Site icon Vistara News

Sirsi News: ಪ್ರಸಾದ್ ಹೆಗಡೆಗೆ ಗುಜರಾತ್ ನ್ಯಾಷನಲ್ ಲಾ ಯುನಿರ್ವಸಿಟಿಯಿಂದ ಬಿಬಿಎ-ಎಲ್‌ಎಲ್‌ಬಿ ಪದವಿ

Prasad Hegde receives BBA LLB degree from Gujarat National Law University

ಶಿರಸಿ: ದೇಶದ ಪ್ರತಿಷ್ಠಿತ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಒಂದಾದ ಗುಜರಾತ್
ನ್ಯಾಷನಲ್ ಲಾ ಯುನಿರ್ವಸಿಟಿ ನೀಡುವ ಬಿಬಿಎ-ಎಲ್‌ಎಲ್‌ಬಿ ಪದವಿಯನ್ನು ಶಿರಸಿ (Sirsi News) ತಾಲೂಕಿನ
ಹುಳಗೋಳದ ಪ್ರಸಾದ್ ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು.

ಗುಜರಾತ್ ಗಾಂಧಿನಗರದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಾಧೀಶರಾದ ಎಂ.ಆರ್.ಷಾ ಅವರು ಪದವಿ ಪ್ರದಾನ ಮಾಡಿ ಶುಭಕೋರಿದರು. ಈ ವೇಳೆ ಸುಪ್ರೀಂ​ ಕೋರ್ಟ್‌ನ ಮತ್ತೊಬ್ಬ ಹಿರಿಯ ನ್ಯಾಯಾಧೀಶರಾದ ಬಿಲಾ ತ್ರಿವೇದಿ, ಗುಜರಾತ್ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಾದ ಎ.ಜೆ.ದೇಸಾಯಿ ಇದ್ದರು.

2021 ರಲ್ಲಿ ಪದವಿ ಪೂರ್ಣಗೊಳಿಸಿದ್ದ ಪ್ರಸಾದ್ ಹೆಗಡೆ, ಹಿರಿಯ ಸಹಕಾರಿ, ಸಹಕಾರಿ ರತ್ನ ಜಿ.ಎಂ.ಹೆಗಡೆ ಹುಳಗೋಳ ಹಾಗೂ ರಾಧಾ ಹೆಗಡೆ ಅವರ ಮೊಮ್ಮಗ, ಸತೀಶ ಗಜಾನನ ಹೆಗಡೆ ಹಾಗೂ ಆರತಿ ಹೆಗಡೆ ಅವರ ಪುತ್ರರಾಗಿದ್ದಾರೆ. ಪ್ರಸಾದ್ ಹೆಗಡೆ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಉತ್ತಮ ಜ್ಞಾನ ಹಾಗೂ ಕೌಶಲದಿಂದ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಾಧೀಶ ಪಿ.ಎಸ್.ನರಸಿಂಹ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ವಾಕ್ಪ್ರತಿಯೋಗಿತಾ ಸ್ಪರ್ಧೆ; ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ಮಹಾಪಾಠ ಶಾಲೆ ಉತ್ತಮ ಸಾಧನೆ

ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ಮಹಾಪಾಠ ಶಾಲೆಯ ವಿದ್ಯಾರ್ಥಿಗಳು.

ಕಾರವಾರ: ಕಾಶಿಯ ಬನಾರಸ್‌ ಹಿಂದು ವಿಶ್ವವಿದ್ಯಾಲಯದಲ್ಲಿ ಮಾ.22ರಿಂದ 25ರವರೆಗೆ ನಡೆದ 2022-23ನೇ ಸಾಲಿನ ರಾಷ್ಟ್ರಮಟ್ಟದ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ (Uttara Kannada News) ಉಮ್ಮಚಗಿಯ ಶ್ರೀ ಶ್ರೀ ಮಾತಾ ಸಂಸ್ಕೃತ ಮಹಾಪಾಠ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿವಿಧ ವಿಭಾಗಗಳಲ್ಲಿ ಮೂವರು ಪ್ರಥಮ ಸ್ಥಾನ ಹಾಗೂ ಇಬ್ಬರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಾಕ್ಪ್ರತಿಯೋಗಿತಾ ಸ್ಪರ್ಧೆಯ ಸಾಹಿತ್ಯ ಭಾಷಣದಲ್ಲಿ ನಾಗರಾಜ ಭಟ್ಟ ಪ್ರಥಮ, ಜ್ಯೋತಿಷ್ಯ ಶಲಾಕಾ ಸ್ಪರ್ಧೆಯಲ್ಲಿ ಗಣೇಶ ಪ್ರಸಾದ ಭಟ್ಟ ಪ್ರಥಮ, ಜ್ಯೋತಿಷ್ಯ ಭಾಷಣ ಸ್ಪರ್ಧೆಯಲ್ಲಿ ವಿನಾಯಕ ಭಟ್ಟ ದ್ವಿತೀಯ, ಸುಭಾಷಿತ ಕಂಠಪಾಠ ಸ್ಪರ್ಧೆಯಲ್ಲಿ ಸುಮಂತ್ ಜೋಶಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಹಾಗೆಯೇ ಇದೇ ಶಾಲೆಯಲ್ಲಿ ಅಧ್ಯಯನ ಮಾಡಿದ ಪಿಎಚ್‌ಡಿ ವಿದ್ಯಾರ್ಥಿ ಕುಮಾರ ಹೆಗಡೆ ಅಕ್ಷರಶ್ಲೋಕಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 14 ಚಿನ್ನದ ಪದಕ ಪಡೆದು ಕರ್ನಾಟಕ ರಾಜ್ಯವು ಸತತ 41ನೇ ಬಾರಿ ವಿಜಯ ವೈಜಯಂತೀ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ವೇದಭಾಷ್ಯ ಭಾಷಣದಲ್ಲಿ ಮಹೇಶ ಭಟ್ಟ ಹಿತ್ಲಕಾರಗದ್ದೆ ಪ್ರಥಮ

ಮಹೇಶ ಭಟ್ಟ ಹಿತ್ಲಕಾರಗದ್ದೆ

ಕಾಶಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ನಡೆದ 2022-23ನೇ ಸಾಲಿನ ರಾಷ್ಟ್ರಮಟ್ಟದ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ಶ್ರೀ ರಾಜರಾಜೇಶ್ವರೀ ಸಂಸ್ಕೃತ ಮಹಾಪಾಠಶಾಲೆಯ ಕೃಷ್ಣ ಯಜುರ್ವೇದ ವಿದ್ಯಾರ್ಥಿಯಾದ ಮಹೇಶ ಭಟ್ಟ ಹಿತ್ಲಕಾರಗದ್ದೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಕ್ಕೆ ಮತ್ತು ಪಾಠಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಇವರು ವಿ.ಪ್ರಸಾದ ಜೋಶಿ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಯ ಸಾಧನೆಗೆ ಸ್ವರ್ಣವಲ್ಲೀ ಶ್ರೀಗಳು, ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Exit mobile version