ಕಾರವಾರ: ಸ್ಕೂಟಿಗಳ ನಡುವೆ ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿ ಒಬ್ಬ ಸವಾರ ಸಾವಿಗೀಡಾಗಿದ್ದು, ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಸದಾಶಿವಗಡ- ಕದ್ರಾ ರಸ್ತೆಯಲ್ಲಿ ತಡರಾತ್ರಿ ಘಟನೆ ನಡೆದಿದೆ.
ಕೊಂಕಣ ರೈಲ್ವೇ ಉದ್ಯೋಗಿಯಾಗಿದ್ದ ಸಚಿನ್ ನಾಯ್ಕ ಮೃತ ದುರ್ದೈವಿ. ಜಗದೀಶ ನಾಗೇಕರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಕೂಟಿ ಚಲಾಯಿಸುತ್ತಿದ್ದ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ. ಡಿಕ್ಕಿಯ ರಭಸಕ್ಕೆ ಒಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದು, ಗಂಭೀರ ಗಾಯಗೊಂಡ ಸವಾರನನ್ನು ಕ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಿಂತಿದ್ದ ಲಾರಿಗೆ ಗೂಡ್ಸ್ ಡಿಕ್ಕಿ, ಚಾಲಕ ಸಾವು
ಗದಗ: ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಬಂದ ಗೂಡ್ಸ್ ಲಾರಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಗೂಡ್ಸ್ ಲಾರಿಯ ಚಾಲಕ ಮೃತಪಟ್ಟಿದ್ದಾನೆ. ಗದಗ ನಗರದ ಹೊಸಪೇಟೆ ಹುಬ್ಬಳ್ಳಿ ಬೈಪಾಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ ನಡೆದಿದೆ.
ಗದಗ ನಗರದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಮಧ್ಯರಾತ್ರಿ ಟೈರ್ ಬ್ಲಾಸ್ಟ್ ಆದ ಹಿನ್ನೆಲೆಯಲ್ಲಿ ಲಾರಿ ರಸ್ತೆ ಮೇಲೆ ನಿಲ್ಲಿಸಿತ್ತು. ಈ ವೇಳೆ ಹುಬ್ಬಳ್ಳಿ ಕಡೆ ತೆರಳುತ್ತಿದ್ದ ಮತ್ತೊಂದು ಗೂಡ್ಸ್ ಲಾರಿ ವೇಗವಾಗಿ ಬಂದು ಗುದ್ದಿದೆ. ಗೂಡ್ಸ್ ಲಾರಿಯ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಡಿಕ್ಕಿಯಾಗಿರುವ ಲಾರಿ ಆಂಧ್ರ ಮೂಲದ ಅನಂತಪುರದ್ದು. ಕರಿಬೇವು ಸೊಪ್ಪನ್ನು ಸಾಗಿಸುತ್ತಿತ್ತು. ಅಪಘಾತದ ರಭಸಕ್ಕೆ ಗೂಡ್ಸ್ ಲಾರಿ ಮುಂದಿನ ಭಾಗ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ 108 ಅಂಬ್ಯುಲೆನ್ಸ್, 112 ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಗೂಡ್ಸ್ ಲಾರಿಯ ಚಾಲಕನನ್ನ ಹೊರತೆಗೆಯಲು ಹರಸಾಹಸಪಟ್ಟರಾದರೂ, ಜೀವ ಉಳಿಸಲಾಗಲಿಲ್ಲ.
ಇದನ್ನೂ ಓದಿ: Compound Collapse: ಚರಂಡಿ ಕಾಮಗಾರಿ ವೇಳೆ ಮನೆ ಕಾಂಪೌಂಡ್ ಕುಸಿದು ಕಾರ್ಮಿಕ ಸಾವು, ಮತ್ತೊಬ್ಬನಿಗೆ ಗಾಯ