Site icon Vistara News

Operation Kaveri: ಸುಡಾನ್‌ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ದಾಂಡೇಲಿ ಯುವಕರು

ಸುಡಾನ್‌ನಿಂದ ಭಾರತಕ್ಕೆ ಮರಳಿದವರು ಮತ್ತು ಅವರ ಕುಟುಂಬ

ಕಾರವಾರ: ಸುಡಾನ್‌ ದೇಶ ಇಬ್ಬರು ಜನರಲ್‌ಗಳ ನಡುವಿನ ಯುದ್ಧದಲ್ಲಿ ಹೊತ್ತಿ ಉರಿಯುತ್ತಿದೆ. ಹೀಗಿರುವಾಗ ಅಲ್ಲಿಂದ ಮರಳಿ ತಾಯ್ನಾಡಿಗೆ ಜೀವಂತ ಬರಬಹುದೇ ಎಂಬ ಆತಂಕದಲ್ಲಿ 15 ದಿನಗಳನ್ನು ಕಳೆದಿದ್ದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಬಾಂಬೆಚಾಳದ ಒಂದೇ ಕುಟುಂಬದ ಇಬ್ಬರು ಆಪರೇಷನ್ ಕಾವೇರಿಯ (Operation Kaveri) ಮೂಲಕ ಯಶಸ್ವಿಯಾಗಿ ಭಾನುವಾರ ಸಂಜೆ ತಾಯ್ನಾಡಿಗೆ ಬಂದಿದ್ದಾರೆ.

ನಗರದ ಬಾಂಬೆಚಾಳದ ಒಂದೇ ಕುಟುಂಬದ ಉದಯಕುಮಾರ್ ಸಿದ್ದಪ್ಪ ಮಾದರ್ ಮತ್ತು ಅವರ ಅಣ್ಣನ ಮಗ ಚೇತನ್ ರಮೇಶ್ ಮಾದರ ಎಂಬಿಬ್ಬರು ಜೀವಭಯದಿಂದ ಮುಕ್ತರಾಗಿ ದಾಂಡೇಲಿಗೆ ಬಂದು ತಲುಪಿದ್ದಾರೆ. ಉದಯಕುಮಾರ್ ಅವರು ಕಳೆದ 12 ವರ್ಷಗಳಿಂದ ಸುಡಾನ್ ದೇಶದ ಒಂದು ಕಾರ್ಖಾನೆಯಲ್ಲಿ ಬಾಯ್ಲರ್ ಮೆಕಾನಿಕ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ಅದೇ ಕಾರ್ಖಾನೆಯಲ್ಲಿ ಅವರ ಅಣ್ಣನ ಮಗನಾದ ಚೇತನ್ ರಮೇಶ್ ಮಾದರ ಎಂಬಾತನೂ ಕೆಲಸ ನಿರ್ವಹಿಸುತ್ತಿದ್ದನು.

ಸುಡಾನ್‌ನಲ್ಲಿ ಯುದ್ಧ ಆರಂಭವಾಗುತ್ತಿದ್ದಂತೆಯೇ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೂ ಅಲ್ಲಿಯ ಕಾರ್ಖಾನೆಯವರು ಬಹಳ ಮುತುವರ್ಜಿ ವಹಿಸಿ ನೋಡಿಕೊಂಡಿದ್ದರು. ಅಂತಿಮವಾಗಿ ಅವರನ್ನು ಕರೆದುಕೊಂಡು ಹೋಗಲು ಹಡಗು ಬಂದಿತ್ತು. ಕದನ ವಿರಾಮದ ಸಂದರ್ಭದಲ್ಲಿ ಹಡಗಿದ್ದ ಸ್ಥಳಕ್ಕೆ 800 ಕಿಮೀ ದೂರದವರೆಗೆ ಕಾರ್ಖಾನೆಯವರೇ ಬಸ್ ಮೂಲಕ ಇವರನ್ನು ಕಳುಹಿಸಿಕೊಟ್ಟಿದ್ದರು. ಆನಂತರ ಅಲ್ಲಿಂದ ದೇಶದ ಆಪರೇಷನ್ ಕಾವೇರಿಯ ಮೂಲಕ ದೆಹಲಿಗೆ ಬಂದು, ದೆಹಲಿಯಿಂದ ಹುಬ್ಬಳ್ಳಿಗೆ ತಲುಪಿ ಭಾನುವಾರ ಸಂಜೆ ದಾಂಡೇಲಿಗೆ ಬಂದು ತಲುಪಿದ್ದಾರೆ.

ಇದನ್ನೂ ಓದಿ: Karnataka Election 2023: ಬಿಜೆಪಿ ಕದ್ದಿರುವ ಹಣ ಮತ್ತೆ ಜನರಿಗೇ ವಾಪಸ್ ಕೊಡುತ್ತೇವೆ : ರಾಹುಲ್ ಗಾಂಧಿ ಭರವಸೆ

“ನಾವು ಮರಳಿ ನಮ್ಮೂರಿಗೆ ಹೋಗುತ್ತೇವೆ ಎಂಬುವುದನ್ನು ಮರೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಭಾರತ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿ, ನೆರವಿಗೆ ಬಂದಿದೆ” ಎಂದು ಉದಯಕುಮಾರ್ ಸಿದ್ದಪ್ಪ ಮಾದರ್ ಮತ್ತು ಅವರ ಅಣ್ಣನ ಮಗ ಚೇತನ್ ರಮೇಶ್ ಮಾದರ ಮಾಧ್ಯಮಕ್ಕೆ ವಿವರಿಸಿದ್ದಾರೆ. ಇವರಿಬ್ಬರ ಆಗಮನದಿಂದ ಮನೆ ಮಂದಿಯ ಆತಂಕ ದೂರವಾಗಿದ್ದು, ಮನೆಯಲ್ಲಿ ನೆಮ್ಮದಿ ಕಾಣುವಂತಾಗಿದೆ.

Exit mobile version