Site icon Vistara News

Lok Sabha Election 2024: ಉತ್ತರ ಕನ್ನಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಎಂಇಎಸ್‌ನಿಂದ ನಿರಂಜನ್ ಸರ್ದೇಸಾಯಿ ಸ್ಪರ್ಧೆ

Niranjan Sardesai is contesting from MES as a non party candidate for Uttara Kannada constituency

ಕಾರವಾರ: ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಇದೀಗ ಉತ್ತರ ಕನ್ನಡಕ್ಕೂ ಕಾಲಿಟ್ಟಿದ್ದು, ಸಂಯುಕ್ತ ಮಹಾರಾಷ್ಟ್ರ ರಚನೆಯ ಗುರಿಯೊಂದಿಗೆ ಈ ಬಾರಿ ಲೋಕಸಭಾ ಚುನಾವಣೆಗೆ (Lok Sabha Election 2024) ಸ್ಪರ್ಧಿಸಲು ಮುಂದಾಗಿದೆ. ಕಾರವಾರದಲ್ಲಿ ಸೋಮವಾರ ಎಂಇಎಸ್‌ನ ಅಭ್ಯರ್ಥಿ ನಿರಂಜನ್ ಉದಯ ಸಿಂಹ ಸರ್ದೇಸಾಯಿ ಉತ್ತರಕನ್ನಡ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ನಗರದ ಮಿತ್ರಸಮಾಜ ಮೈದಾನದಿಂದ 30ಕ್ಕೂ ಅಧಿಕ ಬೆಂಬಲಿಗರೊಂದಿಗೆ, ಸಂಯುಕ್ತ ಮಹಾರಾಷ್ಟ್ರ ರಚನೆಯ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಬಳಿಕ ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ್‌ಗೆ ನಾಮಪತ್ರ ಸಲ್ಲಿಸಿದರು.

ಇದನ್ನೂ ಓದಿ: Elon Musk: ಭಾರತದಲ್ಲಿ 2 ಲಕ್ಷ ಎಕ್ಸ್‌ ಖಾತೆಗಳು ಬ್ಯಾನ್‌

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಭ್ಯರ್ಥಿ ನಿರಂಜನ್, ಮರಾಠಿ ಭಾಷಿಕರ ಮೇಲಿನ ದೌರ್ಜನ್ಯದ ವಿರುದ್ಧ ಬೆಳಗಾವಿ ಹಾಗೂ ಉತ್ತರ ಕನ್ನಡದಲ್ಲಿ ಈ ಬಾರಿ ಎಂಇಎಸ್‌ನಿಂದ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು. ರಾಷ್ಟ್ರೀಯ ಪಕ್ಷಗಳು ಮರಾಠಿಗರನ್ನು ಕೇವಲ ಅವರ ಅಭಿವೃದ್ಧಿಗಾಗಿ ಬಳಸಿಕೊಳ್ಳುತ್ತಿವೆ. ಹೀಗಾಗಿ ಮರಾಠಿ ಭಾಷೆ, ಸಂಸ್ಕೃತಿಯ ಪರವಾಗಿ ಇರುವಂತೆ ಮರಾಠಾ ಮತದಾರರಿಗೆ ಮನವಿ ಮಾಡಿದ್ದು, ಯಾವುದೇ ರಾಷ್ಟ್ರೀಯ ಪಕ್ಷಗಳು ಹಣ ನೀಡಿದರೂ ಅವರನ್ನ ಬೆಂಬಲಿಸಬೇಡಿ ಎಂದರು.

ಇನ್ನು ಎಂಇಎಸ್ ಛತ್ರಪತಿ ಶಿವಾಜಿ ಮಹಾರಾಜರ ವಿಚಾರಧಾರೆಗಳೊಂದಿಗೆ ಎಲ್ಲ ಜಾತಿ ಧರ್ಮಗಳನ್ನು ಒಗ್ಗೂಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕೇಂದ್ರ, ರಾಜ್ಯ ಸರ್ಕಾರಗಳಿಂದ ಮರಾಠಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕನ್ನಡಿಗರ ಮೇಲೆ ನಮಗೆ ಯಾವುದೇ ದ್ವೇಷ ಇಲ್ಲ, ಕನ್ನಡ ನಮ್ಮ ಚಿಕ್ಕಮ್ಮ ಇದ್ದಂತೆ. ಆದರೆ ಭಾಷಾಧಾರಿತ ಗಡಿ ವಿವಾದವನ್ನು ಸರ್ಕಾರಗಳು ಮಾಡಿದ್ದು. ಭಾಷಾಧಾರಿತ ಪ್ರಾಂತ್ಯಗಳ ರಚನೆಯಿಂದ 40 ಲಕ್ಷಕ್ಕೂ ಅಧಿಕ ಮರಾಠಿಗರು ಕರ್ನಾಟಕದಲ್ಲಿ ಸಿಲುಕಿದ್ದಾರೆ. ಇದರ ವಿರುದ್ಧ ಕಳೆದ 60ಕ್ಕೂ ಅಧಿಕ ವರ್ಷಗಳಿಂದ ನಾವು ಹೋರಾಡುತ್ತಿದ್ದೇವೆ. ಗಡಿ ಜಿಲ್ಲೆಗಳಲ್ಲಿ ಮರಾಠಿ ಹಾಗೂ ಕನ್ನಡದ ದ್ವಿಭಾಷೆಯ ಆಡಳಿತ ವ್ಯವಸ್ಥೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಇದನ್ನೂ ಓದಿ: MS Dhoni : ವಿರಾಟ್ ಕೊಹ್ಲಿಯಂತೆ ಐಪಿಎಲ್​ನಲ್ಲಿ ವಿಶೇಷ ಸಾಧನೆ ಮಾಡಿದ ಮಹೇಂದ್ರ ಸಿಂಗ್​ ಧೋನಿ

ಕಾರವಾರ, ಜೋಯಿಡಾ, ಹಳಿಯಾಳ ಭಾಗಗಳಲ್ಲಿದ್ದ ಮರಾಠಿ ಶಾಲೆಗಳನ್ನು ಹಂತ ಹಂತವಾಗಿ ಬಂದ್ ಮಾಡಲಾಗಿದೆ. ಬೆಳಗಾವಿಯ ಖಾನಾಪುರ ಭಾಗದಲ್ಲಿ 50% ಶೇಕಡಾ ಜನತೆ ಮರಾಠಿ ಮಾತನಾಡುತ್ತಾರೆ. ಆದರೂ ಅಲ್ಲಿನ ಮರಾಠಿ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೀಡದೇ ಸರ್ಕಾರಗಳು ಅನ್ಯಾಯ ಮಾಡುತ್ತಿವೆ. ನಾವು ಕನ್ನಡದ ವಿರೋಧಿಗಳಲ್ಲ, ನಮ್ಮ ಮಾತೃಭಾಷೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಮರಾಠಿಗರಿರುವಲ್ಲಿ ಕನ್ನಡದೊಂದಿಗೆ ಮರಾಠಿ ಭಾಷೆಯ ನಾಮಫಲಕಗಳನ್ನೂ ಅಳವಡಿಸಬೇಕು. ಈ ಎಲ್ಲ ಹೋರಾಟಗಳಿಗೆ ದನಿಯಾಗಲು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ ಎಂದು ಅಭ್ಯರ್ಥಿ ನಿರಂಜನ್ ತಿಳಿಸಿದರು.

Exit mobile version