ಭಾಸ್ಕರ್ ಆರ್. ಗೆಂಡ್ಲ. ವಿಸ್ತಾರ ನ್ಯೂಸ್
ಶಿರಸಿ: ಮಳೆ (Rain) ಕೊರತೆಯಿಂದಾಗಿ ತೀವ್ರ ಬರ (Drought) ಪರಿಸ್ಥಿತಿ ಎದುರಿಸುತ್ತಿರುವ ಉ.ಕ ಜಿಲ್ಲೆಯ ರೈತರು (Farmers) ತಾವು ಬೆಳೆದ ಭತ್ತದ ಬೆಳೆಗೆ ಬೆಂಕಿ ರೋಗ ಹಾಗೂ ಕರಿಜೀಗಿ ರೋಗ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಹೆಚ್ಚಿಸುವಂತೆ ಮಾಡಿದೆ.
ಹೌದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈಕೊಟ್ಟ ಕಾರಣದಿಂದಾಗಿ ಸರಿಯಾದ ಸಮಯಕ್ಕೆ ಕೃಷಿ ಚಟುವಟಿಕೆ ನಡೆದಿರಲಿಲ್ಲ. ಕೊನೇ ಘಳಿಗೆಯಲ್ಲಿ ಸುರಿದ ಅಲ್ಪ ಸ್ವಲ್ಪ ಮಳೆಗೆ ಕೃಷಿ ಚಟುವಟಿಕೆ ನಡೆಸಲಾಗಿತ್ತಾದರೂ ಬಳಿಕ ತೀವ್ರ ಮಳೆ ಕೊರತೆಯಿಂದಾಗಿ ನಾಟಿ ಮಾಡಿದ ಭತ್ತದ ಗದ್ದೆಗಳು ನೀರಿಲ್ಲದೆ ಒಣಗುವಂತಾಗಿತ್ತು. ಇದೇ ಕಾರಣಕ್ಕೆ ಕೆಲವರು ಗದ್ದೆ ಒಣಗದಂತೆ ಕೊಳವೆ ಬಾವಿ ನೀರು ಹರಿಸಿಕೊಂಡು ಇದ್ದ ಬೆಳೆ ರಕ್ಷಿಸಿಕೊಂಡಿದ್ದರು.
ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಬಹುತೇಕ ಗದ್ದೆಗಳು ಒಣಗಿ ಹೋಗಿವೆ. ಜಿಲ್ಲೆಯ 11 ತಾಲೂಕುಗಳನ್ನು ಇಲಾಖೆ ವರದಿಯಂತೆ ಸರ್ಕಾರ ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ. ಇದೀಗ ಕಳೆದ ಕೆಲ ದಿನಗಳಿಂದ ಬಿಸಿಲು ಹಾಗೂ ಮೋಡದ ವಾತಾವರಣಕ್ಕೆ ಬೆಂಕಿ ರೋಗ ಹಾಗೂ ಕರಿ ಜೀಗಿ ರೋಗ ಕಾಣಿಸಿಕೊಳ್ಳತೊಡಗಿದೆ. ಇನ್ನೇನು ತೆನೆ ಒಡೆಯಬೇಕು ಎನ್ನುವಾಗಲೇ ಭತ್ತದ ಬೆಳೆಗೆ ಈ ರೀತಿ ರೋಗ ಭಾದೆಗೆ ತುತ್ತಾಗಿರುವುದು ರೈತರು ಕಂಗಾಲಾಗುವಂತಾಗಿದೆ.
ಇದನ್ನೂ ಓದಿ: Health Tips: ನಿತ್ಯ 20 ನಿಮಿಷವೂ ದೈಹಿಕ ಚಟುವಟಿಕೆ ನಡೆಸುವುದಿಲ್ಲವೆ? ಹಾಗಾದರೆ ಅಪಾಯ ಖಚಿತ!
ಜಿಲ್ಲೆಯಲ್ಲಿ ಸುಮಾರು 44 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗಿದ್ದು, 4 ಸಾವಿರ ಹೆಕ್ಟೇರ್ ಭತ್ತದ ಗದ್ದೆಗೆ ಬೆಂಕಿ ರೋಗ ಕಾಣಿಸಿಕೊಂಡಿದೆ. ಇನ್ನು ಶಿರಸಿ ತಾಲೂಕಿನಲ್ಲಿ 7430 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತದ ಗದ್ದೆಗಳಲ್ಲಿ ಸುಮಾರು 2900 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಂಕಿ ರೋಗ ಕಾಣಿಸಿಕೊಂಡಿದೆ. ತಾಲೂಕಿನ ಪೂರ್ವ ಭಾಗದಲ್ಲಿ ಬೆಂಕಿರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಸಾವಿರಾರು ಎಕರೆ ಭತ್ತದ ಬೆಳೆ ಒಣಗಿ ಹೋಗಿದ್ದು, ರೈತರನ್ನು ಕಂಗಾಲಾಗುವಂತೆ ಮಾಡಿದೆ.
ಬೆಂಕಿ ರೋಗ ಪ್ರತಿ ವರ್ಷದಂತೆ ಈ ವರ್ಷವೂ ಕಾಣಿಸಿಕೊಂಡಿದೆ. ಆದರೆ ಈ ಬಾರಿ ಸರಿಯಾಗಿ ಮಳೆಯಾಗದ ಕಾರಣ ಇದರ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಲಾಗಿದೆ. ಹೀಗಾಗಿ ಪರಿಹಾರ ನೀಡುವ ನಿರೀಕ್ಷೆ ಇದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ ಆರಂಭದಲ್ಲಿ ಮಳೆಯಾಗದೆ ತೀವ್ರ ತೊಂದರೆ ಅನುಭವಿಸಿದ್ದ ಜಿಲ್ಲೆಯ ರೈತರು ಇದೀಗ ಬೆಳೆಗಳಿಗೆ ರೋಗ ಬಂದ ಕಾರಣ ಇದ್ದ ಬೆಳೆಯನ್ನು ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಹಾನಿಗೊಳಗಾದ ಬೆಳೆಗೆ ಸೂಕ್ತ ಪರಿಹಾರ ಕಲ್ಪಿಸಬೇಕೆಂಬ ಒತ್ತಾಯ ಕೂಡ ಕೇಳಿಬಂದಿದೆ.
ಇದನ್ನೂ ಓದಿ: Road Accident : ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ದುರ್ಮರಣ; ಪ್ರಪಾತಕ್ಕೆ ಉರುಳಿದ ಕಾರು, ಬಸ್
ಬದನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭತ್ತವನ್ನು ಬೆಳೆದ ರೈತರ ಜಮೀನಿನಲ್ಲಿ ವ್ಯಾಪಕ ಬೆಂಕಿ ರೋಗ ಹರಡಿದ್ದು, ಇದು ನಿಯಂತ್ರಣಕ್ಕೆ ಬಾರದೆ ರೈತ ಕಂಗಾಲಾಗಿದ್ದಾನೆ. ಕೂಡಲೇ ಸರ್ಕಾರ ಮತ್ತು ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ರೈತರಿಗೆ ಸೂಕ್ತ ಪರಿಹಾರ ಘೋಷಿಸಬೇಕಿದೆ.
-ಬಸವರಾಜ್ ನಂದೀಕೇಶ್ವರಮಠ್ ಮಾಜಿ ಅಧ್ಯಕ್ಷ. ಬದನಗೋಡ ಗ್ರಾ.ಪಂ.