ಹಳಿಯಾಳ: ಕಬ್ಬು ಬೆಳೆಗೆ ನ್ಯಾಯ ಮತ್ತು ಮೌಲ್ಯಾಧಾರಿತ ದರ (FRP) ಕಡಿಮೆ ಆಗಿರುವುದರಿಂದ ರಾಜ್ಯ ಸರ್ಕಾರ ತನ್ನ ಅಧೀನದಲ್ಲಿನ ಕಬ್ಬಿಗೆ ರಾಜ್ಯದಿಂದ ಸಲಹಾ ದರ (SAP)ವನ್ನು ಹೆಚ್ಚಿಸಿ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಮುಂದಾಗಲಿ ಎಂದು ಮಾಜಿ ಸಚಿವ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.
ಶನಿವಾರ ಹಳಿಯಾಳದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಬೇಡಿಕೆಯು ನ್ಯಾಯೋಚಿತವಾಗಿದ್ದು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಪ್ರತಿನಿಧಿಗಳ ಸಭೆಯಲ್ಲಿ ರೈತಪರವಾದ ನಿರ್ಣಯ ಹೊರಹೊಮ್ಮಲಿ ಎಂದು ಹಾರೈಸಿದರು.
ಹಳಿಯಾಳ ತಾಲೂಕಿನ ಕಬ್ಬು ಬೆಳೆಗಾರರ ಬೇಡಿಕೆಗಳ ಬಗ್ಗೆ ಸಕ್ಕರೆ ಖಾತೆ ಸಚಿವರೊಂದಿಗೆ ಮತ್ತು ಸಕ್ಕರೆ ಆಯುಕ್ತರೊಂದಿಗೆ ಚರ್ಚೆ ನಡೆಸಿ ಬೇಗ ಸಮಸ್ಯೆ ಇತ್ಯರ್ಥಪಡಿಸದಿದ್ದರೆ, ಕಬ್ಬು ಬೆಳೆಗಾರರಿಗೆ ಅನ್ಯಾಯವಾಗಲಿದೆ ಎಂದು ಮನವರಿಕೆ ಮಾಡಿರುವುದಾಗಿ ತಿಳಿಸಿದರು.
ಕಳೆದ ವರ್ಷ ಪ್ರತಿ ಟನ್ ಕಬ್ಬಿಗೆ ಎಚ್ ಆ್ಯಂಡ್ ಟಿ ಬಿಟ್ಟು 2,592 ರೂ.ದರ ನಿಗದಿಯಾಗಿತ್ತು. ಆದರೆ ಈ ವರ್ಷ ಪ್ರತಿ ಟನ್‌ಗೆ ರೂ.2,371 ಎಫ್.ಆರ್.ಪಿ ನಿಗದಿಯಾಗಿದ್ದು, ಕಳೆದ ವರ್ಷಕ್ಕಿಂತ 221 ರೂ. ಕಡಿಮೆ ದರ ಕಬ್ಬು ಬೆಳೆಗಾರರಿಗೂ ಸಿಗುತ್ತಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. 1996 ಸಕ್ಕರೆ ನಿಯಂತ್ರಣ ಕಾಯಿದೆಯನ್ವಯ ಎಫ್.ಆರ್.ಪಿ ದರ ವನ್ನು ಭಾರತ ಸರ್ಕಾರವು ಸಕ್ಕರೆ ಇಳುವರಿಯ ಪ್ರಮಾಣವನ್ನು ಆಧರಿಸಿಕೊಂಡು ನಿಗದಿ ಪಡಿಸುತ್ತದೆ ಎಂದರು.
ಕಳೆದ ವರ್ಷದ ಹಂಗಾಮಿನಲ್ಲಿ ಸಕ್ಕರೆ ಇಳುವರಿ ಪ್ರಮಾಣ ಕಡಿಮೆ ಕಂಡು ಬಂದಿದ್ದರಿಂದ ಪ್ರಸಕ್ತ ವರ್ಷ ಎಫ್.ಆರ್.ಪಿ ದರ ಕಡಿಮೆಯಾಗಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು. ಎಫ್.ಆರ್.ಪಿ ದರಕ್ಕಿಂತ ಹೆಚ್ಚಿನ ದರವನ್ನು ಇಐಡಿ ಪ್ಯಾರಿ ಸಕ್ಕರೆ (EID parry sugar) ಕಾರ್ಖಾನೆಯವರು ನೀಡಿದರೂ ಕೇಂದ್ರ ಸರ್ಕಾರವಾಗಲಿ ಇಲ್ಲವೇ ರಾಜ್ಯ ಸರ್ಕಾರವಾಗಲಿ ಕಾರ್ಖಾನೆಯ ಮೇಲೆ ಯಾವ ಕಾನೂನು ಕ್ರಮ ಕೈಗೊಳ್ಳಲಿಲ್ಲ, ಅದಕ್ಕಾಗಿ ಇಐಡಿ ಪ್ಯಾರಿ ಕಾರ್ಖಾನೆಯವರು ಈ ದಿಸೆಯಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಸ್.ಎ.ಪಿ ದರ ನೀಡಿ
ರಾಜ್ಯ ಸರ್ಕಾರಕ್ಕೆ ಕಬ್ಬಿಗೆ ಎಸ್.ಎ.ಪಿ. ದರ ನಿಗದಿಪಡಿಸುವ ಅಧಿಕಾರವಿದೆ. ಕಬ್ಬಿನ ಬೆಳೆ ಉತ್ಪಾದನೆಗೆ ತಗುಲುವ ಖರ್ಚು ವೆಚ್ಚ ಆಧರಿಸಿಕೊಂಡು ರಾಜ್ಯ ಸರ್ಕಾರ ದರವನ್ನು ನಿಗದಿ ಪಡಿಸುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರ ತನ್ನ ಪರಮಾಧಿಕಾರ ಬಳಸಿ ಎಸ್.ಎ.ಪಿ ದರ ಹೆಚ್ಚಿಸಿ ಕಬ್ಬು ಬೆಳೆಗಾರರಿಗೆ ಅನುಕೂಲ ಮಾಡಿ ಕೊಡಬೇಕೆಂದರು.
ಕಾರ್ಖಾನೆ ಬಂದ್
ಹಳಿಯಾಳದ ಸಕ್ಕರೆ ಕಾರ್ಖಾನೆ ಸದ್ಯಕ್ಕೆ ತನ್ನ ಕಬ್ಬು ನುರಿಸುವ ಹಾಗೂ ಇತರ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದು, ಇದರಿಂದ ರೈತರಿಗೂ ಹಾಗೂ ಕಾರ್ಖಾನೆ ಆಧರಿಸಿಕೊಂಡು ಹಳಿಯಾಳ ತಾಲೂಕಿನಲ್ಲಿ ಆರಂಭಗೊಂಡ ಎಲ್ಲ ಆರ್ಥಿಕ ವಹಿವಾಟುಗಳಿಗೆ ಬಾರಿ ಹೊಡೆತ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದ ದೇಶಪಾಂಡೆ, ವರ್ಷವಿಡಿ ಶ್ರಮಪಟ್ಟು ರೈತರು ಕಬ್ಬು ಬೆಳೆಸಿದ್ದು, ಸಕಾಲದಲ್ಲಿ ಕಬ್ಬು ಕಟಾವು ಆಗದಿದ್ದರೆ ರೈತರು ಸಂಕಷ್ಟಕ್ಕೊಳಗಾಗುವುದಲ್ಲದೆ ಸಾಲದ ತಾಪತ್ರಯದಲ್ಲಿ ಬೀಳಲಿದ್ದಾರೆ. ಹಳಿಯಾಳದ ಸಕ್ಕರೆ ಕಾರ್ಖಾನೆ ಇಐಡಿ ಪ್ಯಾರಿ ಕಂಪನಿಯ ಒಡೆತನಕ್ಕೆ ಒಳಪಟ್ಟರು, ಕಾರ್ಖಾನೆಯ ಮೇಲೆ ತಾಲೂಕಿನ ಕಬ್ಬು ಬೆಳೆಗಾರರ ರೈತರ ಅಧಿಕಾರವಿದೆ ಎಂದರು.
ಸಂಘಟಿತ ಹೋರಾಟ
ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರ ಮೇಲೆ ಒತ್ತಡ ಹೇರಲು ಮುಂದಾಗೋಣ, ಆ ಮೂಲಕ ರೈತರ ಬೇಡಿಕೆ ಸ್ಪಂದಿಸಲು ಆಗ್ರಹಿಸೋಣ ಎಂದರು.
ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿರುವವರು ಎಂದಿಗೂ ತಮ್ಮ ನಡೆ ನುಡಿಯ ಮೇಲೆ ನಿಯಂತ್ರಣವಿರಬೇಕು, ಜವಾಬ್ದಾರಿಯಿಂದ ನಡೆಯಬೇಕೇ ಹೊರತು ಕಬ್ಬು ಬೆಳೆಗಾರರ ಸಮಸ್ಯೆಯನ್ನು ರಾಜಕೀಯ ಹಿತದೃಷ್ಟಿಗೆ ಬಳಸಿಕೊಳ್ಳುವ ಇರಾದೆಯನ್ನು ಇಡಬಾರದು ಎಂದು ತಿವಿದರು. ಇದು ನಮ್ಮ ತಾಲೂಕಿನ ಕಬ್ಬು ಬೆಳೆಗಾರರ ಭವಿಷ್ಯದ ಪ್ರಶ್ನೆಯಾಗಿದೆ, ಅದಕ್ಕಾಗಿ ನಾವೆಲ್ಲರೂ ಸೇರಿ ಹೋರಾಟ ನಡೆಸಬೇಕು ಎಂದರು.
ಇದನ್ನೂ ಓದಿ | Rain News | ಚಾಮರಾಜನಗರದಲ್ಲಿ ಸುವರ್ಣಾವತಿ ರೌದ್ರಾವತಾರಕ್ಕೆ ಜನ ತತ್ತರ, ಅಪಾರ ಬೆಳೆ ಹಾನಿ!