ಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ, ವಿದ್ವಾಂಸ, ದಿವಂಗತ ಎಂ.ಎ.ಹೆಗಡೆ ಅವರ ಸಂಸ್ಮರಣೆ ಕಾರ್ಯಕ್ರಮ ಶಿರಸಿಯಲ್ಲಿ ಶನಿವಾರ (ಜುಲೈ 9) ನಡೆಯಲಿದೆ.
ಸ್ವರ್ಣವಲ್ಲೀ ಸಂಸ್ಥಾನದ ಯಕ್ಷಶಾಲ್ಮಲಾ ಸಂಘಟನೆಯು ಶಿರಸಿಯ ಎಪಿಎಂಸಿ ಯಾರ್ಡ್‌ನ ಟಿಆರ್‌ಸಿ ಸಭಾಭವನದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿಗಳು, ಯಕ್ಷಗಾನ, ತಾಳಮದ್ದಲೆ ಹಾಗೂ ಗ್ರಂಥಗಳ ಲೋಕಾರ್ಪಣ ನಡೆಯಲಿವೆ.
ʼಯಕ್ಷಗಾನ ಸ್ವರೂಪ ಮತ್ತು ಲಕ್ಷಣʼ ʼವೈಖರೀ ವಾಚಸ್ಪತಿʼ ಮತ್ತು ʼದಿ.ಎಂ.ಎ.ಹೆಗಡೆ ಯಕ್ಷಗಾನ ಪ್ರಸಂಗ ಸಮುಚ್ಚಯʼ ಕೃತಿಗಳು ಬಿಡುಗಡೆಯಾಗಲಿವೆ.
ಸಭಾ ಕಾರ್ಯಕ್ರಮ ಹಾಗೂ ಗ್ರಂಥಗಳ ಲೋಕಾರ್ಪಣೆಯಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟಾ, ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಜೋಶಿ ಮತ್ತಿತರರು ಭಾಗವಹಿಸಲಿದ್ದಾರೆ.
ಎಂ.ಎ.ಹೆಗಡೆಯವರ ಯಕ್ಷಗಾನ ಪ್ರಸಂಗಗಳ ಕುರಿತ ಗೋಷ್ಠಿಯಲ್ಲಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಪ್ರೊ.ಕೆ.ಇ.ರಾಧಾಕೃಷ್ಣ, ಡಾ.ಪಾದೇಕಲ್ಲು ವಿಷ್ಣು ಭಟ್ಟ, ವೇದಾಂತ ಗ್ರಂಥಗಳು ಕುರಿತ ಗೋಷ್ಠಿಯಲ್ಲಿ ಡಾ.ಜಿ.ಎಲ್.ಹೆಗಡೆ, ಡಾ.ಎಚ್. ಆರ್. ಅಮರನಾಥ, ಡಾ.ಮಹಾಬಲೇಶ್ವರ ಭಟ್ಟ ಕಿರಕುಂಬತ್ತಿ ಮೊದಲಾದ ವಿದ್ವಾಂಸರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಮನೆ ಮನೆಗೆ ತೆರಳಿ ಗೆಜ್ಜೆ ಸೇವೆ ಮಾಡುವ ಯಕ್ಷಗಾನ ಕಲಾವಿದರು