Site icon Vistara News

Uttara Kannada News: ಜಗತ್ತಿನ ಸಾಹಿತ್ಯಗಳಲ್ಲಿ ಅತ್ಯಂತ ಶ್ರೇಷ್ಠವೆನಿಸಿದ ವೇದಸಾಹಿತ್ಯ ಶಾಶ್ವತ: ಶ್ರೀರಾಘವೇಶ್ವರಭಾರತೀ ಸ್ವಾಮೀಜಿ

Sri Raghaveshvarabharati Mahaswamiji blessed former Home Minister Araga jnanendra at Vishnugupta Vishwavidyapeeth

ಗೋಕರ್ಣ: ವಿಜ್ಞಾನ (Science) ಎಷ್ಟೇ ಮುಂದುವರಿದಿದ್ದರೂ, ಭಾರತದ ಸನಾತನ ಪರಂಪರೆಯ ಋಷಿಮುನಿಗಳ ಜ್ಞಾನ (Knowledge) ಅದಕ್ಕೂ ಮಿಗಿಲಾದದ್ದು ಮತ್ತು ಕಲ್ಪನಾತೀತ ಎಂದು ಶ್ರೀಮದ್‌ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.

ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಸಂಸ್ಕಾರ ಮಂಟಪ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಶ್ರೀಗಳು, “ವೇದಗಳ ಶ್ರವಣವೇ ನಮ್ಮ ಮೈ ಮನಸ್ಸು ಪಾವನಗೊಳಿಸುವಂಥದ್ದು. ಜನ್ಮಾಂತರದ ಪಾಪಗಳನ್ನು ಕಳೆಯುವಂಥದ್ದು. ಜಗತ್ತಿನ ಸಾಹಿತ್ಯಗಳಲ್ಲೆಲ್ಲ ಅತ್ಯಂತ ಶ್ರೇಷ್ಠ ಎನಿಸಿದ ವೇದಸಾಹಿತ್ಯ ಶಾಶ್ವತ. ಅವುಗಳಿಗೆ ಯಾವುದೇ ಲಿಪಿ ರೂಪ ಇಲ್ಲದಿದ್ದರೂ, ಅನಾದಿಕಾಲದಿಂದ ಇದುವರೆಗೂ ಅವುಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದು ಋಷಿಮುನಿಗಳ ಜ್ಞಾನ ಪರಂಪರೆ” ಎಂದು ಬಣ್ಣಿಸಿದರು.

“ವೇದ ಎನ್ನುವುದು ನಾಶವಿಲ್ಲದ ಸಂಪತ್ತು. ಸಂಸ್ಕೃತಿ ಮತ್ತು ಸಂಸ್ಕಾರಯುಕ್ತ ಜೀವನದ ಮೂಲಕ ಬದುಕನ್ನು ಪರಿಪೂರ್ಣಗೊಳಿಸಲು ಇದು ಸಹಕಾರಿ. ವಿದ್ಯೆಗೆ ಭೂಷಣ ಬರುವುದು ವಿನಯವಿದ್ದಾಗ. ವಿನಯ ಇದ್ದರೆ ಮಾತ್ರ ಆ ವಿದ್ಯೆಯನ್ನು ಪರಿಪೂರ್ಣ ಎಂದು ಕರೆಯುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: Weather report : ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

ಪಾರಂಪರಿಕ ಭಾರತೀಯ ವಿದ್ಯೆ, ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆರಂಭವಾಗಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಲು ಇಂದು ಸುವರ್ಣ ಪಾದುಕೆಗಳ ಜೈತ್ರಯಾತ್ರೆ ಆರಂಭವಾಗಿದೆ. ಇದು ಸಮಾಜದಲ್ಲಿ ಸತ್ಪ್ರಜೆಗಳನ್ನು ಬೆಳೆಸಲಿದೆ. ವಿವಿವಿ ಉತ್ಥಾನಕ್ಕೆ ಇದು ನಾಂದಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಗೃಹಸಚಿವ ಅರಗ ಜ್ಞಾನೇಂದ್ರ ಮಾತನಾಡಿ, “ಇಡೀ ಹಿಂದೂ ಸಮಾಜದ ಪುನರುತ್ಥಾನದ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀರಾಮಚಂದ್ರಾಪುರ ಮಠ ಇಡೀ ಸಮಾಜಕ್ಕೆ ಮಾತೃಸ್ಥಾನದಲ್ಲಿ ನಿಂತು ಬದುಕಿನಲ್ಲಿ ಹೊಸ ಅರ್ಥವನ್ನು ಮೂಡಿಸುವಂಥದ್ದು. ಧರ್ಮಕ್ಕೆ ಚ್ಯುತಿ ಬಂದಾಗ ದೇವರು ಮತ್ತೆ ಅವತಾರವೆತ್ತಿ ಬರುತ್ತಾರೆ ಎಂದು ಗೀತೆಯಲ್ಲಿ ಹೇಳಲ್ಪಟ್ಟಿದೆ. ಧರ್ಮದೆಡೆಗೆ ಇಡೀ ಸಮಾಜವನ್ನು ಆಕರ್ಷಿಸುವ ಶ್ರೀಮಠದ ಪ್ರಯತ್ನ ಅನನ್ಯ” ಎಂದು ಬಣ್ಣಿಸಿದರು.

ರಾಮಚಂದ್ರಾಪುರ ಪ್ರಧಾನ ಮಠ ಮತ್ತು ತೀರ್ಥಹಳ್ಳಿ ಮಠಗಳ ಜೀರ್ಣೋದ್ಧಾರ ಕಾರ್ಯ ನಡೆಯಬೇಕಿದ್ದು, ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಒಂದೆಡೆ ಭಾರತ ವಿಶ್ವಗುರುವಾಗುವ ಹಂತದಲ್ಲಿದ್ದರೆ ಇನ್ನೊಂದೆಡೆ ಸನಾತನ ಧರ್ಮವನ್ನು ಅವಹೇಳನ ಮಾಡುವ ಪ್ರಯತ್ನ ನಡೆಯುತ್ತಿದೆ. ಸಮಾಜದ ಪ್ರತಿಯೊಬ್ಬರೂ ಆತ್ಮಾಭಿಮಾನದಿಂದ ಧರ್ಮರಕ್ಷಣೆಯ, ರಾಷ್ಟ್ರರಕ್ಷಣೆಯ ಪಣ ತೊಡಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: Vijayanagara News: ಕೊಟ್ಟೂರಿನ ಹ್ಯಾಳ್ಯಾ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

ಕೊಯಮತ್ತೂರು ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ವೇದ ವಿದ್ಯಾಲಯದ ವೇದಬ್ರಹ್ಮ ಶ್ರೀ ಜಂಬೂನಾಥ ಘನಪಾಠಿಗಳು ಮಾತನಾಡಿ, “ಮಕ್ಕಳು ಸದಾ ತನ್ನ ಬಳಿಯೇ ಇರಬೇಕು ಎನ್ನುವುದು ತಾಯಿಯ ಅಪೇಕ್ಷೆ. ಅಂತೆಯೇ ದೇವರು ಕೂಡಾ ನಮ್ಮನ್ನು ತನ್ನ ಜತೆಗೇ ಇರಬೇಕು ಎಂದು ಬಯಸುತ್ತಾನೆ. ಇಂದಿನ ಲೌಕಿಕ ಸಮಾಜದಲ್ಲಿ ದೇವರೂ ಬೇಕು, ಗುರುಗಳೂ ಬೇಕು ಎಂಬ ಭಾವನೆ ನಮ್ಮದು. ಆದರೆ ಇದು ವ್ಯಾವಹಾರಿಕ ಮಾತ್ರ. ನಾವು ದೇವರನ್ನೇ ಆಶ್ರಯಿಸಿ ಇರುವುದು ನಿಜವಾದ ಧರ್ಮ. ದೇವರು ನಮಗೆ ಗುರುಗಳ ರೂಪದಲ್ಲಿ ಪ್ರಕಟವಾಗುತ್ತಾನೆ. ಆದ್ದರಿಂದ ಗುರುಸೇವೆಯೇ ನಿಜವಾಗಿ ದೇವರ ಸೇವೆ. ಗುರುತತ್ವದಲ್ಲಿ ಪ್ರೀತಿ, ವಾತ್ಸಲ್ಯ, ಕರುಣೆ ಎಲ್ಲವೂ ಇರುತ್ತದೆ. ಗುರುಚರಣ ನಮಗೆ ಎಲ್ಲವನ್ನೂ ಕರುಣಿಸುವಂಥದ್ದು” ಎಂದು ಅಭಿಪ್ರಾಯಪಟ್ಟರು.

ಒಂದು ವಾರದಿಂದ ನಡೆಯುತ್ತಿದ್ದ ಘನ ಪಾರಾಯಣ ಗುರುವಾರ ಸಂಪನ್ನಗೊಂಡಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: Uttara Kannada News: ಅಮೃತ ಕಳಶ ಯಾತ್ರೆ ಯಶಸ್ವಿಗೊಳಿಸಿ: ಡಿಸಿ ಗಂಗೂಬಾಯಿ ಮಾನಕರ್

ಗೋಕರ್ಣ ಶಂಕರಲಿಂಗದ ವೇದಮೂರ್ತಿ ರಾಮಕೃಷ್ಣ ಭಟ್ಟರು ಅಭ್ಯಾಗತರಾಗಿ ಆಗಮಿಸಿದ್ದರು. ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಯ ಸುಧನ್ವ ಕಾರ್ಯಕ್ರಮ ನಿರೂಪಿಸಿದರು. ವಿವಿವಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಹಿರಿಯ ಸಾಹಿತಿ ಗಜಾನನ ಶರ್ಮಾ, ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಆಡಳಿತಾಧಿಕಾರಿ ಟಿ.ಜಿ.ಪ್ರಸನ್ನ ಕುಮಾರ್, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್‍ಜಿ ಭಟ್ ಮತ್ತಿತರರು ಉಪಸ್ಥಿತರಿದ್ದರು.

Exit mobile version