Site icon Vistara News

Uttara Kannada News: ಮುಡಗೇರಿ ಭೂಸ್ವಾದೀನ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ: ಶಾಸಕ ಸತೀಶ್ ಸೈಲ್

Necessary action to provide compensation to Mudageri land acquisition victims says MLA Satish Sail

ಕಾರವಾರ: ಮುಡಗೇರಿ ಕೈಗಾರಿಕಾ ಪ್ರದೇಶಕ್ಕೆ (Industrial area) ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಭೂಸ್ವಾದೀನಕ್ಕೆ (Land Acquisition) ಗುರುತಿಸಿರುವ 73 ಎಕರೆ 6 ಗುಂಟೆ ಜಮೀನುಗಳ 170 ಕುಟುಂಬಗಳಿಗೆ ಪರಿಹಾರ (Compensation) ನೀಡುವ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಕೈಗೊಳ್ಳಲಾಗುವುದು ಎಂದು ಶಾಸಕ ಸತೀಶ್ ಸೈಲ್ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪ್ರಸ್ತುತ ಭೂಸ್ವಾದೀನಕ್ಕೆ ಭೂಮಿ ನೀಡಿರುವ 170 ಜನರಿಗೆ ನೋಟಿಸ್ ನೀಡಲಾಗಿದ್ದು, ಇವರಿಗೆ ಎಕರೆಗೆ 50 ಲಕ್ಷ ರೂಪಾಯಿಯಂತೆ ಪರಿಹಾರ ನೀಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಂದಿನ 15 ದಿನದಲ್ಲಿ ಮುಡಗೇರಿಯಲ್ಲಿ ಸಭೆ ನಡೆಸಲಾಗುವುದು ಎಂದರು.

ಇದನ್ನೂ ಓದಿ: UPI Payment: ತಪ್ಪು ಯುಪಿಐ ವಿಳಾಸಕ್ಕೆ ಹಣ ಪಾವತಿಸಿದಿರಾ? ಅದನ್ನು ಮರಳಿ ಪಡೆಯೋದು ಹೇಗೆ?

ಸಂತ್ರಸ್ತರು ಪರಿಹಾರ ಪಡೆಯಲು ಅಗತ್ಯವಿರುವ ನಿಯಮಗಳನ್ನು ಅತ್ಯಂತ ಸರಳೀಕೃತಗೊಳಿಸಲಾಗಿದ್ದು, ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳ ಮೋಸಕ್ಕೆ ಒಳಗಾಗಬೇಡಿ. ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ, ಪರಿಹಾರದ ಮೊತ್ತ ಪಡೆಯಲು ನೀಡಬೇಕಾದ ಅಗತ್ಯ ದಾಖಲೆಗಳ ಪಟ್ಟಿಯನ್ನು ಪಡೆದು, ಆ ಪ್ರಕಾರ ಅವಶ್ಯಕ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡುವಂತೆ ತಿಳಿಸಿದರು.

ಪರಿಹಾರದ ಮೊತ್ತವು ಆರ್.ಟಿ.ಜಿ.ಎಸ್. ಮೂಲಕ ನೇರವಾಗಿ ಸಂತ್ರಸ್ತ ಕುಟುಂಬದ ವ್ಯಕ್ತಿಗಳ, ಬ್ಯಾಂಕ್‌ನಲ್ಲಿನ ಜಂಟಿ ಖಾತೆಗಳಿಗೆ ಜಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಪರಿಹಾರದ ಮೊತ್ತ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಲು ಅಧಿಕಾರಿಗಳು ಎಲ್ಲ ರೀತಿಯ ನೆರವು ನೀಡಲಿದ್ದಾರೆ ಎಂದರು.

ಭೂಸ್ವಾದೀನಕ್ಕೆ ಗುರುತಿಸಿರುವ 73 ಎಕರೆ 6 ಗುಂಟೆ ಪ್ರದೇಶದಲ್ಲಿ ರಾಜ್ಯದಲ್ಲೇ ಅತ್ಯಂತ ಸುಸಜ್ಜಿತ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದ್ದು, ಈ ಪ್ರದೇಶದಲ್ಲಿ ವಿವಿಧ ಅಳತೆಯ 66 ಫ್ಲಾಟ್‌ಗಳನ್ನು ನಿರ್ಮಾಣ ಮಾಡಲಾಗುವುದು. ಇಲ್ಲಿ ಆರಂಭಗೊಳ್ಳುವ ಕೈಗಾರಿಕೆಗಳಿಂದ ಜಿಲ್ಲೆಯ ಜನತೆಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳು ದೊರೆಯಲಿವೆ ಎಂದರು.

ಇದನ್ನೂ ಓದಿ: Drought Situation : ರಾಜ್ಯದ 195 ತಾಲೂಕುಗಳು ಬರಪೀಡಿತ; ಕಂದಾಯ ಸಚಿವ ಕೃಷ್ಣಬೈರೇಗೌಡ ಘೋಷಣೆ, ಕೇಂದ್ರಕ್ಕೆ ವರದಿ

ಸಭೆಯಲ್ಲಿ ವಿಶೇಷ ಭೂಸ್ವಾದೀನಾಧಿಕಾರಿ ನವೀನ್, ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಟಿ. ಪಾಟೀಲ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಜಯಂತ್, ತಹಸೀಲ್ದಾರ್ ನಿಶ್ಚಲ್ ನರೋನಾ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಆನಂದ ಕುಮಾರ್ ಬಾಲಪ್ಪನವರ್ ಉಪಸ್ಥಿತರಿದ್ದರು.

Exit mobile version