Site icon Vistara News

Sirsi News: ನಾಮಕಾವಸ್ಥೆಯಾದ ಸಂಬಾರ ಮಂಡಳಿ: ಸೌಲಭ್ಯದಿಂದ ವಂಚಿತರಾಗುತ್ತಿರುವ ಬೆಳೆಗಾರರು

Sirsi News Due to lack of grant and staff to Spices Board Farmers being deprived of facilities

ಭಾಸ್ಕರ್ ಆರ್. ಗೆಂಡ್ಲ. ವಿಸ್ತಾರ ನ್ಯೂಸ್. ಶಿರಸಿ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಬಾರ ಬೆಳೆ ಬೆಳೆಯುವುದಕ್ಕೆ ಉತ್ತೇಜಿಸಲು ಇರುವ ಮಂಡಳಿಗೆ (Spices Board) ಸರ್ಕಾರದಿಂದ ತೀರಾ ಕಡಿಮೆ ಅನುದಾನ ಬರುತ್ತಿದೆ‌. ಇದು ಬೆಳೆಗಾರರನ್ನು ಸಂಕಷ್ಟಕ್ಕೆ ನೂಕಿದೆ. ಒಂದೆಡೆ ಕೇಂದ್ರ ಸರ್ಕಾರವು (Central Government) ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ (Uttara Kannada) ಸಂಬಾರ ಪದಾರ್ಥಗಳಿಗೆ ಉತ್ತೇಜನ ನೀಡುತ್ತಿದೆ. ಆದರೆ ಇನ್ನೊಂದೆಡೆ ಅನುದಾನದ ಕೊರತೆ, ಸಂಬಾರ ಮಂಡಳಿಯ ನಿಷ್ಕ್ರೀಯತೆ, ಸಿಬ್ಬಂದಿ ಕೊರತೆಯಿಂದ ಬೆಳೆಗಾರರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಜತೆಗೆ ವಾರದಲ್ಲಿ 4 ದಿನ ಕಚೇರಿ ಬಂದ್ ಇರುವುದು ರೈತರಿಗೆ (Farmers) ಸಮಸ್ಯೆಯಾಗುತ್ತಿದೆ.‌

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಂಬಾರ ಮಂಡಳಿಯ ಜಿಲ್ಲೆಯ ವ್ಯಾಪ್ತಿಯ ಕ್ಷೇತ್ರಾಧಿಕಾರಿಗಳ ಕಚೇರಿಯು ಉ.ಕ ಜಿಲ್ಲೆ ಶಿರಸಿ ನಗರದ ಹುಬ್ಬಳ್ಳಿ ಮಾರ್ಗದಂಚಿನಲ್ಲಿದೆ. ಸಿಬ್ಬಂದಿ ಕೊರತೆ, ಸೀಮಿತ ಅನುದಾನ, ಯೋಜನೆಗಳ ವ್ಯಾಪಕ ಪ್ರಚಾರ ಇಲ್ಲದಿರುವುದು ಸಾಕಷ್ಟು ರೈತರಿಗೆ ಜಿಲ್ಲೆಯಲ್ಲಿ ಸಂಬಾರ ಮಂಡಳಿ ಇದೆ ಎನ್ನುವುದೇ ಗೊತ್ತಿಲ್ಲ.

ಸಂಬಾರ ಬೆಳೆ ಬೆಳೆಯುವುದಕ್ಕೆ ರೈತರು ಆಸಕ್ತಿ ತೋರುತ್ತಿಲ್ಲ ಎನ್ನುವುದಕ್ಕಿಂತ ವೈಜ್ಞಾನಿಕವಾಗಿ ರೈತರನ್ನು ಹೇಗೆ ಪ್ರೋತ್ಸಾಹಿಸಬಹುದು, ರೈತರು ಬೆಳೆಯುತ್ತಿರುವ ಬೆಳೆಯಲ್ಲೇ ಯಾವುದಕ್ಕೆ ಸಹಾಯಧನ ನೀಡಬಹುದು ಎಂಬುದನ್ನು ಸಮರ್ಪಕವಾಗಿ ಅವಲೋಕಿಸದೇ ಇರುವುದು ಸಂಬಾರ ಮಂಡಳಿ ಕಾರ್ಯ ಚಟುವಟಿಕೆ ಮರೆಯಾಗುತ್ತಿರುವುದಕ್ಕೆ ಕಾರಣವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: Libya flood: ಲಿಬಿಯಾದಲ್ಲಿ ಚಂಡಮಾರುತ, ಪ್ರವಾಹ; 20,000ಕ್ಕೂ ಅಧಿಕ ಮಂದಿ ಸಾವು

ಕೇಂದ್ರ ಸಂಬಾರ ಮಂಡಳಿ ವ್ಯಾಪ್ತಿಯಲ್ಲಿ 52 ಬೆಳೆಗಳಿದ್ದರೂ, ಜಿಲ್ಲೆಯ ಮಟ್ಟಿಗೆ ಏಲಕ್ಕಿ ಮತ್ತು ಕಾಳುಮೆಣಸು ಬೆಳೆ ಮಾತ್ರ ಇದು ಒಳಗೊಂಡಿದೆ. ಏಲಕ್ಕಿ ಮರು ನಾಟಿ ಯೋಜನೆ ಹಾಗೂ ಕಾಳುಮೆಣಸು ಬಿಡಿಸುವ ಯಂತ್ರಕ್ಕೆ ಸಬ್ಸಿಡಿ ಸೌಲಭ್ಯ ದೊರೆಯುತ್ತಿದೆ.

ಮರುನಾಟಿಯಲ್ಲಿ ಹೆಕ್ಟೆರ್‌ಗೆ ಎರಡು ವರ್ಷ ತಲಾ 25 ಸಾವಿರ ರೂ. ನೀಡಲಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 20 ಹೆಕ್ಟೇರ್ ಪ್ರದೇಶದ ಮರುನಾಟಿಗೆ 56 ರೈತರಿಗೆ ಸಬ್ಸಿಡಿ ನೀಡಲಾಗಿತ್ತು. ಆದರೆ ಈ ಬಾರಿ ಕೇವಲ 5 ಹೆಕ್ಟೇರ್‌ಗೆ ಅನುದಾನ ಬಂದಿದೆ ಎನ್ನಲಾಗಿದೆ.

ಅಲ್ಲದೇ ಭೌಗೋಳಿಕವಾಗಿ ಮಲೆನಾಡು, ಅರೆಬಯಲುಸೀಮೆ, ಕರಾವಳಿ ವ್ಯಾಪ್ತಿಯ ವಿಸ್ತಾರ ಹೊಂದಿರುವ ಜಿಲ್ಲೆಯಲ್ಲಿ ಸಂಬಾರ ಬೆಳೆ ಕೃಷಿಗೆ ಉತ್ತೇಜಿಸಲು ಕ್ಷೇತ್ರಾಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಕ್ಷೇತ್ರಾಧಿಕಾರಿ ಹಾವೇರಿ, ಶಿರಸಿ ಜವಾಬ್ದಾರಿಯನ್ನು ಹೊಂದಿದ್ದಾರೆ. ಇದರಿಂದ ಕಚೇರಿ ವಾರದಲ್ಲಿ‌ ನಾಲ್ಕು ದಿ‌ನ ಬಂದ್ ಇರಲಿದೆ. ಅಧಿಕಾರಿ ಶಿರಸಿಗೆ ಬಂದಲ್ಲಿ ಹಾವೇರಿ ಬಂದ್ ಇರುವ ಸ್ಥಿತಿ ಇದೆ. ಇದರಿಂದ ಜಿಲ್ಲೆಯ ರೈತರಿಗೆ ಸಮಸ್ಯೆಯಾಗಿದೆ.‌

ಜಿಲ್ಲೆಯಲ್ಲಿ ಕೇಂದ್ರಿಯ ಸಂಬಾರ ಮಂಡಳಿ ಕಾರ್ಯಚಟುವಟಿಕೆ ಅಷ್ಟಕ್ಕಷ್ಟೇ ಎನ್ನುವಂತಿದೆ. ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳನ್ನು ಒಳಗೊಂಡು ಯೋಜನೆಯನ್ನು ರೈತರಿಗೆ ತಲುಪಲು ಅವಕಾಶವಿತ್ತು. ಆದರೆ ಜಿಲ್ಲೆಯ ಮಟ್ಟಿಗೆ ಮಂಡಳಿಗೆ ಅನುದಾನ, ಯೋಜನೆಯೇ ಬರುತ್ತಿಲ್ಲ. ಹೀಗಾದರೆ ಕೇಂದ್ರ ಸರ್ಕಾರದ ಒಂದು ಬೆಳೆ ಒಂದು ಉತ್ಪನ್ನ ಯೋಜನೆ ಹೇಗೆ ಯಶಸ್ವಿಯಾಗಲು ಸಾಧ್ಯ. ಸರ್ಕಾರಗಳು ಇದನ್ನು ಅರ್ಥ ಮಾಡಿಕೊಂಡು ಹೆಚ್ಚಿನ ಅನುದಾನ ಒದಗಿಸಿ ಮಂಡಳಿಯ ಕಾರ್ಯಚಟುವಟಿಕೆ ಕ್ರಿಯಾಶೀಲವಾಗುವಂತೆ ಮಾಡಬೇಕು ಎನ್ನುವುದು ಬೆಳೆಗಾರರ ಒತ್ತಾಯವಾಗಿದೆ.

ಇದನ್ನೂ ಓದಿ: Weather report : ನಾಳೆ ಕರಾವಳಿ, ಮಲೆನಾಡಲ್ಲಿ ವ್ಯಾಪಕ ಮಳೆ; ಬೆಂಗಳೂರಲ್ಲಿ ಹೇಗಿರಲಿದೆ ಗೊತ್ತಾ?

ಕೇಂದ್ರ ಸರ್ಕಾರದ ಸಂಬಾರ ಮಂಡಳಿ ನಿಷ್ಕ್ರಿಯವಾಗಿದ್ದು ರೈತರ ಪಾಲಿಗೆ ದುರದೃಷ್ಟಕರ ಸಂಗತಿ. ಶಿರಸಿ ಸೇರಿದಂತೆ ಸುತ್ತಲಿನ ಅನೇಕ ತಾಲೂಕಿನಲ್ಲಿ ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಯುವ ರೈತರಿದ್ದಾರೆ. ಅಲ್ಲದೇ ವಾಣಿಜ್ಯ ಬೆಳೆಗಳನ್ನು ಬೆಳೆಯೋ ಕೃಷಿಕರಿದ್ದಾರೆ. ಆದರೆ ನಗರದಲ್ಲಿನ ಸಂಬಾರ ಮಂಡಳಿಗೆ ಅನುದಾನದ ಕೊರೆತೆ ಇದೆ. ಸಿಬ್ಬಂದಿಗಳೂ ಕೂಡ ಇಲ್ಲವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

-ಬಸವರಾಜ್ ದೊಡ್ಮನಿ. ಕೃಷಿಕ

Exit mobile version