ಶಿರಸಿ: ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವುದು ದೊಡ್ಡದಲ್ಲ. ಅದು ಸಹಜಗುಣ. ಅಪಕಾರ ಮಾಡಿದವರಿಗೂ ಉಪಕಾರ ಬಯಸುವುದು ಸಾಧು, ಸಂತರ ಗುಣ. ಅಂಥ ಸದ್ಗುಣ ಎಲ್ಲರೂ ಬೆಳಸಿಕೊಳ್ಳಬೇಕು ಎಂದು ಬೆಂಗಳೂರಿನ ಕೂಡ್ಲಿ ಶೃಂಗೇರಿ ಮಠದ ಶ್ರೀವಿದ್ಯಾವಿಶ್ವೇಶ್ವರ ಭಾರತೀ ಮಹಾ ಸ್ವಾಮೀಜಿ (Sirsi news) ತಿಳಿಸಿದರು.
ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಆಯೋಜಿಸಿರುವ ಶಿಷ್ಯ ಸ್ವೀಕಾರ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಮನುಷ್ಯ ಆದವನು ಸದ್ಗುಣ ಬೆಳೆಸಿಕೊಳ್ಳಬೇಕು. ಇದರಿಂದ ವ್ಯಕ್ತಿ ದೈವತ್ವದ ಕಡೆಗೆ ಹೋಗುತ್ತಾನೆ. ತುಳಸಿದಾಸರೂ ಇದನ್ನೇ ಹೇಳಿದ್ದಾರೆ ಎಂದ ಅವರು, ಮಾನವ ಜನ್ಮದ ಮಹತ್ವದ ಅಂಶ ಭಗವತ್ ಸಾಕ್ಷಾತ್ಕಾರ ಎಂದರು.
ಇದನ್ನೂ ಓದಿ: Land Registration : ಇನ್ನು ಮನೆಯಿಂದಲೇ ರಿಜಿಸ್ಟ್ರೇಷನ್ ಅವಕಾಶ, ನೋಂದಣಿ ಕಚೇರಿಗೆ ಹೋಗಬೇಕಾಗಿಯೇ ಇಲ್ಲ
ಗುರುಗಳ ಮಾತಿನಲ್ಲಿ ವಿಶ್ವಾಸವಿಡುವುದೇ ಶ್ರದ್ಧೆ ಎಂದ ಶ್ರೀಗಳು, ಯಜ್ಞ, ದಾನ, ತಪಸ್ಸು ಇವು ಮೂರನ್ನು ಆಚರಿಸುವುದರಿಂದ ಮನುಷ್ಯ ಜನ್ಮ ಪಾವನ ಎನಿಸಿಕೊಳ್ಳುತ್ತದೆ ಎಂದು ಹೇಳಿದರು.
ಶಿರಳಗಿ ಶ್ರೀರಾಜಾರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಭಾರತೀ ಮಹಾ ಸ್ವಾಮೀಜಿ ಅವರು ನಿದಿಧ್ಯಾಸನ ಕುರಿತು ಉಪನ್ಯಾಸ ನೀಡಿ, ನಾನು ಎನ್ನುವುದಕ್ಕೆ ಅಸ್ತಿತ್ವ ಇಲ್ಲ. ಅಭಿಮಾನದಿಂದ ಜೀವನ, ಇದುವೇ ದುಃಖ. ಇದನ್ನು ಬದಿಗೆ ಸರಿಸಿ ಕರ್ಮಯೋಗ ಮಾಡಬೇಕು. ಇದು ಸಾಧನೆಯ ಮೊದಲ ಮೆಟ್ಟಿಲು ಎಂದ ಅವರು, ತ್ಯಾಗದಲ್ಲಿ ಭಗವಂತ ಪ್ರಾಪ್ತಿ ಆಗುತ್ತಾನೆ. ತ್ಯಾಗದ ಮಹೋನ್ನತವಾದ ಆದರ್ಶ ಸಾರುವುದೇ ಸನ್ಯಾಸಾಶ್ರಮವಾಗಿದೆ ಎಂದರು.
ಇದನ್ನೂ ಓದಿ: Uttara Kannada News: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿ: ಜಿ.ಪಂ ಸಿಇಒ
ಹೊಳೆನರಸೀಪುರದ ಅಧ್ಯಾತ್ಮ ಪ್ರಕಾಶದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಮಹಾ ಸ್ವಾಮೀಜಿ, ತುರವೇಕೆರೆ ಶ್ರೀಪ್ರಣವಾನಂದ ತೀರ್ಥ ಮಹಾಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಯೋಗಾಚಾರ್ಯ ಕೆ.ಎಲ್.ಶಂಕರಾಚಾರ್ಯ ಜೋಯಿಸ್ ಯತಿ ಧರ್ಮ ಹಾಗೂ ಲೋಕ ಧರ್ಮದ ಕುರಿತು ಮಾತನಾಡಿದರು.
ಮಹೇಶ ಭಟ್ಟ ಜೋಯಿಡಾ, ವಿದ್ಯಾನಂದ ಭಟ್ಟ ಸುಂಕಸಾಳ ವೇದಘೋಷ ಮಾಡಿದರು. ಡಾ. ಶಂಕರ ಭಟ್ಟ ಉಂಚಳ್ಳಿ ಆಲೋಕಯಾಂಬ ಲಲಿತೇ ಗ್ರಂಥದ ಕುರಿತು ಪರಿಚಯಿಸಿದರು. ಯಲ್ಲಾಪುರ ಸೀಮೆಯ ಮಾತೆಯರು ಪ್ರಾರ್ಥಿಸಿದರು. ಎನ್.ಜಿ.ಹೆಗಡೆ ಭಟ್ರಕೇರಿ ಸ್ವಾಗತಿಸಿದರು. ಡಾ. ವಿನಾಯಕ ಭಟ್ಟ ಗುಂಜಗೋಡ ನಿರ್ವಹಿಸಿದರು. ಅನಂತ ಭಟ್ಟ ಹುಳಗೋಳ ವಂದಿಸಿದರು.
ಇದನ್ನೂ ಓದಿ: Vijayanagara News: ಹೊಸಪೇಟೆಯಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ
ಸಭೆಗೆ ದರ್ಶನ ಭಾಗ್ಯ ನೀಡಿದ ಶ್ರೀಗಳು
ಇಡೀ ದಿನ ಬಿಡುವಿಲ್ಲದ ಧಾರ್ಮಿಕ ಚಟುವಟಿಕೆಗಳ ನಡುವಿನಲ್ಲಿಯೂ ಸಹ ನೆರೆದಿದ್ದ ಭಕ್ತರ ಅಪೇಕ್ಷೆಯ ಮೇರೆಗೆ ಕೆಲ ಹೊತ್ತಾದರೂ ಸಭೆಯಲ್ಲಿ ದಿವ್ಯ ಸಾನ್ನಿಧ್ಯ ನೀಡುವ ಮೂಲಕ ಶ್ರೀಮಜ್ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಭಕ್ತರ ಅಭಿಲಾಷೆ ಪೂರ್ಣಗೊಳಿಸಿ ಧನ್ಯತಾ ಭಾವ ಸೃಷ್ಟಿಸಿದರು. ಈ ವೇಳೆ ಮಾತನಾಡಿದ ಶ್ರೀಗಳು, ಭಕ್ತರ, ಕಾರ್ಯಕರ್ತರ ಅಪೇಕ್ಷೆಯಂತೆ ಬಂದಿದ್ದೇವೆ. ಬೇಗ ತೆರಳುವುದು ಅನಿವಾರ್ಯ ಆಗಿದೆ. ಆದರೆ, ಸಭೆಯಲ್ಲಿ ಮಾತನಾಡಿದ ಎಲ್ಲರ ಉಪನ್ಯಾಸ ದಾಖಲಿಸಲು ಹೇಳಿದ್ದು, ಬಳಿಕ ಆಲಿಸುವುದಾಗಿ ಕೂಡ ಹೇಳಿದರು.