ಚಿಕ್ಕಮಗಳೂರು/ಕಾರವಾರ: ಮಲೆನಾಡಿನಲ್ಲಿ ನಿರಂತರ ಮಳೆಯಿಂದಾಗಿ (rain news) ಅಲ್ಲಲ್ಲಿ ಭಾರಿ ಗುಡ್ಡ ಕುಸಿತ (land fall) ಸಂಭವಿಸಿದೆ. ಜೋಯಿಡಾ ತಾಲೂಕಿನಲ್ಲಿ ಗುಡ್ಡ ಕುಸಿದು ಕೊಂಕಣ ರೈಲ್ವೆ (konkan railway) ಬಂದ್ ಆಗಿದ್ದರೆ, ಚಿಕ್ಕಮಗಳೂರಿನ ಕೊಪ್ಪದಲ್ಲಿ ರಸ್ತೆಯೊಂದು ಪೂರ್ಣ ಕುಸಿದುಹೋಗಿದೆ.
ಕಾರವಾರ: ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್ ಸಮೀಪ ರೈಲ್ವೇಹಳಿ ಮೇಲೆ ಗುಡ್ಡ ಕುಸಿದಿದ್ದು, ಮಳೆಯ ನಡುವೆಯೂ ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.
ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್ ಮೂಲಕ ಹಾದುಹೋಗುವ ಕೊಂಕಣ ರೈಲ್ವೆ ಹಳಿಯಲ್ಲಿ ಕರಂಜೋಲ್ ಎಂಬಲ್ಲಿ ಭಾರೀ ಮಳೆಯಿಂದ ನಿನ್ನೆ ಗುಡ್ಡಕುಸಿತವಾಗಿತ್ತು. ಹಳಿಯ ಮೇಲೆ ಬಿದ್ದಿದ್ದ ಭಾರೀ ಪ್ರಮಾಣದ ಮಣ್ಣು, ಮರದ ಅವಶೇಷಗಳಿಂದಾಗಿ ಒಂದು ಸುರಂಗದ ಮುಂಭಾಗವೇ ಮುಚ್ಚಿಹೋಗಿತ್ತು. ಇದರ ಪರಿಣಾಮ ಹುಬ್ಬಳ್ಳಿ-ಗೋವಾ ನಡುವಿನ ರೈಲು ಸಂಚಾರ ನಿನ್ನೆಯಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ನಿನ್ನೆಯಿಂದ ಮೂರು ಹಿಟಾಚಿಗಳ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ರೈಲ್ವೇ ಸಿಬ್ಬಂದಿ ಮತ್ತು ಕಾರ್ಮಿಕರು ಮಣ್ಣು ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಭಾಗಶಃ ತೆರವುಗೊಂಡಿದೆ.
ಕೊಪ್ಪದಲ್ಲಿ ರಸ್ತೆ ಕುಸಿತ
ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಮಳೆಯ ಅಬ್ಬರಕ್ಕೆ ಬಾರಿ ಪ್ರಮಾಣದ ಭೂಕುಸಿತ ಕೊಪ್ಪ ತಾಲೂಕಿನ ಹೆರೂರು ಗ್ರಾಮದಲ್ಲಿ ನಡೆದಿದೆ. ಸುಮಾರು ಏಳಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಸುಮಾರು 90 ಅಡಿಯಷ್ಟು ಕುಸಿದಿದೆ.
ಶಾಂತಿ ಕೂಡಿಗೆ, ಶುಂಠಿ ಕೂಡಿಗೆ, ಬಿಟ್ಟ ಕೂಡಿಗೆ ಗ್ರಾಮಸ್ಥರ ಸಂಪರ್ಕ ರಸ್ತೆ ಇದಾಗಿದ್ದು, ಮತ್ತಷ್ಟು ಕುಸಿಯುವ ಭೀತಿಯಲ್ಲಿದೆ. ಮಳೆ ಹೆಚ್ಚಾದಂತೆ ಸ್ವಲ್ಪ ಸ್ವಲ್ಪವೇ ಭೂಮಿ ಜರಿಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೆರೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಈ ಗ್ರಾಮಗಳು ಸಂಪರ್ಕ ಕಡಿತದ ಆತಂಕ ಎದುರಿಸುತ್ತಿವೆ.
ಇದನ್ನೂ ಓದಿ: Rain News : ಮಳೆ ಹೊಡೆತಕ್ಕೆ ಗುಡ್ಡಕುಸಿತ; ಬಿಸಿಲೆ- ಸುಬ್ರಹ್ಮಣ್ಯ, ಮಡಿಕೇರಿ-ಮಂಗಳೂರು ರಸ್ತೆ ಬ್ಲಾಕ್