ಶಿರಸಿ: ಜಿಲ್ಲೆಯ ಸಮಸ್ಯೆಗಳ ಬಗ್ಗೆ ಬರಹಗಳ ಮೂಲಕ ಗಮನ ಸೆಳೆದು ಅಭಿವೃದ್ಧಿಗೆ ಪತ್ರಕರ್ತರೇ ಕಾರಣರಾಗುತ್ತಿದ್ದಾರೆ. ಆದರೆ ಆರ್ಥಿಕವಾಗಿ ಪತ್ರಕರ್ತರೇ (Journalists) ಹೆಚ್ಚು ಸಂಕಷ್ಟದಲ್ಲಿದ್ದು, ಸರ್ಕಾರದಿಂದ ಸಾಧ್ಯವಾಗುವ ಸಹಾಯ ಒದಗಿಸಲು ಮುಖ್ಯಮಂತ್ರಿ ಅವರ ಬಳಿ ಚರ್ಚೆ ನಡೆಸುತ್ತೇನೆ ಎಂದು (Uttara Kannada News) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ನಗರದ ಟಿಆರ್‌ಸಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ರಾಜ್ಯ ನನ್ನನ್ನು ಗುರುತಿಸಿದ್ದರೆ ಅದಕ್ಕೆ ಪತ್ರಕರ್ತರೇ ಕಾರಣ. ಬೇರೆ ಜಿಲ್ಲೆಯಷ್ಟು ನಮ್ಮ ಜಿಲ್ಲೆ ಅಭಿವೃದ್ಧಿ ಆಗಿಲ್ಲ, ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎಂಬ ಬಗ್ಗೆ ಪತ್ರಕರ್ತರೂ ಸೇರಿದಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಬಗ್ಗೆ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆ ಹಾಗೂ ವಿವಿಧ ಆಸ್ಪತ್ರೆಗಳ ಪ್ರಮುಖರನ್ನು ಸಂಪರ್ಕಿಸುತ್ತಿದ್ದೇನೆ. ಅವರು ಮುಂದೆ ಬಂದರೆ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಸೌಲಭ್ಯ ನಾವು ಒದಗಿಸುತ್ತೇವೆ. ಜನ ಸಾಮಾನ್ಯರು ಔಷಧೋಪಚಾರಕ್ಕಾಗಿ ಬೇರೆ ಜಿಲ್ಲೆಗೆ ಅನಿವಾರ್ಯವಾಗಿ ಹೋಗುವಂತಾಗಬಾರದು ಎಂಬುದು ನಮ್ಮ ಉದ್ದೇಶ ಎಂದರು.
ಇದನ್ನೂ ಓದಿ: Chapped Lips: ಈ ಚಳಿಗಾಲದಲ್ಲಿ ತುಟಿ ಬಿರಿಯುತ್ತಿದೆಯೇ? ಇಲ್ಲಿದೆ ಮದ್ದು!
ಹಿರಿಯ ಪತ್ರಕರ್ತ ಜಿ.ಯು.ಭಟ್ ಹೊನ್ನಾವರ ಮಾತನಾಡಿ, ರಾಜ್ಯದ ಪತ್ರಿಕೋದ್ಯಮ, ಪತ್ರಿಕೆಗಳಲ್ಲಿ ಜಿಲ್ಲೆಯ ಪತ್ರಕರ್ತರೇ ಜಾಸ್ತಿ ಇದ್ದಾರೆ. ಜಿಲ್ಲೆಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದಾಗ ಪತ್ರಿಕಾ ಮಂಡಳಿ ಸ್ಥಾಪಕ ಜಿ.ಎಸ್. ಹೆಗಡೆ ಅಜ್ಜಿಬಳ್ ಅವರು ಎಲ್ಲ ಪತ್ರಕರ್ತರನ್ನೂ ಒಗ್ಗೂಡಿಸಿ ಯೋಜನೆಯನ್ನು ಸಮರ್ಥವಾಗಿ ವಿರೋಧಿಸಿ ಪತ್ರಿಕೆಯ ಮೂಲಕ ಪ್ರತಿಧ್ವನಿಸಿದ್ದರು. ಎಲ್ಲ ಹೋರಾಟದ ಧ್ವನಿ, ಬೆಂಗಳೂರು, ದೆಹಲಿಗೆ ತಲುಪಿತ್ತಲ್ಲದೇ ಅಂದು ದೇವರಾಜ ಅರಸು ಪತ್ರಿಕೆಗಳ ಹೋರಾಟದ ಫಲವಾಗಿ ಈ ಯೋಜನೆ ಕೈ ಬಿಟ್ಟಿದ್ದರು. ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣ ಸಮಸ್ಯೆ, ಅನೇಕ ಸಮಸ್ಯೆಗಳ ಬಗ್ಗೆ ಪತ್ರಕರ್ತರು ಸದಾ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಆದರೆ, ಕಷ್ಟದ ಜೀವನ ನಡೆಸುವ ಪತ್ರಕರ್ತನಿಗೆ ಸರ್ಕಾರದಿಂದ ನಿವೃತ್ತಿ ವೇತನ, ಆರೋಗ್ಯ ಸುರಕ್ಷೆ ಸೌಲಭ್ಯ ಬೇಕಾಗಿದೆ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಹೆಮ್ಮೆ ಎನಿಸುತ್ತದೆ. ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಪತ್ರಿಕೋದ್ಯಮ ಹೆಚ್ಚಿನ ಒತ್ತು ನೀಡಿದೆ. ಸರ್ಕಾರದಿಂದ ಬರುವ ಸಹಾಯಧನ ತಾಲೂಕು ಮಟ್ಟದ ಪತ್ರಕರ್ತರಿಗೂ ಸಿಗುವಂತೆ ಸರ್ಕಾರ ಮಟ್ಟದಲ್ಲಿ ಪ್ರಯತ್ನ ನಡೆಸಬೇಕಿದೆ. ಜಿಲ್ಲೆಯ ಪ್ರವಾಸೋದ್ಯಮ, ಅಭಿವೃದ್ಧಿಗೆ ಸಿಗಬೇಕಾದ ನ್ಯಾಯವನ್ನು ನಮ್ಮ ಪತ್ರಕರ್ತರು ರಾಜ್ಯ ಮಟ್ಟದಲ್ಲಿ ಬಿಂಬಿಸಿದ್ದಾರೆ ಎಂದರು.
ಇದನ್ನೂ ಓದಿ: Money Guide : ಓಪನ್ ಎಂಡೆಡ್, ಕ್ಲೋಸ್ಡ್ ಎಂಡೆಡ್ ಮ್ಯೂಚುವಲ್ ಫಂಡ್ ಎಂದರೇನು, ಯಾವುದು ಬೆಸ್ಟ್?
ಪತ್ರಿಕಾ ಸಂಘದ ಜಿಲ್ಲಾಧ್ಯಕ್ಷ ಜಿ.ಸು. ಭಟ್ ಬಕ್ಕಳ ಮಾತನಾಡಿ, ಕ್ಷೇಮ ನಿಧಿಯನ್ನು ಸಂಗ್ರಹಿಸುವ ಮೂಲಕ ಪತ್ರಕರ್ತರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ಮಂಡಳಿ ನಿರ್ಧರಿಸಿದೆ. ಪತ್ರಿಕಾ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯದ ಅಗತ್ಯತೆ ಇದೆ. ಪತ್ರಿಕಾ ಭವನ ಇನ್ನೂ ಸಂಪೂರ್ಣಗೊಳ್ಳಲು ಕನಿಷ್ಠ 1 ಕೋಟಿ ರೂ. ಬೇಕಾಗಿದೆ ಎಂದರು.
ಉತ್ತರಕನ್ನಡ ಕಾರ‍್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿಠ್ಠಲದಾಸ ಕಾಮತ್ ಮಾತನಾಡಿ, ತಮ್ಮ ಜೋಳಿಗೆಯಲ್ಲಿ ನೋವು, ಅಪಮಾನ, ಸಾಲ ಹೊಂದಿ ಇತರರ ಜೋಳಿಗೆಗೆ ನ್ಯಾಯ ಒದಗಿಸುವ ಕಾರ್ಯ ಪತ್ರಕರ್ತನಿಂದ ಮಾತ್ರ ಆಗುತ್ತದೆ. ಪತ್ರಕರ್ತನಿಗೆ ನ್ಯಾಯ ಒದಗಿಸಬೇಕಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಪತ್ರಿಕಾ ಮಂಡಳಿ ಸಾಗಿ ಬಂದ ದಾರಿಯ ಬಗ್ಗೆ ತಿಳಿಸಿದರು. ಇದೇ ವೇಳೆ ಪತ್ರಕರ್ತರ ಸಂಖ್ಯೆ ಇರುವ ಕ್ಯಾಲೆಂಡರ್, ಪತ್ರಿಕಾ ಸಂಘದ ಲೋಗೋ ಅನಾವರಣಗೊಳಿಸಲಾಯಿತು.
ಈ ವೇಳೆ ಕಾರ‍್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಬಸವರಾಜ ಪಾಟೀಲ, ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾ ಪತ್ರಿಕಾ ಮಂಡಳಿ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್, ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಖಜಾಂಚಿ ರಾಜೇಂದ್ರ ಶಿಂಗನಮನೆ ಇತರರಿದ್ದರು.
ಇದನ್ನೂ ಓದಿ: Trent Boult: ಟ್ರೆಂಡ್ ಆದ ಟ್ರೆಂಟ್ ಬೌಲ್ಟ್ ಫ್ಲೈಯಿಂಗ್ ಕ್ಯಾಚ್; ವಿಡಿಯೊ ವೈರಲ್
ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ರಾಘವೇಂದ್ರ ಬೆಟ್ಟಕೊಪ್ಪ, ಶೈಲಜಾ ಗೋರ್ನಮನೆ ನಿರೂಪಿಸಿದರು. ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು.