Site icon Vistara News

ಯಲ್ಲಾಪುರದ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್‌ನಲ್ಲಿ ಶಾಲಾ ಸಂಸತ್‌ ರಚನೆ

vishwadarshana school yellapur

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್‌ನಲ್ಲಿ ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಮಂಗಳವಾರ ನಡೆಯಿತು.

ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆ ಪ್ರಕ್ರಿಯೆಯ ಅರಿವು ಮೂಡಿಸಲು ಹಾಗೂ ಮತದಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಚುನಾವಣೆಯನ್ನು ಆಯೋಜಿಸಲಾಗಿದ್ದು,ಜೂ.16 ರಂದು ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತ್ತು. 6ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಹಂತಗಳಲ್ಲಿ ಚುನಾವಣೆಯನ್ನು ನಡೆಸಲಾಗಿತ್ತು.

ಜೂ.18 ರಂದು ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿ 20 ರಂದು ನಾಮಪತ್ರ ಪರಿಶೀಲನೆ ನಡೆಸಿ 21 ರಂದು ನಾಮಪತ್ರ ಹಿಂಪಡೆಯಲು ಗಡುವು ನೀಡಲಾಗಿತ್ತು. 22 ರಂದು ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿ 23 ರಂದು ಚುನಾವಣಾ ಪ್ರಚಾರ ಕಾರ್ಯ ನಡೆಸಿ 25 ರಂದು ಮತದಾನ ಪ್ರಕ್ರಿಯೆ ನಡೆದಿತ್ತು. ಸೋಮವಾರ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿಜೇತ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲಾಗಿತ್ತು.

ಮಂಗಳವಾರ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧನೆ ಪ್ರಕ್ರಿಯೆ ನಡೆಯಿತು. ಸಮಾಜ ವಿಜ್ಞಾನ ವಿಷಯ ಶಿಕ್ಷಕರಾದ ಆಸ್ಮಾ ಶೇಖ್, ಕವಿತಾ ಹೆಬ್ಬಾರ, ಉಷಾ ಭಟ್ಟ, ಪಲ್ಲವಿ ಕೊಮಾರ, ಗಣೇಶ ಭಟ್ ಸೇರಿದಂತೆ ಇತರೆ ಶಿಕ್ಷಕರ ಸಹಕಾರ, ಮಾರ್ಗದರ್ಶನದಲ್ಲಿ ಈ ಚುನಾವಣೆ ನಡೆದಿತ್ತು.

ವಿದ್ಯಾರ್ಥಿ ಪ್ರತಿನಿಧಿಯಾಗಿ ಪ್ರಣವ್ ಶಾನಭಾಗ, ವಿದ್ಯಾರ್ಥಿ ಉಪ ಪ್ರತಿನಿಧಿಯಾಗಿ ಮೀನಾಜ್ ಖಲೀಫ್, ಕ್ರೀಡಾ ಪ್ರತಿನಿಧಿಯಾಗಿ ಸಾಲೀಂ ಶೇಕ್, ಸಾಂಸ್ಕೃತಿಕ ಪ್ರತಿನಿಧಿಯಾಗಿ ಸಹನಾ ಭಾಗ್ವತ್, ಶಿಸ್ತು ಪರಿಪಾಲನಾ ಸಮಿತಿಯ ಪ್ರತಿನಿಧಿಯಾಗಿ ಚೈತನ್ಯ ದುಂಡಿ,10ನೇ ತರಗತಿ ಪ್ರತಿನಿಧಿಯಾಗಿ ನಿಖಿಲ್ ಹೆಗಡೆ, 9ನೇ ತರಗತಿಯ ಪ್ರತಿನಿಧಿಯಾಗಿ ಪ್ರಥಮ್ ಭಟ್ , 8ನೇ ತರಗತಿಯ ಪ್ರತಿನಿಧಿಯಾಗಿ ಸಾರ್ಥಕ ಪೂಜಾರಿ, 7 ನೇ ತರಗತಿ ಪ್ರತಿನಿಧಿಯಾಗಿ ಆತ್ಮಿಕಾ ಗಾಂವ್ಕರ್, ಹಾಗೂ 6ನೇ ತರಗತಿಯ ಪ್ರತಿನಿಧಿಯಾಗಿ ಸಮರ್ಥ್ ಮರಾಠಿ ಆಯ್ಕೆಗೊಂಡಿದ್ದು ಎಲ್ಲಾ ಪ್ರತಿನಿಧಿಗಳು ಪ್ರಮಾಣವಚನ ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾಕ್ಟರ್ ಎಸ್. ಎಲ್. ಭಟ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿನಿಧಿಗಳ ಜವಾಬ್ದಾರಿ ಹಾಗೂ ಕರ್ತವ್ಯದ ಕುರಿತು ವಿವರಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಸಂಘಟನೆಯ ಮಹತ್ವ ಹಾಗೂ ನಾಯಕತ್ವ ಗುಣಗಳ ಕುರಿತು ಮಾತನಾಡಿದರು. ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಮಹಾದೇವಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಆಯ್ಕೆಯಾದ ಎಲ್ಲ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹಾಗೂ ಕಾರ್ಯದರ್ಶಿ ನರಸಿಂಹ ಕೋಣೆಮನೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ| ವಿಶ್ವದರ್ಶನ ಶಾಲೆಯಲ್ಲಿ ಟ್ಯಾಲೆಂಟ್ ಫೆಸ್ಟ್‌; 400 ವಿದ್ಯಾರ್ಥಿಗಳಿಂದ ಪ್ರತಿಭೆ ಪ್ರದರ್ಶನ

Exit mobile version