಸೂರಜ್ ಕುರೂಮಕರ್, ಸಿ.ಎನ್.ನಾಯ್ಕ, ವಸಂತ ಬಾಂದೇಕರ್, ಡಿ.ಕೆ.ನಾಯ್ಕ ಇದ್ದರು.
ಇದನ್ನೂ ಓದಿ| ಪರೇಶ್ ಮೇಸ್ತ ಸಾವು | ಬಿಜೆಪಿ ಬಣ್ಣ ಬಯಲು ಮಾಡಲು ನ. 24ರಂದು ಕಾಂಗ್ರೆಸ್‌ನಿಂದ ಬೃಹತ್ ಸಮಾವೇಶ