Site icon Vistara News

Shivaram Hebbar: ಇನ್ನು ಮುಂದೆ ನನ್ನ ರಾಜಕಾರಣ ಬದಲಾಗಲಿದೆ: ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌

#image_title

ಬನವಾಸಿ: “ನಾನು ಯಾವುದೇ ಸಮಯದಲ್ಲಿ ಜಾತಿ ರಾಜಕಾರಣ ಮಾಡುವುದಿಲ್ಲ. ನೀತಿ ರಾಜಕಾರಣ ಮಾಡುವವನು. ಬಡವರ ಪರ, ಧರ್ಮದ ಪರ ರಾಜಕಾರಣವನ್ನು ಮಾಡುವವನು” ಎಂದು ಶಾಸಕ ಶಿವರಾಮ್ ಹೆಬ್ಬಾರ್ (Shivaram Hebbar) ಹೇಳಿದರು.

ಸೋಮವಾರ ಸಂಜೆ ಪಟ್ಟಣದ ನಾಮದೇವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ನಾನು ಕಳೆದ ನಾಲ್ಕು ದಶಕದಿಂದ ದ್ವೇಷದ ರಾಜಕಾರಣ, ಅನ್ಯಾಯ ಹಾಗೂ ವಿರೋಧದ ರಾಜಕಾರಣ ಮಾಡಿಕೊಂಡು ಬಂದವನಲ್ಲ. ವಿರೋಧಿಗಳನ್ನು ಪ್ರೀತಿಯಿಂದ ಕಂಡವನು. ಈ ಸಲ ರಾಜ್ಯದ ರಾಜಕಾರಣದಲ್ಲಿ ನನಗೆ ಬಹಳ ಕಷ್ಟದ ಗೆಲುವನ್ನು ತಂದು ಕೊಟ್ಟಿದ್ದೀರಿ. ಬಹಳ ಜನ ಪಕ್ಷದಲ್ಲಿಯೇ ಇದ್ದು ಪಕ್ಷಕ್ಕೆ ಚೂರಿ ಹಾಕುವ, ಮೋಸ ಮಾಡುವ ಕೆಲಸ ಮಾಡಿದ್ದಾರೆ. ಆಡಳಿತ ಪಕ್ಷದಲ್ಲಿದ್ದು ಗಟ್ಟಿಯಾದ ಶಾಸಕನಾಗಿ, ಮಂತ್ರಿಯಾಗಿದ್ದು ರಾಜ್ಯದಲ್ಲಿ ಹಿಡಿತವನ್ನು ಇಟ್ಟುಕೊಂಡಿದ್ದರೂ ಯಾವತ್ತೂ ಯಾರಿಗೂ ಮೋಸ, ದ್ರೋಹ ಮಾಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ವಿಶ್ವಾಸವನ್ನು ಇಟ್ಟುಕೊಂಡವನು. ವಿರೋಧಿಗಳನ್ನು ಪ್ರೀತಿಯಿಂದ ಕಂಡಿದ್ದು ನನಗೆ ಅಪಾಯವಾಯಿತೇನೊ ಎಂಬ ಅನಿಸಿಕೆ ಮೂಡುತ್ತಿದೆ” ಎಂದರು.

ಇದನ್ನೂ ಓದಿ: Karnataka Election: ಜನರಿಗಾಗಿ ಬದುಕಿದ್ದೇನೆ, ಮೋಸ ಮಾಡುವ ಅವಶ್ಯಕತೆಯಿಲ್ಲ: ಸಚಿವ ಶಿವರಾಮ್‌ ಹೆಬ್ಬಾರ್‌

“ಇನ್ನು ಮುಂದೆ ನನ್ನ ರಾಜಕಾರಣ ಬದಲಾವಣೆ ಆಗುತ್ತದೆ. ವಿಷವನ್ನು ನುಂಗಿದ ವಿಷಕಂಠನಾಗುತ್ತೇನೆ. ಯಾರಿಗೆ ಬಿಜೆಪಿ ಮೇಲೆ ವಿಶ್ವಾಸವಿದೆ ಅವರು ಮಾತ್ರ ಬಿಜೆಪಿ ಪಕ್ಷದಲ್ಲಿ ಉಳಿಯಬೇಕು. ಕೇಂದ್ರದಲ್ಲಿ ನರೇಂದ್ರ ಮೋದಿ ಬೇಕು, ಯಲ್ಲಾಪುರ ಕ್ಷೇತ್ರದಲ್ಲಿ ಹೆಬ್ಬಾರ ಬೇಡ ಎಂಬ ರೀತಿಯಲ್ಲಿ ರಾಜಕಾರಣ ಮಾಡುವವವರಿಗೆ ಪಕ್ಷದಲ್ಲಿ ಜಾಗವಿಲ್ಲ. ನನ್ನ ವೈಯಕ್ತಿಕ ತೇಜೋವಧೆ ಮಾಡುತ್ತಿರುವ ಜನ ತಾಕತ್ತಿದ್ದರೆ ರಾಜಕಾರಣದಲ್ಲಿ ಎದುರಿಸಿ. ಗೆಲ್ಲಿಸುವುದು ತುಂಬಾ ಕಷ್ಟ, ಸೋಲಿಸುವುದು ತುಂಬಾ ಸುಲಭ ಎಂದು ಹೇಳಿದರು.

ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಿರುಗಾಳಿ ವಿರುದ್ಧ ಜಯ ಸಾಧಿಸಿದ್ದೇನೆ. ಈ ಬಾರಿ ಕಾಂಗ್ರೆಸ್ ಬಿರುಗಾಳಿಯ ನಡುವೆ ಗೆಲುವು ಸಾಧಿಸಿದ್ದೇನೆ. ಎರಡು ಬಾರಿಯು ನಿಮ್ಮೆಲ್ಲರ ಆಶೀರ್ವಾದ, ವಿಶ್ವಾಸದಿಂದ ಬಿರುಗಾಳಿಯ ವಿರುದ್ಧ ಜಯಗಳಿಸಿದ್ದೇನೆ. ಯಾವುದೇ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಟಾರ್ ಪ್ರಚಾರಕರನ್ನು ನನ್ನ ಕ್ಷೇತ್ರಕ್ಕೆ ಕರೆಸಲಿಲ್ಲ. ಕ್ಷೇತ್ರದ ಕಾರ್ಯಕರ್ತರೇ ನನ್ನ ಸ್ಟಾರ್ ಪ್ರಚಾರಕರು. ನನ್ನನ್ನು ನಾಲ್ಕನೆಯ ಬಾರಿಗೆ ವಿಧಾನಸಭೆಗೆ ಆಯ್ಕೆ ಮಾಡಿದ ಕ್ಷೇತ್ರದ ಜನರಿಗೆ ಕೋಟಿ ನಮನಗಳು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ ಎನ್ನುವ ಆತಂಕ ಕ್ಷೇತ್ರದ ಜನತೆಗೆ ಬೇಡ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳುವುದು ಶಾಸಕನಾಗಿ ನನ್ನ ಹಕ್ಕು. ವಿರೋಧ ಪಕ್ಷದಲ್ಲಿದ್ದರೂ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇನೆ” ಎಂದರು.

ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ನರಸಿಂಹ ಹೆಗಡೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ್, ಗ್ರಾಪಂ ಅಧ್ಯಕ್ಷರಾದ ತುಳಸಿ ಆರೇರ, ಪ್ರಸನ್ನ ಹೆಗಡೆ, ಮುಖಂಡರಾದ ದ್ಯಾಮಣ್ಣ ದೊಡ್ಮನಿ, ಗಣೇಶ ಸಣ್ಣಲಿಂಗಣ್ಣನವರ, ಎಪಿಎಂಸಿ ಸದಸ್ಯರಾದ ಶಿವಕುಮಾರ್ ಗೌಡ, ಪ್ರಶಾಂತ ಗೌಡ, ಮಲ್ಲಸರ್ಜನ್ ಗೌಡ, ಗಣಪತಿ ನಾಯ್ಕ್, ಪ್ರಸಾದ ಭಟ್ ಮಾತನಾಡಿದರು.

ಇದನ್ನೂ ಓದಿ: Karnataka Election 2023: ಸಿಎಂ ಬಳಿಕ ಸಂಪುಟ ಪ್ಲ್ಯಾನ್‌; ಸಚಿವರ ಆಯ್ಕೆಗೆ ಹೈಕಮಾಂಡ್‌ 10 ಅಂಶ ಸೂತ್ರ

ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳಿಂದ ಶಾಸಕರನ್ನು ಸನ್ಮಾನಿಸಲಾಯಿತು. ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರದ ಅಧ್ಯಕ್ಷರು, ಬಿಜೆಪಿ ಮುಖಂಡರು, ಸಾವಿರಾರು ಬಿಜೆಪಿ ಕಾರ್ಯಕರ್ತರು ಇದ್ದರು.

Exit mobile version