ಗೋಕರ್ಣ: ಮಕ್ಕಳು ತಮ್ಮ ಇಡೀ ಜೀವನದಲ್ಲಿ ಶುದ್ಧತೆ ಕಳೆದುಕೊಳ್ಳದಂತೆ ಮಾರ್ಗದರ್ಶನ ನೀಡುವುದೇ ನಿಜವಾದ ಶಿಕ್ಷಣ (Education) ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ತಿಳಿಸಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವಭೌಮ ಗುರುಕುಲದ ವಿದ್ಯಾಪರ್ವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಕ್ಕಳು ದೇವರ ಸಮಾನ, ಗಂಗೆಯ ಸಮಾನ. ಗಂಗಾನದಿಯ ಮೂಲವಾದ ಗಂಗೋತ್ರಿ ಅತ್ಯಂತ ಪವಿತ್ರ. ನದಿ ಹರಿದಂತೆಲ್ಲ ನಾವು ಅದನ್ನು ಮಲಿನ ಮಾಡುತ್ತಿದ್ದೇವೆ. ಅಂತೆಯೇ ಮಕ್ಕಳ ಬಾಲ್ಯ ಗಂಗೋತ್ರಿಯಂತೆ ಪರಮ ಪವಿತ್ರ. ಅವರ ಬದುಕನ್ನು ಸಮಾಜ ಮಲಿನಗೊಳಿಸುತ್ತದೆ. ಮಕ್ಕಳು ತಮ್ಮ ಶುದ್ಧತೆ ಹಾಗೂ ಪಾವಿತ್ರ್ಯವನ್ನು ಜೀವನವಿಡೀ ಉಳಿಸಿಕೊಳ್ಳುವಂತೆ ಮಾರ್ಗದರ್ಶನ ನೀಡುವುದೇ ನಿಜವಾದ ಶಿಕ್ಷಣ ಎಂದು ವಿಶ್ಲೇಷಿಸಿದರು.
ದೇವರಂತೆ ಬಾಳುವುದನ್ನು ಕಲಿಸುವುದೇ ವಿದ್ಯೆ. ಬದುಕಿನ ಪಾಪ, ಅಕಾರ್ಯಗಳು ಆತ್ಮಕ್ಕೆ ಅಂಟಿದ ಕಳಂಕವಾಗಿ ಮಾರ್ಪಡುತ್ತವೆ. ಶುದ್ಧತೆ ಮತ್ತು ಮುಗ್ಧತೆ ಬಾಳಿನಲ್ಲಿ ವಿಜೃಂಭಿಸಬೇಕು, ಕೃತ್ರಿಮತೆ ಇರಬಾರದು. ಅಂಥ ಬದುಕನ್ನು ಕಟ್ಟಿಕೊಳ್ಳುವಂತೆ ಶಿಕ್ಷಣ ಪ್ರೇರೇಪಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: National youth Day : ನಾಳೆ ಪಾವಗಡದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ; ವಿಸ್ತಾರ ನ್ಯೂಸ್ ವಿಶೇಷ ಕಾರ್ಯಕ್ರಮ
ಮಕ್ಕಳು ಕಿಡಿ ಇದ್ದಂತೆ. ಅವರು ಭವಿಷ್ಯದಲ್ಲಿ ದೇಶಕ್ಕೆ ಬೆಳಕಾಗುವಂತೆ ಬೆಳೆಸಬೇಕು. ಸರಿಯಾಗಿ ಬೆಳೆಸಿದರೆ ಆ ಕಿಡಿ ಜ್ಞಾನಾಗ್ನಿಯಾಗಬಹುದು. ಹೂವಿನಂತೆ ಇಡೀ ದೇಶಕ್ಕೆ ಪರಿಮಳ ಹರಡಬಹುದು ಎಂದು ಸೂಚ್ಯವಾಗಿ ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಡುಪಿ ಎಸ್‌ಎಂಐಟಿಎಂನ ತರಬೇತಿ ಮತ್ತು ಸ್ಥಾನೀಕರಣ ವಿಭಾಗದ ಮುಖ್ಯಸ್ಥ ಮತ್ತು ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ಸಿ.ಕೆ.ಮಂಜುನಾಥ್ ಮಾತನಾಡಿ, 2047ರ ವೇಳೆಗೆ ಭಾರತ ವಿಶ್ವಗುರುವಾಗುತ್ತದೆ ಎಂದು ಪ್ರಧಾನಿ ಭವಿಷ್ಯ ನುಡಿದಿದ್ದಾರೆ. ಇಡೀ ವಿಶ್ವವನ್ನು ಬೆಳಗಬಲ್ಲ ನಕ್ಷತ್ರಗಳು ಈ ಗುರುಕುಲದಲ್ಲಿ ವಿಕಾಸವಾಗುತ್ತಿವೆ. ಸಂಸ್ಕಾರ, ಸಂಸ್ಕೃತಿಯುಕ್ತ ಶಿಕ್ಷಣವಷ್ಟೇ ದೇಶವನ್ನು ಬೆಳಗಬಲ್ಲದು ಎಂದು ಅಭಿಪ್ರಾಯಪಟ್ಟರು.
ಈ ಗುರುಕುಲ ನಡೆಸುತ್ತಿರುವ ವಿಶೇಷ ಪ್ರಯೋಗ ಇಡೀ ಜಗತ್ತಿಗೆ ಪರಿಚಯವಾಗಲು ಹೆಚ್ಚು ಸಮಯ ಬೇಡ. ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಒಂದು ಭಾಗವಾದರೆ, ಕಲಿಕೆ ಇನ್ನೊಂದು ಭಾಗ. ಕಲಿಕೆಯಲ್ಲಿ ನಿರಂತರತೆ ಉಳಿದಾಗ ಮಾತ್ರ ಬದುಕು ಸಾರ್ಥಕ. ಕಲಿಕೆಗೆ ಕೊನೆ ಇಲ್ಲ. ಪ್ರಾಚೀನ ಭಾರತದ 64 ವಿದ್ಯೆಗಳನ್ನೂ ಈ ಗುರುಕುಲದಲ್ಲಿ ಪರಿಚಯಿಸುತ್ತಿರುವುದು ಅನುಕರಣೀಯ ಎಂದು ಹೇಳಿದರು.
ಇದನ್ನೂ ಓದಿ: Direct Tax: ನೇರ ತೆರಿಗೆ ಸಂಗ್ರಹದಲ್ಲಿ ಶೇ.19 ಹೆಚ್ಚಳ! 81 ಪ್ರತಿಶತ ಟಾರ್ಗೆಟ್ ಪೂರ್ಣ
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ಮಾತನಾಡಿದರು.
ಸಾರ್ವಭೌಮ ಗುರುಕುಲಮ್ ಅಧ್ಯಕ್ಷ ಅರುಣ್ ಹೆಗಡೆ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್, ಕಾರ್ಯದರ್ಶಿ ಅಶ್ವಿನಿ ಉಡುಚೆ, ಪಿಯು ವಿಭಾಗದ ಪ್ರಾಚಾರ್ಯರಾದ ಶಶಿಕಲಾ ಕೂರ್ಸೆ, ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ, ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮರು, ಎಸ್.ಜಿ.ಭಟ್ ಕಬ್ಬಿನಗದ್ದೆ, ಪರಂಪರಾ ಗುರುಕುಲದ ಪ್ರಾಚಾರ್ಯರಾದ ನರಸಿಂಹ ಭಟ್, ಆಡಳಿತ ಮಂಡಳಿ ಸದಸ್ಯರಾದ ಜಿ.ವಿ.ಹೆಗಡೆ, ವೆಂಕಟಗಿರಿ, ಸ್ವಾತಿ ಭಾಗ್ವತ್, ಕೃಷ್ಣಾನಂದ, ಗೀತಾ ಯಾಜಿ, ಶೀಲಾ ಹೊಸ್ಮನೆ, ಗಣೇಶ ಜೋಶಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: Training for Youth: ಸ್ವಯಂ ಉದ್ಯೋಗ ನಿರ್ವಹಿಸುತ್ತೀರಾ? ಇಲ್ಲಿದೆ ತರಬೇತಿ; ಈಗಲೇ ಹೆಸರು ನೋಂದಾಯಿಸಿ
ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳಿಂದ ಮೂಡಿಬಂದ ಹಸ್ತಪ್ರತಿ ವಿದ್ಯಾವಿಕಾಸವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳ ಸೃಜನಶೀಲ ಕಲೆಗಳನ್ನು ಬಿಂಬಿಸುವ ‘ಪ್ರದರ್ಶಿನೀ’ ಗಮನ ಸೆಳೆಯಿತು. ಶಿಕ್ಷಕರು ಮತ್ತು ಸಿಬ್ಬಂದಿ, ಪೋಷಕರು ಅಪಾರ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.