ಯಲ್ಲಾಪುರ: ಸಮಾಜದಲ್ಲಿ (Society) ಬಹಳಷ್ಟು ಹಣವಂತರನ್ನು ನಾವೆಲ್ಲ ಕಾಣಬಹುದು. ಆದರೆ ಇದ್ದ ಹಣವನ್ನು (Money) ಸಮಾಜದ ಒಳಿತಿಗಾಗಿ ದಾನ (Donate) ಮಾಡುವ ಗುಣ ಎಲ್ಲರಿಗೂ ಇರುವುದಿಲ್ಲ. ಇಂತಹ ಗುಣ ಅನಂತಮೂರ್ತಿ ಅವರಿಗೆ ಅವರ ತಂದೆ ತಾಯಿಗಳಿಂದ ಬಳುವಳಿಯಾಗಿ ಬಂದಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಅಡಿಕೆ ಭವನದಲ್ಲಿ ಬ್ಯಾಗದ್ದೆಯ ಅನಂತಮೂರ್ತಿ ಹೆಗಡೆ ಚ್ಯಾರಿಟೆಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಆಟೋ ರಿಕ್ಷಾ ಹಾಗೂ ಗೂಡ್ಸ್ ರಿಕ್ಷಾ ಚಾಲಕ-ಮಾಲೀಕರಿಗೆ ಉಚಿತ ಸಮವಸ್ತ್ರ ವಿತರಣೆ, ಔತಣಕೂಟ, ಆಟೋ ರಿಕ್ಷಾ ಪಾಸಿಂಗ್ ಯೋಜನೆ ಹಾಗೂ ಆಟೋ ರಿಕ್ಷಾ ಪ್ರಿಂಟಿಂಗ್ ಹುಡ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಾಲಕರ ಕಷ್ಟವನ್ನು ನಾನು ಅರಿತಿದ್ದೇನೆ. ಚಾಲಕರಿಲ್ಲದೆ ಯಾವುದೇ ಕಾರ್ಯಗಳು ನಡೆಯಲು ಸಾಧ್ಯವಿಲ್ಲ. ಸಮಾಜದಲ್ಲಿ ಕೊಟ್ಟರೂ ಜನ ಮಾತಾಡುತ್ತಾರೆ. ಕೊಡದೆ ಹೋದರೂ ಮಾತಾಡುತ್ತಾರೆ. ಟೀಕೆ ಮಾಡುವವರನ್ನು ಮೆಟ್ಟಿ ನಿಂತು ನಮ್ಮ ಕಾರ್ಯಗಳಲ್ಲಿ ಸಫಲತೆಯನ್ನು ಕಾಣಬೇಕಾಗಿದೆ. ಈ ರೀತಿಯ ಉತ್ತಮ ಕಾರ್ಯಗಳು ಇನ್ನು ಬಹಳಷ್ಟು ವರ್ಷಗಳ ಕಾಲ, ಯಶಸ್ವಿಯಾಗಿ ನಡೆಯಲಿ ಎನ್ನುವುದು ನನ್ನ ಆಶಯ ಎಂದರು.
ಇದನ್ನೂ ಓದಿ: Weather Report : ರಾಜ್ಯದಲ್ಲಿ ಕ್ಷೀಣಿಸಿದ ಮಳೆ ; ಆತಂಕದಲ್ಲಿ ರೈತಾಪಿ ವರ್ಗ
ನಾವು ಮಾಡುವಂತಹ ಸಹಾಯದ ಫಲಾಫಲಗಳನ್ನು ನಾವು ಒಂದಲ್ಲಾ ಒಂದು ರೀತಿಯಲ್ಲಿ ಹಿಂಪಡೆಯುತ್ತೇವೆ. ಕಷ್ಟಕಾಲದಲ್ಲಿ ಸಹಾಯ ಮಾಡಿದವರಿಗೆ ಒಳಿತು ಮಾಡದೇ ಹೋದರೂ, ಅವರಿಗೆ ಕೆಡುಕನ್ನು ಎಂದಿಗೂ ಬಯಸದಂತಹ ಕೃತಜ್ಞತೆಯ ಜೀವನ ನಮ್ಮೆಲ್ಲರದ್ದಾಗಲಿ ಎಂದ ಅವರು, ಇಲ್ಲದವರಿಗೆ ನಿಮ್ಮ ಕಾರ್ಯ ಸಹಾಯ ಮಾಡಲಿ, ಇದ್ದವರಿಗೆ ಈ ಕಾರ್ಯ ಪ್ರೇರಣೆಯಾಗಲಿ ಎಂದು ತಿಳಿಸಿದರು.
ಮಾಜಿ ಶಾಸಕ ವಿ.ಎಸ್. ಪಾಟೀಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜೀವನ ನನಗೆ ಆದರ್ಶವಾಗಿದೆ. ಕಡುಬಡತನದಲ್ಲಿ ಹುಟ್ಟಿದ ನಾನು, ಸಮಾಜಕ್ಕೆ ಸಹಾಯ ಮಾಡುವ ಉದ್ದೇಶದಿಂದ ಚಾರಿಟೆಬಲ್ ಟ್ರಸ್ಟ್ ರಚಿಸಿ, ಅದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದೇನೆ, ನನ್ನ ದುಡಿಮೆಯ ಹಣದಲ್ಲಿ ಸ್ವಲ್ಪ ಹಣವನ್ನು ಸಮಾಜಕ್ಕೆ ಮೀಸಲಿಡುತ್ತಿದ್ದೇನೆ.
ರಿಕ್ಷಾ ಚಾಲಕರು ಇಂದಿನ ದಿನಗಳಲ್ಲಿ ತೀವ್ರ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಗೌರವವಿದೆ. ಅಂತೆಯೇ ಆಟೋ ಚಾಲಕರಿಗೂ ಸಮಾನ ಗೌರವ ದೊರಕಬೇಕು ಎನ್ನುವುದು ನನ್ನ ಆಶಯ ಎಂದರು.
ಇದನ್ನೂ ಓದಿ: Toyota Rumion : ಆಗಸ್ಟ್ ಅಂತ್ಯದ ವೇಳೆಗೆ ಟೊಯೊಟಾದಿಂದ ಮತ್ತೊಂದು ಕಾರು ಬಿಡುಗಡೆ
ಇದೇ ಸಂದರ್ಭದಲ್ಲಿ ಬಹಳ ವರ್ಷಗಳಿಂದ ವೃತ್ತಿಯಲ್ಲಿ ತೊಡಗಿಕೊಂಡಿರುವ ಹಿರಿಯ ಆಟೋ ಚಾಲಕ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪಂ. ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಉದ್ಯಮಿಗಳಾದ ಡಿ. ಶಂಕರ್ ಭಟ್, ಬಾಲಕೃಷ್ಣ ನಾಯಕ, ಆಟೋ ಚಾಲಕ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ್ ಮೇಸ್ತ, ತಾಲೂಕಾಧ್ಯಕ್ಷ ಸಂತೋಷ ನಾಯ್ಕ, ಅನಂತಮೂರ್ತಿ ಅವರ ತಂದೆ ತಾಯಿಯವರು ಇದ್ದರು.
ಇದನ್ನೂ ಓದಿ: Viral Video: ಕಣ್ಣೀರು ಸುರಿಸಿದ ಅಲ್ಕರಾಜ್, ಜೆರ್ಸಿ ಹರಿದು ಸಂಭ್ರಮಿಸಿದ ಜೊಕೋವಿಕ್
ನಯನಾ ಭಟ್ ಪ್ರಾರ್ಥಿಸಿದರು. ಗಿರಿಧರ್ ಕಬ್ನಳ್ಳಿ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.