ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಗೆ (Lok Sabha Election 2024) ಸಂಬಂಧಿಸಿದಂತೆ ಜೂ. 4ರಂದು ನಡೆಯುವ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ, ಮತ ಎಣಿಕೆ ಸಂದರ್ಭದಲ್ಲಿ ಮತಗಳ ಎಣಿಕೆಯಲ್ಲಿ ಯಾವುದೇ ತಪ್ಪುಗಳಾಗದಂತೆ ತಮ್ಮ ಕರ್ತವ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.
ಕುಮಟಾದ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ಮತ ಎಣಿಕೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆಯ ಅತ್ಯಂತ ಪ್ರಮುಖ ಮತ್ತು ಅಂತಿಮ ಹಂತವಾದ ಮತ ಎಣಿಕೆ ಕಾರ್ಯವು ಇಡೀ ಚುನಾವಣೆ ಪ್ರಕ್ರಿಯೆಯ ಮಹತ್ವದ ಘಟ್ಟವಾಗಿದೆ, ಮತ ಎಣಿಕೆ ಸಿಬ್ಬಂದಿ ಯಾವುದೇ ಗೊಂದಲ, ಆತುರ, ಒತ್ತಡಗಳಿಗೆ ಒಳಗಾಗದೇ, ನಿಖರವಾದ ಫಲಿತಾಂಶವನ್ನು ನೀಡಲು ಅನುಕೂಲವಾಗುವಂತೆ ಅತ್ಯಂತ ಜವಾಬ್ದಾರಿಯುತವಾಗಿ ಮತ ಎಣಿಕೆ ಕಾರ್ಯವನ್ನು ನಿರ್ವಹಿಸುವಂತೆ ತಿಳಿಸಿದರು.
ಇದನ್ನೂ ಓದಿ: Money Guide: ಮೇ 31ರೊಳಗೆ ಪ್ಯಾನ್-ಆಧಾರ್ ಲಿಂಕ್ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಹೀಗೆ ಲಿಂಕ್ ಮಾಡಿ
ಹಿಂದೆ ಎಷ್ಟೇ ಬಾರಿ ಮತ ಎಣಿಕೆಯ ಕರ್ತವ್ಯ ನಿರ್ವಹಿಸಿದ್ದರೂ ಕೂಡಾ, ಪ್ರತಿಯೊಂದು ಚುನಾವಣೆ ಮತ್ತು ಮತ ಎಣಿಕೆ ಕಾರ್ಯವು ಒಂದಕ್ಕಿಂತ ವಿಭಿನ್ನವಾಗಿದ್ದು, ಸಿಬ್ಬಂದಿ ಮತ ಎಣಿಕೆ ಕಾರ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು. ಎಣಿಕೆಯ ಸಂದರ್ಭದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೇ, ಮತಗಳನ್ನು ಸ್ಪಷ್ಟವಾಗಿ ಕ್ರೋಡಿಕರಿಸಿ, ಅಭ್ಯಥಿಗಳು ಮತ್ತು ಅವರ ಏಜೆಂಟರುಗಳಿಂದ ಯಾವುದೇ ಆಕ್ಷೇಪಣೆಗಳು ಬಾರದಂತೆ ಎಚ್ಚರವಹಿಸುವಂತೆ ಹಾಗೂ ಯಾವುದೇ ರೀತಿಯ ಗೊಂದಲಗಳು ಕಂಡುಬಂದಲ್ಲಿ ತಕ್ಷಣ ಆಯಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಮತ ಎಣಿಕೆ ಕಾರ್ಯದ ಕುರಿತಂತೆ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಎಲ್ಲಾ ಸಿಬ್ಬಂದಿ ಚಾಚೂ ತಪ್ಪದೇ ಪಾಲಿಸುವಂತೆ ತಿಳಿಸಿದ ಅವರು, ಇವಿಎಂಗಳಲ್ಲಿನ ಮತ ಎಣಿಕೆ ಮತ್ತು ಪೋಸ್ಟಲ್ ಬ್ಯಾಲೆಟ್‌ಗಳ ಎಣಿಕೆಯ ಕುರಿತಂತೆ ಯಾವುದೇ ಗೊಂದಲಗಳಿದ್ದಲ್ಲಿ ತರಬೇತಿ ಸಮಯದಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದರು.
ಇದನ್ನೂ ಓದಿ: World Digestive Health Day: ಜೀರ್ಣಕ್ರಿಯೆಯಲ್ಲಿ ತೊಡಕು ಅನಾರೋಗ್ಯಕ್ಕೆ ದಾರಿ; ಈ ಸಲಹೆ ಪಾಲಿಸಿ
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಇದ್ದರು.