Site icon Vistara News

Uttara Kannada News: ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಸಚಿವ ಮಂಕಾಳು ವೈದ್ಯ ಚಾಲನೆ

Minister Mankalu Vaidya drives for Gruha Lakshmi Scheme implementation program in Karwar

ಕಾರವಾರ: ಪ್ರತಿಮ‌ನೆಗೆ ಗ್ಯಾರಂಟಿ ಕಾರ್ಡ್ (Guarantee card) ತಲುಪಿಸಿದ ವೇಳೆ ಬಿಜೆಪಿಯವರು (BJP) ಟೀಕೆ (Criticism) ಮಾಡಿದ್ದರು, ಈಗಾಗಲೇ ಮೂರು ಗ್ಯಾರೆಂಟಿಗಳನ್ನು ಜನರಿಗೆ ಮುಟ್ಟಿಸಿದ್ದೇವೆ, ಇದೀಗ ನಾಲ್ಕನೇಯ ಗ್ಯಾರೆಂಟಿಗೂ ಚಾಲನೆ ಸಿಕ್ಕಿದೆ ಎಂದು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

ಕಾರವಾರದ ಕಾಜುಭಾಗದಲ್ಲಿರುವ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೂ ಸಹ ಯೋಜನೆ ಜಾರಿ ಮಾಡುವುದು ಸಾಧ್ಯವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇನ್ನಾದರೂ ಟೀಕೆ ಬಿಟ್ಟು ಸುಮ್ಮನಿದ್ದು, ಅಭಿವೃದ್ಧಿಗೆ ಸಹಕಾರ ನೀಡಿ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆ ಜಾರಿಗೆ ಅಧಿಕಾರಿಗಳು ಶ್ರಮವಹಿಸಿದ್ದಾರೆ. ಅವರನ್ನು ಅಭಿನಂದಿಸಲೇಬೇಕು. ಗೃಹಲಕ್ಷ್ಮಿ ನೋಂದಣಿಯಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಉತ್ತರಕನ್ನಡ 10ನೇ ಸ್ಥಾನದಲ್ಲಿದೆ. ಇದಕ್ಕೆ ಅಧಿಕಾರಿಗಳು, ಮಾದ್ಯಮದವರ ಸಹಕಾರ ಕಾರಣ. ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ. ಆದರೆ ಬಿಜೆಪಿಯವರು ಹಣದ ಕೊರತೆ ಇದೆ, ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಆದರೆ ಬಿಜೆಪಿಯವರು ದಿವಾಳಿ ಮಾಡಿ ಹೋಗಿದ್ದನ್ನ ನಾವು ಸರಿಪಡಿಸುತ್ತಿದ್ದೇವೆ ಎಂದರು.

ಇದನ್ನೂ ಓದಿ: Asia Cup 2023: ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯ ನಡೆಯುವುದೇ ಅನುಮಾನ!

ರಾಜ್ಯದಲ್ಲಿ ಯಾರೂ ಹಸಿವೆಯಿಂದ ಇರಬಾರದು ಎನ್ನುವ ಉದ್ದೇಶದಿಂದ ಅನ್ನ ಭಾಗ್ಯ ಯೋಜನೆ ಆರಂಭಿಸಿದ್ದೇವೆ. ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ ಕೊಡುತ್ತೇವೆ. ಉಳಿದ 5 ಕೆಜಿ ಅಕ್ಕಿಯ ಬದಲು ಹಣವನ್ನ ಕೊಡಲಾಗುತ್ತಿದೆ. ಇದರಿಂದ ಅಗತ್ಯ ವಸ್ತುಗಳನ್ನ‌ ಖರೀದಿಸಲು ಅನುಕೂಲವಾಗಲಿದೆ. ನಮಗೆ 10 ಕೆಜಿ ಅಕ್ಕಿ ಕೊಡುವ ಯೋಜನೆಯಿತ್ತು, ಸರ್ಕಾರದ ಬಳಿ ಹಣವೂ ಇದೆ. ಆದರೆ ಅಕ್ಕಿ ಪೂರೈಕೆ ಮಾಡದ ಹಿನ್ನಲೆ ಅಕ್ಕಿ ಬದಲು ಹಣ ನೀಡುತ್ತಿದ್ದೇವೆ.

ವಿದ್ಯುತ್‌ನ್ನೂ ಉಚಿತ ಮಾಡಿದ್ದೇವೆ. ಮನೆಯಲ್ಲಿ ಕರೆಂಟ್ ಬಿಲ್ ತುಂಬುವವರೂ ಸಹ ತಾಯಂದಿರೆ ಇದ್ದಾರೆ. ಹೀಗಾಗಿ ಅವರಿಗೆ ಅನುಕೂಲವಾಗಲಿ ಎಂದು ವಿದ್ಯುತ್ ಉಚಿತ ಮಾಡಿದ್ದೇವೆ. ಮಹಿಳೆಯರು ಕೆಲಸ ಕಾರ್ಯಗಳಿಗೆ ತೆರಳಲು ಅನುಕೂಲವಾಗುವಂತೆ ಬಸ್ ಪ್ರಯಾಣ ಉಚಿತ ಮಾಡಿದ್ದೇವೆ. ಮಹಿಳೆಯರು, ತಾಯಂದಿರು ಖುಷಿಯಾಗಿರಬೇಕು ಎನ್ನುವುದು ಕಾಂಗ್ರೆಸ್ ಸರ್ಕಾರದ ಆಶಯ. ಆದರೆ ಅದಕ್ಕೂ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ ಎಂದರು.

ಸರ್ಕಾರ ಬಂದು ನೂರು ದಿನಗಳು ತುಂಬಿದ್ದು, ಮುಖ್ಯಮಂತ್ರಿಗಳು ಸಮಯ ವ್ಯರ್ಥ ಮಾಡದೇ ಜನರ ಕೆಲಸ ಮಾಡುತ್ತಿದ್ದಾರೆ. ಈಗ ವಿದ್ಯಾನಿಧಿ ಯೋಜನೆಯೊಂದರ ಜಾರಿ ಮಾತ್ರ ಉಳಿದಿದೆ. ಅದನ್ನೂ ಜಾರಿಗೊಳಿಸಿ ಅಭಿವೃದ್ಧಿಯನ್ನೂ ಮಾಡುತ್ತೇವೆ. ಬಿಜೆಪಿಯವರು ಮಾಡಿರುವ ಸಾಲವನ್ನೂ ತೀರಿಸುತ್ತೇವೆ. ಸರ್ಕಾರ ಎಲ್ಲ ರೀತಿಯಿಂದಲೂ ಜನರ ನೆರವಿಗೆ ಇದೆ. ತಾಯಂದಿರು ಸ್ವಾವಲಂಬಿ ಜೀವನ ಸಾಗಿಸಬೇಕು, ಯಾರ ಎದುರಿಗೂ ಕೈಚಾಚುವಂತಾಗಬಾರದು ಎನ್ನುವುದು ನಮ್ಮ ಉದ್ದೇಶ. ಸಾಮಾನ್ಯ ಜನರು ರಾಜ್ಯದಲ್ಲಿ ನೆಮ್ಮದಿಯಿಂದ ಇದ್ದಾರೆ ಎನ್ನುವ ಸಂದೇಶ ಸಾರುವಂತಾಗಬೇಕು. ಅದಕ್ಕೆ ಪೂರಕವಾದ ಯೋಜನೆಗಳನ್ನ ಜಾರಿಗೆ ತರುತ್ತೇವೆ‌ ಎಂದು ಸಚಿವ ಮಂಕಾಳು ವೈದ್ಯ ತಿಳಿಸಿದರು.

ಇದನ್ನೂ ಓದಿ: Lakshmi Hebbalkar : ಇದು ನನ್ನ ಜೀವನದ ಸಾರ್ಥಕ ಕ್ಷಣ; ಗೃಹಲಕ್ಷ್ಮಿ ಸ್ಕೀಂ ಸಾಕಾರಕ್ಕೆ ಭಾವುಕರಾದ ಲಕ್ಷ್ಮೀ ಹೆಬ್ಬಾಳ್ಕರ್‌

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್, ಕಾಂಗ್ರೆಸ್ ನೀಡಿದ ಗ್ಯಾರೆಂಟಿ ಯೋಜನೆಗಳ ಕುರಿತು ಬಿಜೆಪಿ‌ ಹಲವಾರು ಟೀಕೆಗಳನ್ನು ಮಾಡಿತ್ತು. ಇದೀಗ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅಂದು ಟೀಕೆ ಮಾಡಿದವರು ತಮ್ಮ ಹೇಳಿಕೆ ಕುರಿತು ಇಂದು ಮತ್ತೊಮ್ಮೆ ಯೋಚನೆ ಮಾಡಬೇಕು ಎಂದರು.

ಈ ರೀತಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದು ಯಾರಿಂದಲೂ ಸಾಧ್ಯವಿಲ್ಲ. ಅದು ಕೇವಲ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ಜಿಲ್ಲೆಯಲ್ಲೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು, ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕುಮಟಾ ಅಥವಾ ಹೊನ್ನಾವರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನೂ ನಿರ್ಮಾಣ ಮಾಡುತ್ತೇವೆ ಎಂದರು.

ಗೃಹಲಕ್ಷ್ಮಿ ಯೋಜನೆ ಅನುಷ್ಥಾನ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ನಾಲ್ವರು ಮಹಿಳೆಯರಿಗೆ ಗೃಹಲಕ್ಷ್ಮಿ ನೋಂದಣಿಯ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾ ರಂಗಮಂದಿರ ಆವರಣದಿಂದ ಹಮ್ಮಿಕೊಳ್ಳಲಾಗಿದ್ದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮದ ಮೆರವಣಿಗೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಚಾಲನೆ‌ ನೀಡಿದರು.

ಇದನ್ನೂ ಓದಿ: Vijayanagara News: ಹಂಪಿಯಲ್ಲಿ ಅಪರೂಪದ ಬಿಳಿ ಬಣ್ಣದ ಹಾವು ಪತ್ತೆ

ಮೆರವಣಿಗೆಯಲ್ಲಿ ಸಿದ್ಧಿ ಹಾಗೂ ಇತರೆ ಕಲಾ ತಂಡಗಳಿಂದ ಕಲಾಪ್ರದರ್ಶನ ನಡೆಯಿತು. ಮೆರವಣಿಗೆಯಲ್ಲಿ ನೂರಕ್ಕೂ ಅಧಿಕ ಮಂದಿ ಮಹಿಳೆಯರು ಅಧಿಕಾರಿಗಳು ಪಾಲ್ಗೊಂಡಿದ್ದರು.

Exit mobile version