Site icon Vistara News

Sirsi News: ಬೈರುಂಬೆಯ ಶಾಲಾ ಗೋಡೆಯ ಮೇಲೆ ಶ್ರೀ ರಾಮಾಯಣದ ಹಸೆ ಚಿತ್ತಾರ

A picture of Sri Ramayana on the campus wall of Sri Sharadamba High School in Bairumbe village

-ಭಾಸ್ಕರ್ ಆರ್ ಗೆಂಡ್ಲ. ವಿಸ್ತಾರ ನ್ಯೂಸ್

ಶಿರಸಿ: ತಾಲೂಕಿನ ಬೈರುಂಬೆ ಗ್ರಾಮದ ಶ್ರೀ ಶಾರದಾಂಬಾ ಪ್ರೌಢಶಾಲೆಯ ಆವರಣದ ಗೋಡೆಯ ಮೇಲೆ ಶ್ರೀ ರಾಮಾಯಣ (Sri Ramayana) ಕುರಿತ ಚಿತ್ರಣವನ್ನು ಹಸೆ ಚಿತ್ರಕಲೆ ಮೂಲಕ ಚಿತ್ರಿಸಲಾಗಿದ್ದು, (Sirsi News) ಎಲ್ಲರ ಗಮನ ಸೆಳೆಯುತ್ತಿದೆ.

ಹೌದು, ಶಿರಸಿ‌ ತಾಲೂಕಿನ ಬೈರುಂಬೆ ಶ್ರೀ ಶಾರದಾಂಬಾ ಪ್ರೌಢಶಾಲೆಯ ಆವರಣದ ಗೋಡೆಯ ಮೇಲೆ ಸಂಪೂರ್ಣ ರಾಮಾಯಣವನ್ನು ‌ನಾವು ಕಾಣಬಹುದಾಗಿದೆ. ಶಾಲೆಯ ಹಳೆ ವಿದ್ಯಾರ್ಥಿನಿ ಸಂಹಿತಾ ಹೆಗಡೆ ಅವರು ಹಸೆ ಚಿತ್ರಕಲೆ ಮೂಲಕ ಶ್ರೀರಾಮನ ಬಾಲ್ಯದಿಂದ ಹಿಡಿದು, ಪಟ್ಟಾಭಿಷೇಕದ ಸಂಪೂರ್ಣ ರಾಮಾಯಣವನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾರೆ.

ಬೈರುಂಬೆ ಶ್ರೀ ಶಾರದಾಂಬಾ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಇತಿಹಾಸ ತಿಳಿಸುವ ದೃಷ್ಠಿಯಿಂದ ಅನೇಕ ವಿಷಯಾಧಾರಿತ ಚರ್ಚೆ ಹಾಗೂ ವಿನೂತನ ಮಾದರಿಯ ವಿದ್ಯಾಭ್ಯಾಸದ ಜತೆ ಪುರಾಣದ ಅರಿವನ್ನು ಕೂಡ ಇಲ್ಲಿ ಮೂಡಿಸಲಾಗುತ್ತಿದೆ.

ಇದನ್ನೂ ಓದಿ: Ind vs Eng : ಮೊದಲ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಭಾರತಕ್ಕೆ 127 ರನ್ ಮುನ್ನಡೆ

ಆಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯನ್ನು ಇಡೀ ದೇಶವೇ ಅತೀ ವಿಜೃಂಭಣೆಯಿಂದ ಆಚರಿಸಿದೆ. ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ದರುಶನವಾಗಲಿದೆ. ಆದರೆ ಬೈರುಂಬೆ ಶ್ರೀ ಶಾರದಾಂಬ ಪ್ರೌಢಶಾಲೆಯ ಗೋಡೆಯಲ್ಲಿ ಅದೇ ಶ್ರೀರಾಮನ ಬಾಲ್ಯ, ವನವಾಸ ಸೇರಿದಂತೆ ಕೊನೆಯದಾಗಿ ಪಟ್ಟಾಭಿಷೇಕದ ಕುರಿತು ಚಿತ್ತಾರವನ್ನು ಚಿತ್ರಿಸಲಾಗಿದೆ. ಈ ಚಿತ್ರಗಳು ವಿದ್ಯಾರ್ಥಿಗಳಲ್ಲಿ ರಾಮಾಯಣದ ಬಗೆಗಿನ ಆಸಕ್ತಿ ಹೆಚ್ಚುವಂತೆ ಮಾಡಿದೆ. ಅಲ್ಲದೇ ಚಿತ್ರಗಳಿಂದ ಸುಲಭವಾಗಿ ರಾಮಾಯಣವನ್ನು ನೆನಪಿಟ್ಟುಕೊಳ್ಳಬಹುದಾಗಿದೆ.

ಈ ಶಾಲೆಯ ವಿದ್ಯಾರ್ಥಿಗಳು ರಾಮಯಾಣದ ಕುರಿತು ಎಳೆ-ಎಳೆಯಾಗಿ ತಿಳಿದುಕೊಂಡಿದ್ದಾರೆ. ಭಗವದ್ಗೀತೆಯ ಕುರಿತು ಉಪನ್ಯಾಸ ನೀಡುವ ಅನೇಕ ವಿದ್ಯಾರ್ಥಿಗಳು ಈ ಶಾಲೆಯಲ್ಲಿದ್ದಾರೆ.‌ ಪುರಾಣ-ಇತಿಹಾಸಗಳ ಮೇಲೆ ಅತಿ ಹೆಚ್ಚು ಆಸಕ್ತಿ‌ ಹೊಂದಿರುವ ಇಲ್ಲಿ‌ನ ವಿದ್ಯಾರ್ಥಿಗಳಿಗೆ ಅವುಗಳನ್ನು ತಿಳಿಸುವ ಪ್ರಯತ್ನ ಮಾಡಿರುವುದು ಇತರೆ ಶಾಲೆಗಳಿಗೂ ಮಾದರಿಯಾಗಿದೆ.

ಇದನ್ನೂ ಓದಿ: Tea And Coffee With Meals: ಊಟ ತಿಂಡಿ ಜೊತೆಜೊತೆಗೆ ಚಹಾ ಕಾಫಿ ಹೀರುವ ಅಭ್ಯಾಸ ಒಳ್ಳೆಯದೇ, ಕೆಟ್ಟದ್ದೇ?

ಶಾಲೆಯ ನೂತನ‌ ಕಟ್ಟಡ ನಿರ್ಮಾಣ ಮಾಡಲಾಗಿತ್ತು.‌ ಅದೇ ವೇಳೆ ನಮ್ಮ ಪ್ರಾಂಶುಪಾಲರು ಗೋಡೆಯ ಮೇಲೆ ಪೌರಾಣಿಕ ಕಥೆ ಬಿಡಿಸುವಂತೆ ತಿಳಿಸಿದ್ರು. ಹಾಗಾಗಿ ವರ್ಲಿ ಆರ್ಟ್ ಬೇಸ್ ಆಗಿ ಇಟ್ಟುಕೊಂಡು ರಾಮಾಯಾಣ ಕುರಿತು ಚಿತ್ರಿಸಿದ್ದೇನೆ. ಇದು ಪುರಾಣದ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಹೆಚ್ಚಿಸಲಿದೆ.

-ಸಂಹಿತಾ ಹೆಗಡೆ, ಶಾಲೆ ಹಳೆ ವಿದ್ಯಾರ್ಥಿನಿ

ವಿದ್ಯಾರ್ಥಿಗಳಿಗೆ ಈ ರೀತಿಯ ಪುರಾಣಗಳ ಮಹತ್ವ ತಿಳಿಸುವ ಉದ್ದೇಶ ನಮ್ಮದಾಗಿತ್ತು. ರಾಮಾಯಣ ಅಷ್ಟೇ ಅಲ್ಲದೆ ಮುಂದಿನ ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿರುವ ಶಾಲೆಯ ಬೇರೆ ನೂತನ ಕಟ್ಟಡದ ಗೋಡೆಗಳಿಗೆ ಮಹಾಭಾರತದ ಪೌರಾಣಿಕ ಮಹತ್ವವನ್ನು‌ ಚಿತ್ರಕಲೆ‌ ಮೂಲಕ ಪ್ರಸ್ತುತಪಡಿಸಲಾಗುವುದು.

-ವಸಂತ್ ಹೆಗಡೆ. ಪ್ರಾಂಶುಪಾಲರು. ಶ್ರೀ ಶಾರದಾಂಬಾ ಪ್ರೌಢಶಾಲೆ.

Exit mobile version