Site icon Vistara News

Kumta News: ಮೀನು ಸಾಗಾಣಿಕೆ ವಾಹನದಲ್ಲಿ ಗೋ ಮಾಂಸ ಸಾಗಾಟ; ಅಪಘಾತದಿಂದಾಗಿ ಪ್ರಕರಣ ಬಯಲು

#image_title

ಕುಮಟಾ: ಮೀನು ಸಾಗಿಸುವ ವಾಹನದಲ್ಲಿಯೇ ಗೋ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ಕುಮಟಾದಲ್ಲಿ ಬೆಳಕಿಗೆ ಬಂದಿದೆ. ಗೋ ಮಾಂಸ ಸಾಗಿಸುತ್ತಿದ್ದ ವಾಹನವು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದಾಗಿ (Kumta News) ಈ ಅಕ್ರಮದ ವಿಚಾರ ಹೊರಬಿದ್ದಿದೆ.

ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ವಿದ್ಯುತ್ ಕಂಬಕ್ಕೆ ಮೀನು ಸಾಗಾಣಿಕೆ ಮಾಡುವ ಬೊಲೇರೊ ಗಾಡಿ ಡಿಕ್ಕಿ ಹೊಡೆದಿದ್ದು, ಪಲ್ಟಿ ಹೊಡೆದಿದೆ. ವಾಹನದ ಹಿಂಭಾಗದ ಬಾಗಿಲು ತೆರೆದು ಪರಿಶೀಲಿಸಿದಾಗ ಐಸ್ ಬಾಕ್ಸ್‌ಗಳ ಹಿಂಭಾಗದಲ್ಲಿ ಗೋ ಮಾಂಸ ಪತ್ತೆಯಾಗಿದೆ. ಸುಮಾರು 9 ಕ್ವಿಂಟಾಲ್‌ನಷ್ಟು ಗೋ ಮಾಂಸವನ್ನು ಐಸ್ ಬಾಕ್ಸ್‌ಗಳ ಹಿಂಭಾಗದಲ್ಲಿ ಬಚ್ಚಿಟ್ಟು ಸಾಗಾಣಿಕೆ ಮಾಡಲಾಗುತ್ತಿತ್ತು. ಗೋ ಮಾಂಸವನ್ನು ಶಿರಸಿಯಿಂದ ಭಟ್ಕಳಕ್ಕೆ ಸಾಗಿಸಲಾಗುತಿತ್ತು.

ವಾಹನದ ಮಾಲೀಕ ಕುಮಟಾದವರು ಎನ್ನಲಾಗಿದ್ದು, ಚಾಲಕ ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಗೋ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದ ಕುಮಟಾ ಠಾಣೆ ಪಿಎಸ್‌ಐ ಇ.ಸಿ. ಸಂಪತ್ ಅವರು, ನಿರ್ಲಕ್ಷ್ಯದ ಚಾಲನೆ ಮತ್ತು ಅಕ್ರಮ ಗೋ ಮಾಂಸ ಸಾಗಾಣಿಕೆ ಮಾಡಿದ ಆರೋಪದಡಿ ಚಾಲಕ ಮತ್ತು ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Elections : ನಿವೇದಿತ್‌ ಆಳ್ವಾಗೆ ಕುಮಟಾ ಟಿಕೆಟ್‌ ಕೊಟ್ಟರೆ ನಾವೇ ಸೋಲಿಸುತ್ತೇವೆ; ಯುವ, ಮಹಿಳಾ ಕಾಂಗ್ರೆಸ್‌

ಈ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದು, “ಮೀನು ಸಾಗಾಟದ ವಾಹನದಲ್ಲಿ ದನದ ಮಾಂಸ ಸಾಗಿಸುತ್ತಿರುವುದು ಕಂಡುಬಂದಿದೆ. ಈ ಕುರಿತು ವಿಶೇಷ ತನಿಖೆ ಮಾಡಬೇಕಾದ ಅಗತ್ಯತೆ ಇದೆ. ಮೀನಿನ ವಾಸನೆಯೊಂದಿಗೆ ಗೋಮಾಂಸ ಪತ್ತೆ ಕಷ್ಟವಾಗಲಿದೆ. ಹಾಗಾಗಿ ನೂರಕ್ಕೆ ನೂರರಷ್ಟು ನಿಯಂತ್ರಣ ಮಾಡುವುದು ಕಷ್ಟಸಾಧ್ಯ. ಸದ್ಯ ಚುನಾವಣೆ ವೇಳೆ ಮತದಾರರಿಗೆ ಆಮಿಷ ಒಡ್ಡುವ ವಸ್ತುಗಳ ಕುರಿತು ನಿಗಾ ಇರಿಸಲಾಗಿದೆ. ಹಣ, ಮದ್ಯ, ಅಕ್ಕಿ, ಬೆಲೆಬಾಳುವ ವಸ್ತುಗಳಂತಹ ಆಮಿಷವೊಡ್ಡುವ ವಸ್ತುಗಳ ಸಾಗಾಟದ ಮೇಲೆ ನಿಗಾ ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗೋಮಾಂಸ ಸಾಗಾಟದ ಕುರಿತೂ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇಂತಹ ಪ್ರಕರಣಗಳ ಮಾಹಿತಿ ಇದ್ದರೆ ಪೊಲೀಸರಿಗೆ ನೀಡಿ ಸಹಕರಿಸಿ” ಎಂದು ತಿಳಿಸಿದ್ದಾರೆ.

Exit mobile version