Site icon Vistara News

Sirsi News: ಶಿರಸಿಯಲ್ಲಿ ಶಂಕರ ಜಯಂತಿ ಕಾರ್ಯಕ್ರಮ; ಸೋಂದಾ ಸ್ವರ್ಣವಲ್ಲೀ ಮಠಾಧೀಶರಿಂದ ಆಶೀರ್ವಚನ

#image_title

ಶಿರಸಿ: “ಭಕ್ತರು ಹಾಗೂ ವೈಚಾರಿಕತೆಯಲ್ಲಿ ಶಂಕರ ಭಗವತ್ಪಾದರು ಉತ್ತುಂಗದಲ್ಲಿದ್ದವರು. ಭಕ್ತರು, ವೈಚಾರಿಕರು ಎರಡೂ ಹೌದು. ಅವರು ಯುಗ ಗುರುಗಳು” ಎಂದು ಸೋಂದಾ‌ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿ ಬಣ್ಣಿಸಿದರು.

ಸ್ವಾಮೀಜಿ ಅವರು ನಗರದ ಯೋಗ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, “ಶಿಷ್ಯ ಹಿತ, ತತ್ವ ಅರಿತವನೇ ಗುರು. ಈ ಎರಡೂ ಇದ್ದವರು ದಾರ್ಶನಿಕರು. ಅಂಥ ದಾರ್ಶನಿಕರು ಶಂಕರರು. ಅವರ ಹೆಸರಿನಲ್ಲಿ ದಾರ್ಶನಿಕರ ದಿನ ಆಚರಿಸುವದು ಸಂತಸವಾಗಿದೆ” ಎಂದರು.

“ಶಂಕರರ ಜೀವನವೇ ಒಂದು ಪವಾಡ. 8ನೇ ವರ್ಷಕ್ಕೆ ನಾಲ್ಕೂ ವೇದ ಓದಿ ಮುಗಿಸಿದ್ದರು. ಒಂದು ವೇದ ಓದಲು ಕನಿಷ್ಠ 5 ವರ್ಷ ಬೇಕು. ಅಂಥದರಲ್ಲಿ ಎಂಟು ವರ್ಷಕ್ಕೆ ಓದಿದ್ದಾರೆ. 12 ವರ್ಷಕ್ಕೆ ಶಾಸ್ತ್ರ, 16ಕ್ಕೆ ಭಾಷ್ಯ ಬರೆದವರು. ಇಡೀ ಜಗತ್ತು ಆದರದಿಂದ ನೋಡುವ ಭಾಷ್ಯ ಬರೆದವರು‌. 32 ವರ್ಷದಲ್ಲಿ ದೊಡ್ಡ ಪವಾಡ. ಅದಕ್ಕಿಂತ ದೊಡ್ಡ ಪವಾಡ ಇಲ್ಲ. ಶಂಕರ‌ ಭಗವತ್ಪಾದರು ವಿಶ್ವಮಾನ್ಯರಾಗಲು ಅನೇಕ ಕಾರಣಗಳಿವೆ. ನಮ್ಮ ದೇಶದ ಇತಿಹಾಸಕ್ಕೆ ಶಂಕರರು ನೀಡಿದ ಕೊಡುಗೆಯಿಂದ ಒಂದು ದೊಡ್ಡ ತಿರುವು ಸಿಕ್ಕಿದೆ” ಎಂದರು.

ಶಿರಳಗಿ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಆಶೀರ್ವಚನ‌ ನುಡಿದ ಅವರು, “ಪಂಚಾಯತನ ಪೂಜೆಯ ಮೂಲಕ ವಿಶ್ವವ್ಯಾಪಿ ದೈವತ್ವದ ಸ್ವರೂಪವನ್ನು ಮನಗಾಣಿಸಿದವರು. ರಾಷ್ಟ್ರವನ್ನು ಆಧ್ಯಾತ್ಮದ ನೆಲೆಯಲ್ಲಿ ಕಟ್ಟಿ ಏಕತೆಯನ್ನು ಸಾಧಿಸಿದರು” ಎಂದರು.

ಇದನ್ನೂ ಓದಿ: Karnataka Election : ವೈದ್ಯರು ವಿಶ್ರಾಂತಿಗೆ ಸೂಚಿಸಿದರೂ ಮತ್ತೆ ಪ್ರಚಾರಕ್ಕೆ ಹೊರಟ ಎಚ್‌.ಡಿ ಕುಮಾರಸ್ವಾಮಿ

ರಾಜರಾಜೇಶ್ವರಿ ಸಂಸ್ಕೃತ ವಿದ್ಯಾಲಯ ವಿದ್ಯಾರ್ಥಿಗಳು ವೇದ ಘೋಷ ಮಾಡಿದರು. ಶ್ರೀಲತಾ ಹೆಗ್ಗರಸಿಮನೆ ಪ್ರಾರ್ಥಿಸಿದರು. ಯೋಗ ಮಂದಿರದ ಅಧ್ಯಕ್ಷ ಎಸ್.ಎನ್.ಭಟ್ಟ ಉಪಾಧ್ಯ ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಎಸ್.ಹೆಗಡೆ ವಂದಿಸಿದರು. ಹೇಮಾ ಹೆಗಡೆ ನಿರ್ವಹಿಸಿದರು. ಮಾತೆಯರು ಶಂಕರರು ಸ್ತೋತ್ರ ಪಠಣ ಮಾಡಿದರು.

Exit mobile version