ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕ್ಷೇತ್ರದಲ್ಲಿ ಜಾತಿಗಳ ನಡುವೆ ಬಿರುಕು ಮೂಡಿಸುವಂತಹ ಆಡಿಯೊ ಹರಿದಾಡುತ್ತಿದೆ. ಇದರ ವಿರುದ್ಧ ಕ್ಷೇತ್ರದಿಂದ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರು ಎಚ್ಚರಿಕೆ ನೀಡಿದ್ದಾರೆ. ಕೆಲವರು ಕ್ಷೇತ್ರದಲ್ಲಿ ಜಾತಿಗಳ ನಡುವೆ ಬಿರುಕು ಮೂಡಿಸುವಂತಹ ಆಡಿಯೊ ಹರಡುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭೀಮಣ್ಣ ನಾಯ್ಕ ಹೇಳಿದ್ದಾರೆ.
“ನಾನು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದು, ನನಗೆ ಎಲ್ಲಾ ಜಾತಿ ಬಾಂಧವರು ಒಂದೇ. ಆದರೆ ಯಾರೋ ಕಿಡಿಗೇಡಿಗಳು ನನ್ನ ಹೆಸರನ್ನು ಉಪಯೋಗಿಸಿ ಕ್ಷೇತ್ರದ ಬೇರೆ ಬೇರೆ ಸಮಾಜದವರ ಮೇಲೆ ತಪ್ಪು ಭಾವನೆ ಬರುವ ಆಡಿಯೋ ಸಂದೇಶ ಕಳುಹಿಸುವುದು ಗಮನಕ್ಕೆ ಬಂದಿದೆ. ಈ ರೀತಿ ಮಾಡುವವರು ಯಾರೇ ಆಗಿದ್ದರೂ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Karnataka Election Results: ಪಕ್ಷವನ್ನು ಗೆಲ್ಲಿಸಿದರೂ ಸಿಎಂ ಸ್ಥಾನಕ್ಕೆ ಮೀನಮೇಷ: ಡಿ.ಕೆ. ಸಹೋದರರ ಅಸಮಾಧಾನ
ಕಳೆದ ಮೇ.13ರಂದು ಮತ ಎಣಿಕೆ ಮುಗಿದ ನಂತರ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಸಮಾಜದ ಮೇಲೆ ತಪ್ಪು ಭಾವನೆ ಬೀರುವ ಸಂದೇಶವನ್ನು ರವಾನಿಸಿದ್ದರು. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಆಡಿಯೋ, ವಿಡಿಯೋಗಳಿಗೆ ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯ ಮೂಲಕ ಅವರು ಎಚ್ಚರಿಕೆ ನೀಡಿದ್ದಾರೆ. “ನಾನು ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಪ್ರತಿಯೊಬ್ಬ ಮತದಾರರ ಪ್ರತಿನಿಧಿ. ಕಾರಣ ಕ್ಷೇತ್ರದ ಪ್ರತಿಯೊಬ್ಬ ಮತದಾರರು ನನಗೆ ಒಂದೇ. ಉತ್ತಮ ಆಡಳಿತ ನಡೆಸಲು ನನ್ನ ಸರ್ವ ಮತದಾರ ಬಾಂಧವರು ಸಹಕರಿಸಬೇಕು. ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಕಿಡಿಗೇಡಿಗಳಿಗೆ ಪಾಠ ಕಲಿಸಲಾಗುವುದು” ಎಂದು ತಿಳಿಸಿದ್ದಾರೆ.
ಭೀಮಣ್ಣ ನಾಯ್ಕ ಅವರ ಹೆಸರು ಕೆಡಿಸುವ ಉದ್ದೇಶದಿಂದ ಕೆಲ ಕಿಡಿಗೇಡಿಗಳು ಇಂತಹ ಸಂದೇಶವನ್ನು ರವಾನಿಸುತ್ತಿದ್ದಾರೆ ಎನ್ನಲಾಗಿದ್ದು, ಅಂತವರ ವಿರುದ್ಧ ಸೂಕ್ತ ಕ್ರಮ ಗೈಗೊಳ್ಳಲಾಗುವುದು ಎಂದು ತಮ್ಮ ಫೇಸ್ ಬುಕ್ ಖಾತೆ ಮೂಲಕ ಎಚ್ಚರಿಕೆ ನೀಡಿದ್ದಾರೆ.