ಶಿರಸಿ: ನಗರದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಅಭಿವೃದ್ಧಿಗೆ ಜಾರಿಯಾಗಿರುವ ವಿವಿಧ ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಕಾಯ್ದೆಗಳ ಅರಿವು ಮೂಡಿಸುವ ಜಾಗೃತಿ ಕಾರ್ಯಾಗಾರವು (Awareness workshop) ಹಲವು ಎಡವಟ್ಟುಗಳಿಗೆ ಕಾರಣವಾದ ಘಟನೆ ಜರುಗಿತು.
ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದುರ್ಬಲ ವರ್ಗಗಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು ಅವರ ಭಾವಚಿತ್ರ ಒಳಗೊಂಡ ಕಾರ್ಯಕ್ರಮಗಳ ವಿವರಗಳ ಪಟ್ಟಿಯನ್ನೇ ಪ್ರಸ್ತುತ ಕಾರ್ಯಾಗಾರದಲ್ಲಿ ನೀಡಲಾಗಿತ್ತು. ಶ್ರೀರಾಮುಲು ಹೆಸರು ಕಾಣದಂತೆ ಬಿಳಿ ಪಟ್ಟಿ ಅಂಟಿಸಲಾಗಿತ್ತು. ಇದು ಕಾರ್ಯಾಗಾರದಲ್ಲಿ ಭಾಗಿಯಾದವರ ಆಕ್ಷೇಪಕ್ಕೆ ಕಾರಣವಾಯಿತು.
ಇದನ್ನೂ ಓದಿ: Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು
ಸರ್ಕಾರ ಬದಲಾಗಿದ್ದರೂ ಕೂಡ ಕಾರ್ಯಕ್ರಮದ ಮಾಹಿತಿ ಪಟ್ಟಿಯಲ್ಲಿ ಮಾತ್ರ ಬಸವರಾಜ ಬೊಮ್ಮಾಯಿ ಹಾಗೂ ಶ್ರೀರಾಮುಲು ಭಾವಚಿತ್ರ ಒಳಗೊಂಡ ಪಟ್ಟಿ ನೀಡಲಾಗಿತ್ತು. ಇದು ಕಾರ್ಯಕ್ರಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರ್ಯಕ್ರಮ ಸಾಕ್ಷಿಯಾಗಿತ್ತು.
ಪರಿಶಿಷ್ಟ ಜಾತಿ-ಪಂಗಡಗಳ ವರ್ಗದ ಜನರಿಗೆ ಸರ್ಕಾರಿ ಯೋಜನೆಗಳು, ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಆದರೆ ವಿಷಯಾಧಾರಿತ ಮಾಹಿತಿ ನೀಡಲು ಇಲಾಖೆಗಳ ಯಾವೊಬ್ಬ ಅಧಿಕಾರಿಯಾಗಲೀ, ಸಂಪನ್ಮೂಲ ವ್ಯಕ್ತಿಯಾಗಲೀ ಸ್ಥಳದಲ್ಲಿ ಹಾಜರಿರಲಿಲ್ಲ. ಕೇವಲ ನಿಗಮದ ಸಿಬ್ಬಂದಿ ಮಾಹಿತಿ ಹಂಚಿಕೊಂಡರು. ಇದರಿಂದ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಸಂಪೂರ್ಣ ಮಾಹಿತಿ ಸಿಗದಂತಾಯಿತು.
ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಕಾರ್ಯಕ್ರಮ ಉದ್ಘಾಟಿಸಿ, ತೆರಳಿದರು. ಆದರೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಾಗಿರಲಿಲ್ಲ.
ಇದನ್ನೂ ಓದಿ: IPL 2024: ಗುಜರಾತ್ ಟೈಟಾನ್ಸ್‌ಗೆ ಶುಭಮನ್ ಗಿಲ್ ನಾಯಕ; ಪಾಂಡ್ಯ ಮುಂಬೈ ಪಾಲು!
ಇನ್ನು ಕಳೆದ ಸರ್ಕಾರದ ಅವಧಿಯಲ್ಲಿ ನಡೆದ ಕಾರ್ಯಕ್ರಮದ ಪಟ್ಟಿಯನ್ನೇ ಬಳಸಲು ಕಾರಣ ಏನು ಎಂದು ಅಧಿಕಾರಿಗಳನ್ನು ಕೇಳಿದರೆ, ಕಳೆದ ವರ್ಷದಲ್ಲಿ ಉಳಿದ ಕೆಲವು ಮಾಹಿತಿ ಪಟ್ಟಿಯನ್ನು ಕಾರ್ಯಕ್ರಮದಲ್ಲಿ ಇಡಲಾಗಿತ್ತು. ಯೋಜನೆಗಳು ಹಾಗೂ ಮಾಹಿತಿಗಳು ಬದಲಾವಣೆಯಾಗದ ಕಾರಣ ಅದೇ ಪಟ್ಟಿಯನ್ನು ಬಳಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ್ ಪ್ರತಿಕ್ರಿಯಿಸಿದ್ದಾರೆ.