Site icon Vistara News

Sirsi News: ಶಕ್ತಿ ಯೋಜನೆ ಎಫೆಕ್ಟ್‌: ಉ.ಕ ಜಿಲ್ಲೆಯಲ್ಲಿ ಸ್ಥಳೀಯರಿಗೆ ಬಸ್‌ ಇಲ್ಲದೇ ಪರದಾಟ

Shakti Scheme Effect, In Uttara Kannada district locals and students are facing problems without buses

ಭಾಸ್ಕರ್ ಆರ್ ಗೆಂಡ್ಲ, ವಿಸ್ತಾರ ನ್ಯೂಸ್

ಶಿರಸಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದಾಗಿ (Shakti Scheme) ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರಗಳೇ ಹೆಚ್ಚಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada District) ಪ್ರತಿದಿನ ಎರಡು ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಸ್ಥಳೀಯ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ದೊರಕದೇ ಹಿಡಿ ಶಾಪ ಹಾಕುವಂತಾಗಿದೆ.

ಹೌದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ಸುಗಳೇ ಪ್ರಯಾಣಿಕರಿಗೆ ಆಧಾರ. ಹೀಗಾಗಿ ಜಿಲ್ಲೆಯ ಬಹುತೇಕ ಜನರು ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಆದರೆ ಉಚಿತ ಬಸ್ ವ್ಯವಸ್ಥೆಯಿಂದಾಗಿ ಜಿಲ್ಲೆಗೆ ಬರುವ ಮಹಿಳಾ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನಾನಾ ಭಾಗಗಳಿಂದ ಪ್ರತಿ ದಿನ 2 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಇನ್ನು ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ಸ್ಥಳೀಯವಾಗಿ ತೆರಳುವ ಬಸ್‌ಗಳ ಮಾರ್ಗ ಬದಲು ಮಾಡಿದ್ದು, ಇದರಿಂದ ಹಳ್ಳಿಗಾಡಿಗೆ ತೆರಳುವ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ದಿನ ಒಂದು ಲಕ್ಷದ ಐವತ್ತು ಸಾವಿರ ಪ್ರಯಾಣಿಕರು ಪ್ರಯಾಣಿಸುತಿದ್ದರು. ಆದರೆ ಶಕ್ತಿ ಯೋಜನೆ ಅನುಷ್ಠಾನ ಆದ ನಂತರ ಇದರ ಸಂಖ್ಯೆ ಎರಡು ಲಕ್ಷದ ಮೂವತ್ತೈದು ಸಾವಿರಕ್ಕೂ ಹೆಚ್ಚಾಗಿದೆ. ಅದರಲ್ಲಿ ಪ್ರತಿ ದಿನ 50 ಸಾವಿರದವರೆಗೆ ಮಹಿಳಾ ಪ್ರಯಾಣಿಕರೇ ಪ್ರಯಾಣಿಸುತಿದ್ದು, ಜಿಲ್ಲೆಯಲ್ಲಿ ವಾಯುವ್ಯ ಸಾರಿಗೆ ಸಂಸ್ಥೆ ಆದಾಯವು 45 ಲಕ್ಷದಿಂದ 70 ಲಕ್ಷ ಏರಿಕೆ ಕಂಡಿದೆ.

ಆದರೆ ಬಸ್‌ಗಳ ಹಾಗೂ ಚಾಲಕರ ಕೊರತೆ ಇರುವುದರಿಂದ ಸ್ಥಳೀಯ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಜಿಲ್ಲೆಯಲ್ಲಿ 120 ಚಾಲಕ-ನಿರ್ವಾಹಕರ ಅವಶ್ಯಕತೆ ಇದ್ದು, 50 ಬಸ್‌ಗಳು ಹೆಚ್ಚುವರಿ ಬೇಕಾಗಿದೆ. ಹೀಗಿದ್ದರೂ ಹತ್ತು ವರ್ಷಕ್ಕೂ ಹೆಚ್ಚು ಮೀರಿದ 70 ಕ್ಕೂ ಹೆಚ್ಚು ಬಸ್‌ಗಳಿದ್ದು ಇವುಗಳ ಜತೆ ಹೊರ ರಾಜ್ಯಕ್ಕೆ ತೆರಳುವ ಬಸ್‌ಗಳನ್ನು ಸಹ ಸ್ಥಳೀಯ ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ . ಇನ್ನು ಗುತ್ತಿಗೆ ಆಧಾರದ ಮೇಲೆ 50 ಜನ ಖಾಸಗಿ ಚಾಲಕರನ್ನು ಸಹ ತೆಗೆದುಕೊಳ್ಳಲಾಗಿದೆ. ಹೀಗಿದ್ದರೂ ಬಸ್‌ಗಳ ಕೊರತೆಯಿಂದ 50 ಕ್ಕೂ ಹೆಚ್ಚು ಮಾರ್ಗಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸಲು ವಾಯುವ್ಯ ಸಾರಿಗೆ ಪರದಾಡುತ್ತಿದೆ.

ಶಿರಸಿ ಬಸ್‌ ಡಿಪೋ.

ಒಟ್ಟಾರೆ ಶಕ್ತಿ ಯೋಜನೆಯಿಂದ ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಲಾಭವೇನೋ ಆಗುತ್ತಿದೆ. ಆದರೆ ಬಸ್‌ಗಳ ಕೊರತೆಯಿಂದಾಗಿ ಸ್ಥಳೀಯ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ತೊಡಕಾಗುತಿದ್ದು, ಪ್ರಯಾಣಿಕರು ಹಿಡಿ ಶಾಪ ಹಾಕುವಂತಾಗಿದೆ. ಇನ್ನಾದರೂ ಸಾರಿಗೆ ಇಲಾಖೆ ಇರುವ ಬಸ್‌ಗಳನ್ನು ಮಾರ್ಗ ಬದಲು ಮಾಡುವ ಬದಲು ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಬೇಕಿದೆ ಎಂದು ಸ್ಥಳೀಯ ನಿವಾಸಿಯಾದ ಶ್ರೀಪತಿ ಹೆಗಡೆ ಒತ್ತಾಯಿಸಿದ್ದಾರೆ.

ಗುತ್ತಿಗೆ ಆಧಾರದ ಮೇಲೆ 50 ಜನ ಖಾಸಗಿ ಚಾಲಕರನ್ನು ಸಹ ತೆಗೆದುಕೊಳ್ಳಲಾಗಿದೆ. ಹೀಗಿದ್ದರೂ ಬಸ್‌ಗಳ ಕೊರತೆಯಿಂದ 50 ಕ್ಕೂ ಹೆಚ್ಚು ಮಾರ್ಗಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಮಹಿಳಾ ಪ್ರಯಾಣಿಕರ ಹಣವನ್ನು ಸರ್ಕಾರ ಭರಿಸುತ್ತಿದ್ದು, ಇಲಾಖೆ ಲಾಭದಾಯಕವಾಗಿದೆ. ಇನ್ನು ನಮ್ಮಲ್ಲಿಯ ಸಿಬ್ಬಂದಿಗಳ ನೇಮಕ ಆದರೆ ಇನ್ನೂ ಹೆಚ್ಚಿನ ಲಾಭದತ್ತ ಇಲಾಖೆ ಮುಂದುವರಿಯಲಿದೆ.

ಶ್ರೀನಿವಾಸ್ ಕೆ.ಎಚ್. ಡಿಸಿ, ವಾಯವ್ಯ ರಸ್ತೆ ಸಾರಿಗೆ ಇಲಾಖೆ. ಶಿರಸಿ ವಿಭಾಗ

Exit mobile version