ಯಲ್ಲಾಪುರ : ಪರಿಸರದಿಂದ ನಾವೆಲ್ಲರೂ ಬಹಳಷ್ಟು ಪಾಠಗಳನ್ನು ಕಲಿಯಬಹುದು. ಸಣ್ಣ ಸಣ್ಣ ಸಂಗತಿಗಳನ್ನು ಪ್ರಶ್ನಿಸುತ್ತಾ ಹೋದಾಗ ಪರಿಸರದ ಕುರಿತು ಆಳವಾದ ಅರಿವು ಮೂಡಲು ಸಾಧ್ಯ ಎಂದು ಪರಿಸರ ಬರಹಗಾರ, ಜಲ ತಜ್ಞ ಶಿವಾನಂದ ಕಳವೆ ಹೇಳಿದ್ದಾರೆ.
ಅವರು ಇಲ್ಲಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ʼಪರಿಸರ ಸಂರಕ್ಷಣಾ ದಿನʼದ ಪ್ರಯುಕ್ತ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪರಿಸರದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಮಕ್ಕಳು ಬೆಳೆಯುವಾಗ ಪರಿಸರ ನೋಡುತ್ತಾ ಕಲಿಯುತ್ತಾರೆ. ಆದರೆ ನಂತರ ನಿಸರ್ಗವನ್ನು ಮರೆಯುವ ಪ್ರಸಂಗಗಳು ಎದುರಾಗುತ್ತವೆ ಎಂದು ವಿವರಿಸಿದ ಅವರು ಸಸಿ ನೆಟ್ಟು ನೀರನ್ನು ಒದಗಿಸುವುದು ಹೇಗೆಂಬ ಬಗ್ಗೆ ನಾವು ಯೋಚಿಸುತ್ತೇವೆ. ಗಿಡಮರಗಳು ತಮ್ಮ ತೋಗಟೆಗಳಲ್ಲಿ ನೀರನ್ನು ಬಹುಕಾಲದವರೆಗೆ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಕೂಡ ಹೊಂದಿರುತ್ತವೆ. ಬರದಲ್ಲೂ ಬದುಕುವ ತಾಕತ್ತು ಕೆಲವು ಮುಳ್ಳಿನ ಗಿಡಗಳಿವೆ ಎಂದು ಹೇಳಿದರು.
ಹಿಂದೆ ಶ್ರೀಮಂತಿಕೆಯನ್ನು ಅಳೆಯುವ ಮಾನದಂಡಗಳು ಬೇರೆ ಬೇರೆ ಇದ್ದವು. ಆದರೆ ಇಂದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಜಮೀನನ್ನು ಆಧರಿಸಿ ಶ್ರೀಮಂತಿಕೆಯನ್ನು ಅಳೆಯುವ ಪದ್ಧತಿ ಬಂದಿದೆ ಎಂದು ಬದಲಾದ ಪರಿಸ್ಥಿತಿಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟ ಶಿವಾನಂದ ಕಳವೆ ಅವರು, ಹಿಂದೆಲ್ಲಾ ಶಾಲೆ ಕಟ್ಟುವುದು, ರಸ್ತೆ ಮಾಡಿಸುವುದು, ಕೆರೆ ನಿರ್ಮಿಸುವುದು ನಿಜವಾದ ನಾಯಕನ ಲಕ್ಷಣಗಳಾಗಿರುತ್ತಿದ್ದವು. ಆದರೆ ಇಂದು ಅದು ಬದಲಾಗಿದೆ. ಈಗ ದುಡ್ಡಿದ್ದವರು ನಾಯಕರಾಗುತ್ತಿದ್ದಾರೆ ಎಂದು ಹೇಳಿದರು.
ನಮ್ಮ ನಮ್ಮಲ್ಲಿಯೇ ಪರಿಸರ ಸಂರಕ್ಷಣೆಯ ಜವಾಬ್ದಾರಿ ಮೂಡಿಬರಬೇಕು. ಆಗ ಮಾತ್ರ ಈ ನಮ್ಮ ಪರಿಸರದ ಉಳಿವು ಸಾಧ್ಯ ಎಂದ ಅವರು, ಅನೇಕ ಚಿತ್ರಗಳನ್ನು ಪ್ರದರ್ಶಿಸಿ. ಈ ಮೂಲಕ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಸಂಪೂರ್ಣವಾದ ಅರಿವನ್ನು ಮೂಡಿಸಿದರು.
ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಪ್ರತಿದಿನವೂ ಪರಿಸರ ದಿನವಾಗಬೇಕು ಎಂದು ಹೇಳಿದರಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿದ ಹಿರಿಯರನ್ನು ಸಂಸ್ಥೆಗೆ ಕರೆಯಿಸಿ, ಅವರನ್ನು ಗೌರವಿಸಿ ನಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತ ಶಂಕರ್ ಮಾತನಾಡಿ, ಮನುಷ್ಯ ಐಷಾರಾಮಿ ಬದುಕಿನಿಂದ ಹೊರಬರಬೇಕಾಗಿದೆ. ಪಾಶ್ಚಾತ್ಯರ ಅನುಕರಣೆಯಿಂದ ಪರಿಸರ ಶೋಷಣೆ ನಿರಂತರವಾಗುತ್ತಿದೆ ಎಂದರಲ್ಲದೆ, ತಜ್ಞರಾದ ಶಿವಾನಂದ ಕಳವೆಯವರ ಸಾಧನೆಯನ್ನು ಕಂಡಾಡಿ, ಬರವಣಿಗೆ ಮೂಲಕ ಸಮಾಜದ ಋಣ ತೀರಿಸುವ ಇಂತವರ ಮಾರ್ಗದರ್ಶನ ಸದಾ ನಮ್ಮ ಸಂಸ್ಥೆಯ ಜೊತೆಗಿರಲಿ ಎಂದು ಕೋರಿದರು.
ಈ ವೇಳೆ ಶಿಕ್ಷಕಿ ಖೈರುನ್ ಶೈಖ್, ಗೀತಾ ಹೆಚ್ ವಿ, ಪ್ರೇಮಾ ಗಾಂವ್ಕರ್, ಮಹೇಶ ನಾಯ್ಕ ಶಿಕ್ಷಣ ಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | ಸ್ವಚ್ಛ ವಿದ್ಯಾಲಯ ಪುರಸ್ಕಾರ ಪಡೆದ ಯಲ್ಲಾಪುರ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್