ಶಿರಸಿ: ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ (ಏ. 4) ಪ್ರಜ್ವಲ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಜ್ವಲೋತ್ಸವ -1, ಭಜನಾಮೃತ, ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಯಶಸ್ವಿಯಾಗಿ (Sirsi News) ನೆರವೇರಿತು.
ಭಜನೆ ಸ್ಪರ್ಧೆಯಲ್ಲಿ ಒಟ್ಟು 60 ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯ ನಿರ್ಣಾಯಕರಾಗಿ ಜಿ.ಆರ್.ಹೆಗಡೆ ಶಿರಸಿ, ಗಂಗಾ ಹೆಗಡೆ ಕಾನಸೂರು, ಗುರುರಾಜ ಆಡುಕಳಾ, ಕಮಲಾ ಹೆಗಡೆ ಶಿರಸಿ, ನಿರ್ಮಲಾ ಹೆಗಡೆ ಗೋಳಿಕೊಪ್ಪ, ಮುಕ್ತಾ ಶಂಕರ ಆಗಮಿಸಿ ಸಮರ್ಥವಾಗಿ ನಿರ್ಣಯ ನೀಡಿದರು.
ಇದನ್ನೂ ಓದಿ: Documents Digitalization: ಶ್ರೀನಿವಾಸ್ ಹೆಬ್ಬಾರ್ ಮತ್ತೊಂದು ಸಾಹಸ; ಶಿರಸಿ ಉಪ ವಿಭಾಗದ ದಾಖಲೆ ಸಂಪೂರ್ಣ ಡಿಜಿಟಲೀಕರಣ
ಪ್ರಥಮ ಸ್ಥಾನವನ್ನು ರಾಜರಾಜೇಶ್ವರಿ ಹವ್ಯಕ ಬಳಗ ಸೋಂದಾ, ದ್ವಿತೀಯ ಸ್ಥಾನವನ್ನು ಸಂಹಿತಾ ಮ್ಯೂಸಿಕ್ ಫೋರಂ ಶಿರಸಿ, ತೃತೀಯ ಸ್ಥಾನವನ್ನು ನಾದ ಝೇಂಕಾರ ಹೀಪನಳ್ಳಿ , ಪ್ರೋತ್ಸಾಹಕ ಬಹುಮಾನವನ್ನು ಶಾಂತದುರ್ಗಾ ಮಹಿಳಾ ಭಜನಾ ಮಂಡಳಿ ಗುಂದ ತಂಡವು ಪಡೆದವು.
ಇದೇ ವೇಳೆ ಹಲವು ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ರಂಗೋಲಿಯಲ್ಲಿ ಹೊಸ ಭರವಸೆ ಮೂಡಿಸುತ್ತಿರುವ ಚಿನ್ಮಯಿ ಹೆಗಡೆ ಬೆಂಗಳೆ, ಗಣೇಶ ಖರೆ ಬನವಾಸಿ ಹಾಗೂ ಹೊನ್ನಕಾಂತಿ ಪ್ರೊಡಕ್ಟ್ಸ್ ತಯಾರಕ ಎಂ.ಪಿ.ಹೆಗಡೆ ಮಾಗೋಡ ಅವರಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಪಿ. ಹೆಗಡೆ ಮಾಗೋಡ, “ಮನಸ್ಸಿದ್ದರೆ ಮಾರ್ಗ ಎಂಬುದನ್ನು ನಾನು ಅಳವಡಿಸಿಕೊಂಡು ನನ್ನ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತಿದ್ದೇನೆ. ದೊಡ್ಡ ದೊಡ್ಡ ಸಾಧನೆಗಳು ಚಿಕ್ಕ ಪ್ರಯತ್ನಗಳಿಂದ ಸಾಧ್ಯವಾಗುತ್ತದೆ ಎನ್ನುವುದನ್ನು ಎಲ್ಲರೂ ಅರಿತುಕೊಂಡು ದೃಢ ಮನಸ್ಸಿನಿಂದ ಕೆಲಸ ಪ್ರಾರಂಭಿಸಿದರೆ ಯಶಸ್ಸು ಸಾಧ್ಯ” ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಸ್ತಾದ್ ಮೌಶಿನ್ ಖಾನ್ ತಮ್ಮ ಸಿತಾರ ವಾದನದೊಂದಿಗೆ ಪ್ರೇಕ್ಷಕರಿಗೆ ಮುದ ನೀಡಿದರು. ಸುಮಾರು ಒಂದು ತಾಸಿಗೂ ಹೆಚ್ಚಿನ ಸಮಯ ನಡೆದ ಸಿತಾರ್ ವಾದನಕ್ಕೆ ತಬಲಾದಲ್ಲಿ ರಾಜೇಂದ್ರ ನಾಕೋಡ್ ಅಷ್ಟೇ ಸಮರ್ಥವಾಗಿ ಸಹಕರಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ತಂದರು. ನಂತರ ಸಾವಿರಾರು ಹಣತೆ ದೀಪಗಳ ಬೆಳಕಿನಲ್ಲಿ ನಡೆದ ಸಾರ್ವಜನಿಕ ರಾಮರಕ್ಷಾ ಪಠಣವು ಸಭಿಕರಲ್ಲಿ ಧನಾತ್ಮಕತೆಯನ್ನು ಸೃಷ್ಟಿಸಿತು.
ಇದನ್ನೂ ಓದಿ: Jeevajala Taskforce : ಜೈನ ಮಠದ ಕೆರೆ, ಯಚಡಿಯ ದೇವರಕೆರೆ ಕಾಯಕಲ್ಪ ಮಾಡಿದ ಶಿರಸಿಯ ಜೀವ ಜಲ ಕಾರ್ಯಪಡೆ
ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಸನ್ಮಾನ ಪತ್ರವನ್ನು ಸುಮಾ ಹೆಗಡೆ, ನಯನಾ ಹೆಗಡೆ ವಾಚಿಸಿದರು. ಕಾರ್ಯಕ್ರಮವನ್ನು ನಾಗೇಶ ಮಧ್ಯಸ್ಥ ನಿರೂಪಿಸಿದರು. ಟ್ರಸ್ಟಿನ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.