Site icon Vistara News

Sirsi Marikamba Jaatre 2024: ಶಿರಸಿ ಮಾರಿಕಾಂಬಾ ಜಾತ್ರೆ ಆರಂಭ: ಅದ್ಧೂರಿಯಾಗಿ ನಡೆದ ರಥೋತ್ಸವ

Sirsi Marikamba Jaatre 2024

ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಜಾತ್ರೆ ಮಾರ್ಚ್‌ 19ರಿಂದ ಆರಂಭವಾಗಿದೆ. ಮಾರ್ಚ್‌ 27ರವರೆಗೆ ಅಂದರೆ ಒಂಬತ್ತು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಮಾರಿಕಾಂಬೆಯ ಅಷ್ಟಭುಜಗಳ ಮೂರ್ತಿಯನ್ನು ದೇವಸ್ಥಾನದಿಂದ ಹೊರಗಡೆ ಸಭಾಮಂಟಪಕ್ಕೆ ಕರೆತಂದು ಸಮಸ್ತ ಭಕ್ತರ ಸಮ್ಮುಖದಲ್ಲಿ ಮದುವೆಯನ್ನು ಮಾಡಲಾಗಿದೆ. ನಿನ್ನೆ (ಮಂಗಳವಾರ) ಜಾತ್ರೆ ಆರಂಭವಾಗಿದ್ದು, ದೇವಿ ಕಲ್ಯಾಣ ಮಹೋತ್ಸವ ನೆರವೇರಿದೆ.

ಶಿರಸಿ ನಗರದ ಬಿಡಕಿ ಬೈಲಿನಲ್ಲಿರುವ ಗದ್ದುಗೆಗೆ ರಥದ ಮೂಲಕ ದೇವಿ ಆಗಮಿಸಿದಳು. ದೇವಿ ರಥೋತ್ಸವ ನೋಡಲು ನಾಡಿನ ವಿವಿಧ ಭಾಗದಿಂದ ಭಕ್ತಾದಿಗಳು ಆಗಮಿಸಿದ್ದರು. ಮದುವೆಯ ಸಂಪ್ರದಾಯದಂತೆ ಶ್ರೀ ದೇವಿಗೆ ಮಂಗಳ ಸೂತ್ರ ಧಾರಣೆ, ಗುಡಿಗಾರರ ದ್ರಷ್ಟಿ ಪೂಜೆ, ನಾಡಿಗರ ಪೂಜೆ, ಚಕ್ರಸಾಲಿ ಪೂಜೆ, ಕೇದಾರಿಮನೆತನದ ಪೂಜೆ ಹಾಗೂಪೂಜಾರರ ಪೂಜೆಗಳು ನೆರವೇರಿವೆ. ಇನ್ನು ಮಾ.19ರಂದು ದೇವಾಲಯದ ಎದುರಿನಿಂದ ಬೆಳಗ್ಗೆ 8.59ರ ಮಹೂರ್ತದಲ್ಲಿ ಶೋಭಾಯಾತ್ರೆಯಲ್ಲಿ ಅಸಂಖ್ಯ ಭಕ್ತರು ಪಾಲ್ಗೊಂಡಿದ್ದರು. ನೋಡುಗರಿಗೆ ಎಲ್‍ಇಡಿ ಮೂಲಕ ಕಾರ್ಯಕ್ರಮ ವೀಕ್ಷಣೆಯ ಅವಕಾಶವಿತ್ತು.

ಇದನ್ನೂ ಓದಿ: Lok Sabha Election 2024 : ಬಾಗಲಕೋಟೆ ಕೈ ಟಿಕೆಟ್‌; ಸಂಯುಕ್ತಾ ಪಾಟೀಲ್‌ಗೆ GO BACK ಬಿಸಿ ಮುಟ್ಟಿಸಿದ ವೀಣಾ

ದೇವಿ ಕಲ್ಯಾಣ ಮಹೋತ್ಸವದಲ್ಲಿ ಜನರು ದುಡ್ಡು, ಬಾಳೆಹಣ್ಣನ್ನು ರಥಕ್ಕೆ ಎಸೆದು ಕೃತಾರ್ಥರಾದರು. ಲಂಬಾಣಿ ಮಹಿಳೆಯರು ಸೋಬಾನೆ ಪದ ಹೇಳುತ್ತ ದೇವಿಗೆ ಸೇವೆ ಸಲ್ಲಿಸಿದ್ದಾರೆ.

ಮಾ.21ರಿಂದ ಬೆಳಗ್ಗೆ 5ರಿಂದ ಜಾತ್ರಾ ಗದ್ದುಗೆಯಲ್ಲಿ ಮಾರಿಕಾಂಬೆಗೆ ಸೇವೆ ಸಲ್ಲಿಕೆ, ಹರಕೆ ಅರ್ಪಣೆ ಪ್ರಾರಂಭವಾಗಲಿದ್ದು ನಿರಂತರ ಎಳು ದಿನಗಳ ಕಾಲ ಮುಂದುವರಿಯಲಿದೆ. ಮಾ.27ರ ಬೆಳಗ್ಗೆ 10.41ಕ್ಕೆ ದೇವಿ ಗದ್ದುಗೆಯಿಂದ ಏಳುವುದರೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ. ಏಪ್ರಿಲ್‌ 9ರಂದು ಬೆಳಗ್ಗೆ 7:51ರಿಂದ 8.03 ಯುಗಾದಿಗೆ ದೇವಾಲಯದಲ್ಲಿ ದೇವಿ ಪುನರ್ ಪ್ರತಿಷ್ಠೆ ಆಗಲಿದೆ.

Exit mobile version