Site icon Vistara News

Sirsi News: ಇಂದು ‘ನೆಮ್ಮದಿ’ಯ ರಂಗಧಾಮದಲ್ಲಿ ಧನ್ಯವಾದ ಕಾರ್ಯಕ್ರಮ; ಡಾ. ವಿಜಯ ಸಂಕೇಶ್ವರ್‌, ಹರಿಪ್ರಕಾಶ್‌ ಕೋಣೆಮನೆ ಭಾಗಿ

sirsi news dhanyavada programme on 11th november at nemmadi rangadhama says v p vaishali

ಶಿರಸಿ: ನಗರದ ‘ನೆಮ್ಮದಿ’ ಆವರಣದಲ್ಲಿ ನಿರ್ಮಿಸಿರುವ ‘ರಂಗಧಾಮ’ವನ್ನು (Rangadhama) ನ.11ರಂದು ಶನಿವಾರ ಊರಿಗೆ ಒಪ್ಪಿಸುವ ಹಾಗೂ ಸಹಕರಿಸಿದ ಸರ್ವರನ್ನೂ ಸ್ಮರಿಸುವ ಧನ್ಯವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನ.11ರಂದು ಶನಿವಾರ ಸಂಜೆ 4 ಗಂಟೆಗೆ ಶಿರಸಿಯ ನೆಮ್ಮದಿಯ ರಂಗಧಾಮದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ, ದಾನಿಗಳ ಪ್ರತಿನಿಧಿಯಾಗಿ ವಿ.ಆರ್.ಎಲ್. ಸಂಸ್ಥೆಯ ಚೇರ್ಮನ್ ಆದ ಡಾ. ವಿಜಯ ಸಂಕೇಶ್ವರ ಅವರಿಗೆ ಹಾಗೂ ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿ.ಪಿ. ವೈಶಾಲಿ ತಿಳಿಸಿದ್ದಾರೆ.

ಸ್ಮಶಾನವೆಂದರೆ ಭಯ, ಅಸಹ್ಯಗಳೇ ತುಂಬಿಕೊಂಡಿರುವ ತಾಣವೆಂಬ ಸಿದ್ಧ ಕಲ್ಪನೆಯನ್ನು ಹೋಗಲಾಡಿಸುವ ದಿಕ್ಕಿನಲ್ಲಿ ನಮ್ಮ ಪ್ರಯತ್ನವಾಗಿದೆ. ಅಂತ್ಯಕ್ರಿಯೆಗಷ್ಟೇ ಸೀಮಿತವಾಗದೇ ನಮ್ಮ ಎರಡುವರೆ ಎಕರೆ ಜಾಗವನ್ನು ಎರಡು ವಿಭಾಗವನ್ನಾಗಿ ಮಾಡಿ ಒಂದಕ್ಕೆ ಸದ್ಗತಿ, ಮತ್ತೊಂದಕ್ಕೆ ನೆಮ್ಮದಿ ಎಂದು ಕರೆಯಲಾಗುತ್ತದೆ ಎಂದು ವಿ.ಪಿ. ವೈಶಾಲಿ ಹೇಳಿದ್ದಾರೆ.

ನೆಮ್ಮದಿ ಕುಟೀರವು ಮರಣಕ್ಕೆ ಮುನ್ನ ಬದುಕಿಗೆ ಹುರುಪು ತುಂಬುವ ಸ್ಥಳ. ನಾಡಿನಲ್ಲೇ ಅತಿ ಹೆಚ್ಚು ಪುಸ್ತಕಗಳು ಲೋಕಾರ್ಪಣೆಗೊಂಡ ದಾಖಲೆ ಈ ಕುಟೀರದ ಹೆಮ್ಮೆಯಾಗಿದೆ. ಸದ್ಗತಿಯಲ್ಲಿ ಆತಂಕಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ಗೌರವ ಪೂರ್ವಕವಾಗಿ ಅಂತ್ಯಕ್ರಿಯೆ ಜರುಗುತ್ತದೆ. ಜಾತಿ, ಮತ, ಬಡವ, ಶ್ರೀಮಂತ ಎಂಬ ಯಾವುದೇ ಭೇದ ಭಾವವಿಲ್ಲದೇ ಸಮಾನತೆ ಇಲ್ಲಿ ಅಕ್ಷರಶಃ ಜೀವಂತವಾಗಿದೆ ಎಂದು ವಿ.ಪಿ. ವೈಶಾಲಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ಬೆಂಗಳೂರು ನನಗೆ ಎರಡನೇ ತವರು’; ಕರುನಾಡ ಜನರ ಬಗ್ಗೆ ಕೊಹ್ಲಿ ಮನದಾಳದ ಮಾತು

ರಾಜ್ಯದಲ್ಲಿಯೇ ಅತಿ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ನಮ್ಮ ನೆಮ್ಮದಿ ಕುಟೀರದಲ್ಲಿ. ಈ ಹಿನ್ನೆಲೆಯಲ್ಲಿ ನೆಮ್ಮದಿ ಆವರಣದಲ್ಲಿ 1.60 ಕೋಟಿ ರೂ ವೆಚ್ಚದಲ್ಲಿ ರಂಗಧಾಮ ನಿರ್ಮಾಣ ಮಾಡಲಾಗಿದೆ. ರಂಗಧಾಮ ನಿರ್ಮಾಣಕ್ಕೆ ಹಲವಾರು ಕಲಾವಿದರು, ದಾನಿಗಳು, ಸಂಘಸಂಸ್ಥೆಗಳು ಕೈಜೋಡಿಸಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಉಮಾಶ್ರೀ ಅವರು 60 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದರು. ಈ ಹಣ ಪಡೆಯಲು 9 ವರ್ಷಗಳ ಕಾಲ ಶ್ರಮಿಸಬೇಕಾಯಿತು. ಡಾ. ವಿಜಯ ಸಂಕೇಶ್ವರ ಮತ್ತು ಟಿಎಸ್ಎಸ್ ಸಂಸ್ಥೆ ದೊಡ್ಡ ಮೊತ್ತದ ಸಹಾಯ ನೀಡಿದ್ದಾರೆ. ರೋಟರಿ ಸಂಸ್ಥೆ ಸೋಲಾರ್ ವ್ಯವಸ್ಥೆ ಮಾಡಿಕೊಟ್ಟಿದೆ ಎಂದು ವಿ.ಪಿ. ವೈಶಾಲಿ ಮಾಹಿತಿ ನೀಡಿದ್ದರು.

Exit mobile version