Site icon Vistara News

Lok Sabha Election 2024: ಗೊಂದಲಕ್ಕೆ ಅವಕಾಶವಿಲ್ಲದೆ ಚುನಾವಣೆ ನಡೆಸಲು ಉ.ಕ ಡಿಸಿ ಸೂಚನೆ

training for election duty staff in Karwar

ಕಾರವಾರ: ಲೋಕಸಭಾ ಚುನಾವಣೆಗೆ (Lok Sabha Election 2024) ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ 7 ರಂದು ನಡೆಯುವ ಮತದಾನದ ಸಂದರ್ಭದಲ್ಲಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ತರಬೇತಿಯ ಅವಧಿಯಲ್ಲಿ ತಮ್ಮಲ್ಲಿರುವ ಎಲ್ಲಾ ಗೊಂದಲಗಳನ್ನು ಬಗೆಹರಿಸಿಕೊಂಡು, ಮತದಾನದ ಯಾವುದೇ ಗೊಂದಲಗಳಿಗೆ ಒಳಗಾಗದೇ ಅತ್ಯಂತ ಯಶಸ್ವಿಯಾಗಿ ಚುನಾವಣೆ ನಡೆಯುವಂತೆ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.

ಕಾರವಾರದ ಸೈಂಟ್ ಮೈಕಲ್ ಶಾಲೆಯಲ್ಲಿ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ನಡೆದ 2ನೇ ಹಂತದ ತರಬೇತಿ ವೀಕ್ಷಿಸಿ ಅವರು ಮಾತನಾಡಿದರು.

ತರಬೇತಿ ಸಮಯದಲ್ಲಿ ಇವಿಎಂಗಳ ಬಳಕೆ, ವಿವಿ ಪ್ಯಾಟ್ ಬಳಕೆ ಸೇರಿದಂತೆ, ಮತದಾನ ದಿನದಂದು ಚುನಾವಣಾ ಆಯೋಗದ ನಿರ್ದೇಶನಗಳ ಅನ್ವಯ ನಡೆಯುವ ಎಲ್ಲಾ ಪ್ರಕ್ರಿಯೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಬಗ್ಗೆ ಸವಿವರವಾಗಿ ತಿಳಿದುಕೊಳ್ಳುವಂತೆ ತಿಳಿಸಿದರು.

ಇದನ್ನೂ ಓದಿ: Hockey India: ಭಾರತ ಮಹಿಳಾ ಹಾಕಿ ತಂಡಕ್ಕೆ 22 ವರ್ಷದ ಸಲೀಮಾ ನೂತನ ನಾಯಕಿ

ಚುನಾವಣಾ ಪ್ರಕ್ರಿಯೆಯ ಯಶಸ್ಸಿಗೆ ಮತಗಟ್ಟೆ ಮಟ್ಟದಲ್ಲಿ ನಡೆಯುವ ಕಾರ್ಯವು ಅತ್ಯಂತ ಪ್ರಮುಖವಾಗಿರುವುದರಿಂದ, ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಮತ್ತು ಪರಸ್ಪರ ಸಮನ್ವಯದಿಂದ, ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ತಮ್ಮ ಕರ್ತವ್ಯ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಮತಗಟ್ಟೆಗಳಲ್ಲಿ ಮತದಾನ ಮಾಡುವ ಸ್ಥಳವನ್ನು ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಸೂಕ್ತ ರೀತಿಯಲ್ಲಿ ಸಿದ್ದಪಡಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮತಗಟ್ಟೆಗಳಲ್ಲಿ ಮತ್ತು ಮತದಾನದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಸೆಕ್ಟರ್ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಮತದಾನ ಪ್ರಮಾಣದ ಹೆಚ್ಚಳಕ್ಕೆ ಜಿಲ್ಲಾಡಳಿತದಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರಿಂದಾಗಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ಸಾಧ್ಯತೆಯಿದೆ. ಮತ ಚಲಾಯಿಸಲು ಆಗಮಿಸುವ ಮತದಾರರು ತಮ್ಮ ಎಪಿಕ್ ಕಾರ್ಡ್ ಅಥವಾ ಚುನಾವಣಾ ಆಯೋಗ ಸೂಚಿಸಿರುವಂತೆ ಬಳಸಬಹುದಾದ ಪರ್ಯಾಯ ಗುರುತಿನ ದಾಖಲೆಗಳ ಕುರಿತಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಸಮಗ್ರ ಮಾಹಿತಿ ಹೊಂದಿರಬೇಕು. ಮತದಾನದ ಅವಧಿ ಮುಕ್ತಾಯದ ನಂತರವೂ ಸರದಿ ಸಾಲಿನಲ್ಲಿ ಇರುವವರಿಗೆ ಟೋಕನ್‌ಗಳನ್ನು ನೀಡುವ ಮೂಲಕ ಅವರಿಗೆ ಮತದಾನ ಮಾಡಲು ಅವಕಾಶ ನೀಡಬೇಕು ಎಂದರು.

ಇದನ್ನೂ ಓದಿ: Bomber Drone: ಭಾರತದ ಮೊದಲ ಬಾಂಬರ್ ಡ್ರೋನ್ ಅನಾವರಣ; ಇದರ ವಿಶೇಷತೆ ಹೀಗಿದೆ ನೋಡಿ

ತರಬೇತಿ ಕಾರ್ಯಕ್ರಮದಲ್ಲಿ ಕಾರವಾರ ತಹಸೀಲ್ದಾರ್ ಪುರಂದರ, ವಿವಿಧ ಸೆಕ್ಟರ್ ಅಧಿಕಾರಿಗಳು ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version