Site icon Vistara News

Lok Sabha Election 2024: ಲೋಕಸಭಾ ಚುನಾವಣೆ ಸಿಬ್ಬಂದಿಗೆ ತಯಾರಾಗಿದೆ ವಿಶೇಷ ಕಿಟ್

Lok Sabha Election 2024 special kit for the polling staff

ಕಾರವಾರ: ಜಿಲ್ಲೆಯಲ್ಲಿ ಮೇ 7ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ (Lok Sabha Election 2024) ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಎಲ್ಲಾ ಸಿಬ್ಬಂದಿಗೆ ದೈನಂದಿನ ಉಪಯೋಗಕ್ಕೆ ಅಗತ್ಯವಿರುವ ವಸ್ತುಗಳನ್ನು ಒಳಗೊಂಡ ವಿಶೇಷ ಕಿಟ್ (Special Kit) ಸಿದ್ದಗೊಂಡಿದ್ದು, ಕೈಗಾ ಸಂಸ್ಥೆಯು ತನ್ನ ಸಿ.ಎಸ್.ಆರ್ ಫಂಡ್ ಯೋಜನೆಯಡಿ ಸಿದ್ದಪಡಿಸಿರುವ ಈ ಕಿಟ್ ಅನ್ನು ಕೈಗಾ ಅಧಿಕಾರಿಗಳು ಶನಿವಾರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.

ಈ ಕಿಟ್‌ನಲ್ಲಿ ಪ್ರತಿಯೊಬ್ಬರೂ ದೈನಂದಿನ ಉಪಯೋಗಕ್ಕೆ ಬಳಸುವ ಟೂತ್ ಬ್ರಶ್, ಟೂತ್‌ಪೇಸ್ಟ್, ಸೋಪು, ಬಾಚಣಿಗೆ, ಸ್ಯಾನಿಟೈಸರ್ ಅಲ್ಲದೇ ಮತಗಟ್ಟೆಯಲ್ಲಿ ಸೊಳ್ಳೆಗಳಿದ್ದಲ್ಲಿ ಸಿಬ್ಬಂದಿಗಳು ಅದರಿಂದ ರಕ್ಷಿಸಿಕೊಳ್ಳಲು ಸೊಳ್ಳೆ ನಿವಾರಕ ಕ್ರೀಮ್ ಸಹ ಲಭ್ಯವಿದೆ.

ಇದನ್ನೂ ಓದಿ: Koppala News: ಅಕ್ರಮ ಜಾನುವಾರು ಸಾಗಾಟ: 9 ಜನ ಆರೋಪಿಗಳ ಬಂಧನ

ಕೈಗಾ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿ ಯೋಜನೆಯಡಿ ಒಟ್ಟು 7500 ಕಿಟ್ ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದು, ಈ ಕಿಟ್ ಗಳನ್ನು ಮೇ 6 ರಂದು ನಡೆಯುವ ಮತಯಂತ್ರಗಳ ಮಸ್ಟರಿಂಗ್ ಸಮಯದಲ್ಲಿ ಮತಗಟ್ಟೆ ಸಾಮಗ್ರಿಗಳ ಜತೆಗೆ ಎಲ್ಲಾ ಮತಗಟ್ಟೆ ಸಿಬ್ಬಂದಿಗೆ ವಿತರಿಸಲಾಗುವುದು.

ಕೈಗಾ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿ ಯೋಜನೆಯಡಿ ಜಿಲ್ಲಾಡಳಿತದ ಕಾರ್ಯಕ್ರಮಗಳಿಗೆ ನಿರಂತರವಾಗಿ ನೆರವು ನೀಡುತ್ತಿದ್ದು, ಪ್ರಸಕ್ತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಹ ಜಿಲ್ಲೆಯ ಎಲ್ಲಾ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ, ದೈನಂದಿನ ಉಪಯೋಗಕ್ಕೆ ಅಗತ್ಯವಿರುವ ಕಿಟ್‌ಗಳನ್ನು ನೀಡಿದೆ. ಈ ಕಿಟ್‌ನಲ್ಲಿನ ವಸ್ತುಗಳ ಬಳಕೆಯಿಂದ ಸಿಬ್ಬಂದಿ ಮತದಾನದ ದಿನ ಇನ್ನಷ್ಟು ಹೆಚ್ಚು ಲವಲವಿಕೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದ್ದು, ಇದಕ್ಕಾಗಿ ಜಿಲ್ಲಾಡಳಿತದ ಪರವಾಗಿ ಕೈಗಾ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ಹೇಳಿದರು.

ಇದನ್ನೂ ಓದಿ: MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಅಮೆರಿಕ

ಈ ವೇಳೆ ಕೈಗಾ ಸಂಸ್ಥೆಯ ಸಿ.ಎಸ್.ಆರ್ ಫಂಡ್ ಯೋಜನೆಯ ಸದಸ್ಯ ಕಾರ್ಯದರ್ಶಿ ಆಶೀಶ್ ಲಾಲ್ ಹಾಗೂ ಸದಸ್ಯ ದಿನೇಶ್ ಗಾಂವಕರ್ ಕಿಟ್ ಗಳನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.

Exit mobile version