ಶಿರಸಿ: ಪುನೀತ್ ರಾಜಕುಮಾರ್ (Puneeth Rajkumar) ನಟನೆಯ ʻಗಂಧದ ಗುಡಿʼ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಗೆಯೇ, ಪುನೀತ್ ಅವರ ಅಭಿಮಾನಿಗಳು ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನ ಮೆರೆಯುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಶಿರಸಿಯಲ್ಲಿ ಅಪ್ಪು ಅಭಿಮಾನಿಗಳು ಚಿತ್ರಮಂದಿರ ದಿನಗೂಲಿ ನೌಕರನ ಪತ್ನಿಯ ಮೃತದೇಹ ತರಲು ಆಸ್ಪತ್ರೆಗೆ ಹಣ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ. ಮೃತದೇಹವನ್ನು ಮನೆಯವರಿಗೆ ಒಪ್ಪಿಸಿದ್ದಾರೆ.
ನಗರದ ನಟರಾಜ ಚಿತ್ರಮಂದಿರದ ದಿನಗೂಲಿ ನೌಕರನಾಗಿರುವ ಪರಶುರಾಮ ಛಲವಾದಿ ಪತ್ನಿ ವನಜಾ ಅವರ ಹೊಟ್ಟೆಯಲ್ಲೇ ಮಗು ಮೃತಪಟ್ಟಿದ್ದು ಸೋಂಕಾಗಿತ್ತು. ಮೃತ ಮಗುವನ್ನು ಹೊರತೆಗೆದು ಮಹಿಳೆಗೆ ಚಿಕಿತ್ಸೆ ನೀಡುವಾಗ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದರು. ಮಹಿಳೆಯ ಮೃತದೇಹ ಕೊಂಡೊಯ್ಯುವ ಮುನ್ನ ಶಿರಸಿಯ ಟಿಎಸ್ಎಸ್ ಆಸ್ಪತ್ರೆ 24,000ರೂ. ಚಾರ್ಜ್ ಮಾಡಿದ್ದರು.
ಪತ್ನಿಯ ಮೃತದೇಹ ಬಿಡಿಸಿಕೊಳ್ಳಲು ಹಣವಿಲ್ಲದೇ ಪರದಾಡಿದ್ದ ಪರಶುರಾಮ ಛಲವಾದಿ ತನ್ನ ನೋವನ್ನು ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಜತೆ ತೋಡಿಕೊಂಡಿದ್ದರು. ವಿಷಯ ತಿಳಿದ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಬಳಗ ತಮ್ಮಲ್ಲಿಯೇ 100- 200ರೂ. ಯಂತೆ ಹಣವನ್ನು ಸಂಗ್ರಹಿಸಿ ಒಟ್ಟು ಸೇರಿಸಿ ಟಿಎಸ್ಎಸ್ ಆಸ್ಪತ್ರೆಗೆ ನೀಡಿದೆ. ಅಪ್ಪು ಅಭಿಮಾನಿ ಬಳಗದ ವಿನಂತಿ ಮೇರೆಗೆ ಆಸ್ಪತ್ರೆ ವೆಚ್ಚವನ್ನು ಖಡಿತಗೊಳಿಸಿ ಮೃತದೇಹವನ್ನು ಬಿಟ್ಟು ಕೊಟ್ಟಿದ್ದಾರೆ. ಪುನೀತ್ ಅಭಿಮಾನಿಗಳು ಮೃತದೇಹವನ್ನು ಪರಶುರಾಮ ಅವರ ಮನೆಗೆ ತಂದು ಕೊಟ್ಟಿದ್ದಾರೆ.
ಇದನ್ನೂ ಓದಿ | Gandhada Gudi | ಗಂಧದ ಗುಡಿ ಇದೊಂದು ಹಬ್ಬ: ಶುಭ ಹಾರೈಸಿದ ಕಿಚ್ಚ ಸುದೀಪ್!