ಭಾಸ್ಕರ್ ಆರ್ ಗೆಂಡ್ಲ, ವಿಸ್ತಾರ ನ್ಯೂಸ್
ಶಿರಸಿ: ಮಳೆಯ ಕೊರತೆಯಿಂದ (Lack of rain) ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪೂರ್ವ ಭಾಗದಲ್ಲಿ ಭತ್ತ, ಮೆಕ್ಕೆ ಜೋಳ ಬೆಳೆಗಳು (Crops) ಒಣಗಿ ಹಾಳಾಗಿದ್ದು, ಹಸಿರಿನಿಂದ (Green) ಕಂಗೊಳಿಸಬೇಕಾಗಿದ್ದ ಹೊಲಗಳು ಬರಿದಾಗಿದೆ. ಇದು ರೈತರನ್ನು (Farmers) ಮಮ್ಮಲ ಮರುಗುವಂತೆ ಮಾಡಿದೆ.
ಇಲ್ಲಿನ ಬನವಾಸಿ, ಬದನಗೋಡ ಹಾಗು ಅಂಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮಗಳು ಭತ್ತದ ಬೆಳೆಯನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಭತ್ತದ ಕಣಜ ಎಂದೆ ಕರೆಯಲ್ಪಡುವ ಇಲ್ಲಿನ ರೈತರ ಗೋಳಾಟ ಹೇಳ ತೀರದಾಗಿದೆ. ಇದು ಮಳೆಯಾಶ್ರಿತ ಭತ್ತದ ಬೆಳೆಯ ಪ್ರದೇಶವಾಗಿದ್ದು, ಪ್ರಸಕ್ತ ಸಾಲಿನಲ್ಲಿ 2460 ಹೆಕ್ಟೇರ್ ಭತ್ತ, 1550 ಹೆಕ್ಟೇರ್ ಅಡಿಕೆ, ನೂರಾರು ಎಕರೆ ಮೆಕ್ಕೆ ಜೋಳ, ಬಾಳೆ ಬೆಳೆಗಳಿಗೆ ನೀರಿಲ್ಲದ ಒಣಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಬದನಗೋಡ ವ್ಯಾಪ್ತಿಯಲ್ಲಿ ಬೆಳೆಗಳು ಗೋವಿನ ಆಹಾರಕ್ಕೂ ಬಾರದಂತೆ ಒಣಗಿ ಹಾಳಾಗಿದೆ.
ಅಕಾಲಿಕ ಮಳೆ, ಕೊರತೆಯಿಂದ ಅಡಿಕೆ ಮಿಳ್ಳೆಗಳು ಈ ಹಿಂದೆ ಉದುರಿ ಹಾಳಾಗಿದ್ದವು. ಈಗ ಹಲವೆಡೆ ಅಡಿಕೆ ಚೆಂಡೆಗಳು ಹಳದಿಯತ್ತ ತಿರುಗಿದ್ದು, ಇನ್ನೂ ನೀರಿನ ಕೊರತೆಯಾದಲ್ಲಿ ನಾಶವಾಗುವ ಆತಂಕ ಎದುರಾಗಿದೆ. ಇದರ ಜತೆಗೆ ಎಕರೆಗೆ 15 ರಿಂದ 20 ಸಾವಿರ ರೂ. ಖರ್ಚು ಮಾಡಿ ಬೆಳೆದ ಭತ್ತ, ಜೋಳ ನಾಶವಾದ ಕಾರಣ ರೈತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: Elephant attack : ಚಿಕಿತ್ಸೆಗೆ ಹೋದಾಗ ಅಟ್ಟಾಡಿಸಿದ ಗಾಯಾಳು ಕಾಡಾನೆ; ಅರಣ್ಯ ಸಿಬ್ಬಂದಿ ಸಾವು!
ಕಳೆದ 2017 ರಲ್ಲಿ ತೀವ್ರ ಬರಗಾಲದಿಂದ ತತ್ತರಿಸಿದ ಅನ್ನದಾತರು ಇದೀಗ ಅದೇ ಸ್ಥಿತಿ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಾಗದೇ ಭತ್ತ ಹಾಗೂ ಜೋಳದ ಬೆಳೆಗಳು ಒಣಗಿದ್ದು, ಇನ್ನು ಮಳೆಯಾದರೂ ಪ್ರಯೋಜವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದರೆ ನಾಟಿ ಹಾಗೂ ಬಿತ್ತನೆ ಮಾಡಿದ ಗದ್ದೆಗಳು ನೀರಿನಿಂದ ತುಂಬಿಕೊಂಡು ಸಮೃದ್ಧವಾಗಿರುತ್ತಿದ್ದವು. ಜತೆಯಲ್ಲಿ ಸಸಿಗಳು ಹಸಿರಿನಿಂದ ಕಂಗೊಳಿಸಿ ಭತ್ತದ ಹೊಡೆ ಒಡೆಯಲು ಆರಂಭಿಸುತ್ತಿದ್ದವು. ಆದರೆ ಇಲ್ಲಿನ ಪರಿಸ್ಥಿತಿ ಹೇಗಿದೆಯೆಂದರೆ ಬಿಸಿಲಿನ ಅಬ್ಬರಕ್ಕೆ ಗದ್ದೆಗಳು ನೀರಿಲ್ಲದೇ ಬಾಯ್ಬಿಟ್ಟಿವೆ. ಈಗಾಗಲೇ ಬೆಳೆಗಳು ನಾಶವಾಗಿದೆ. ಇನ್ನು ಮಳೆಯಾದರೂ ಸಹ ಈಗಿನ ಬೆಳೆಗೆ ಯಾವುದೇ ಪ್ರಯೋಜನ ಇಲ್ಲ. ನಾಶವಾಗಿರುವ ಬೆಳೆಗೆ ಪರಿಹಾರ ನೀಡಿ, ಈ ಭಾಗದ ಪ್ರದೇಶವನ್ನು ಬರಗಾಲ ಪೀಡಿತ ಪ್ರದೇಶವಾಗಿ ಘೋಷಣೆ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಪ್ರತಿ ಎಕರೆಗೆ ಕನಿಷ್ಠ 25 ರಿಂದ 30 ಸಾವಿರ ರೂ. ಪರಿಹಾರ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸಂಘ-ಸಂಸ್ಥೆಗಳಿಂದ ಪಡೆದ ಸಾಲ ತುಂಬಲಾಗದೇ ರೈತ ಮಾನಸಿಕವಾಗಿ ಕುಗ್ಗುವ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಬೆಳೆ ಹಾನಿ ಸಮೀಕ್ಷೆ ನಡೆಸಿ, ಪರಿಹಾರ ವಿತರಿಸಲು ತಕ್ಷಣ ಕ್ರಮ ವಹಿಸಬೇಕೆಂಬುದು ರೈತ ಸಮುದಾಯದ ಆಗ್ರಹವಾಗಿದೆ.
ಬೆಳೆಗಳ ನಾಶದ ಜತೆಗೆ ಬದನಗೋಡ ಮತ್ತು ಬನವಾಸಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ 31 ಕೆರೆ, ಜಿಲ್ಲಾ ಪಂಚಾಯಿತಿ ಅಡಿಯಲ್ಲಿ ಸುಮಾರು 40 ಕೆರೆ ಹಾಗೂ ಗ್ರಾ.ಪಂ ಅಡಿಯಲ್ಲಿ ಸುಮಾರು 20 ಕೆರೆಗಳಿವೆ. ಕೆರೆಗಳಲ್ಲಿ ನೀರು ತಳಮಟ್ಟಕ್ಕೆ ಇಳಿಯುತ್ತಿದೆ. ಹೀಗೆ ಮಳೆ ಕೊರತೆಯಾದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಆಹಾಕಾರ ಉಂಟಾಗುವ ಆತಂಕ ಎದುರಾಗಿದೆ. ಇದರಿಂದ ಆಡಳಿತ ಶೀಘ್ರವಾಗಿ ಎಚ್ಚೆತ್ತುಕೊಂಡು ರೈತರ ಸಹಾಯಕ್ಕೆ ನಿಲ್ಲಬೇಕು ಎಂಬುದು ಅನ್ನದಾತರ ಒತ್ತಾಯವಾಗಿದೆ.