ಕಾರವಾರ: “ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ (Modi in Karnataka) ಅಭೂತಪೂರ್ವವಾಗಿ ನಡೆಯುತ್ತದೆ. ಪ್ರತಿಯೊಬ್ಬರು ಕಾರ್ಯಕ್ರಮಕ್ಕೆ ಆಗಮಿಸಿ” ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮದ ಮೂಲಕ ಆಹ್ವಾನಿಸಿದರು.
ತಾಲೂಕಿನ ಬೇಲೆಕೇರಿ ಟೋಲಗೇಟ್ ಪಕ್ಕದಲ್ಲಿನ ವಿಶಾಲ ಪ್ರದೇಶದಲ್ಲಿ ಮೇ 3ರಂದು ನಡೆಯುತ್ತಿರುವ ಕಾರ್ಯಕ್ರಮದ ಸಿದ್ಧತೆಯನ್ನು ವೀಕ್ಷಿಸಲು ಆಗಮಿಸಿದ ವೇಳೆ ಮಾತನಾಡಿದ ಅವರು, “ದಕ್ಷಿಣದ ಬಾರ್ಡೋಲಿ ಎನಿಸಿದ ಸ್ವಾತಂತ್ರ್ಯ ಹೋರಾಟದ ನೆಲದಲ್ಲಿ ಪ್ರಧಾನಿ ಮೋದಿಯವರು ಮೊದಲ ಬಾರಿಗೆ ಆಗಮಿಸುತ್ತಿರುವುದು ನಮ್ಮ ಸೌಭಾಗ್ಯ” ಎಂದರು.
ಇದನ್ನೂ ಓದಿ: Mann Ki Baat: ಮೋದಿಯವರ ಮನ್ ಕೀ ಬಾತ್ ಒಂದು ಎಪಿಸೋಡ್ಗೆ 8.3 ಕೋಟಿ ರೂ.ವೆಚ್ಚ?; ವೈರಲ್ ಸಂದೇಶ ನಿಜವೇ?
“ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಸೂಕ್ತ ಬಂದೋಬಸ್ತ ಮತ್ತು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೋದಿಯವರು ಜಾರಿಗೆ ತಂದ ಅನೇಕ ಯೋಜನೆಗಳ ಪ್ರಯೋಜನ ಸಿಗುತ್ತಿದೆ ಹೀಗಾಗಿ ಎಲ್ಲರೂ ಕಾರ್ಯಕ್ರಮಕ್ಕೆ ಬನ್ನಿ” ಎಂದು ಆಹ್ವಾನಿಸಿದರು.
ಹಾಗೆಯೇ ಚುನಾವಣೆಯ ಬಗ್ಗೆ ಮಾತನಾಡಿದ ಅವರು, “ಜಿಲ್ಲೆಯ ಆರೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಈವರೆಗೆ ನಡೆದಿರುವ ವಿದ್ಯಮಾನಗಳು, ಚಟುವಟಿಕೆ, ಬೂತ್ ಮಟ್ಟದ ಪ್ರಚಾರಗಳು, ಕಾರ್ಯಕರ್ತರ ಜೋಡಣೆ, ಸಂಪರ್ಕ ಇವುಗಳೆಲ್ಲದರ ಆಧಾರದಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಆಗಮನ ಜಿಲ್ಲೆಯಲ್ಲಿ ಹೊಸ ಸಂಚಲನ ಮೂಡಿಸಿರುವುದರಿಂದ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ರೂಪಾಲಿ ನಾಯ್ಕ ಗೆಲುವು ಸಾಧಿಸುವುದರೊಂದಿಗೆ ಜಿಲ್ಲೆಯ ಆರಕ್ಕೆ ಆರೂ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವುದು ಖಚಿತ” ಎಂದು ತಿಳಿಸಿದರು.
ಇದನ್ನೂ ಓದಿ: Karnataka Election : ಮೋದಿಗೆ ನಾಲಾಯಕ್ ಅಂದಿಲ್ಲ; ನಾನು ಹೇಳಿದ್ದೇ ಬೇರೆ ಅಂದ್ರು ಪ್ರಿಯಾಂಕ ಖರ್ಗೆ
ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ವಿಭಾಗ ಸಹ ಪ್ರಭಾರಿ ಎನ್.ಎಸ್. ಹೆಗಡೆ ಕರ್ಕಿ, ಜಿಲ್ಲಾ ಸಹ ಪ್ರಭಾರಿ ಪ್ರಸನ್ನ ಕೆರೆಕೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ ಭಾವಿಕೇರಿ, ಜಿ.ಪಂ. ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ, ಮೀನುಗಾರ ಪ್ರಕೋಷ್ಠಟದ ಸಂಚಾಲಕ ಹುವಾ ಖಂಡೇಕರ, ಪುರಸಭೆಯ ಉಪಾಧ್ಯಕ್ಷೆ ರೇಖಾ ಗಾಂವಕರ ಉಪಸ್ಥಿತರಿದ್ದರು.