Site icon Vistara News

Sirsi News: ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ; ಸಾವಿರಾರು ಶಿಷ್ಯ-ಭಕ್ತರಿಗೆ ಮಾತೃ ಭೋಜನ

Shishya Sweekara Mahotsav in Swarnavalli Maha Samsthana Matru Bhojana for thousands of Shishya Bhaktas

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ (Shri Sonda Swarnavalli matha) ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶಿಷ್ಯ ಸ್ವೀಕಾರ ಮಹೋತ್ಸವ ಕಣ್ತುಂಬಿಕೊಳ್ಳಲು ಶಿಷ್ಯ-ಭಕ್ತರು ತಂಡೋಪತಂಡವಾಗಿ ಆಗಮಿಸಿ ಕೃತಾರ್ಥರಾಗುತ್ತಿದ್ದಾರೆ. ಮಾತೆಯರು, ಯುವಕರು, ಹಿರಿಯರು ಈ ಮಹಾ ಕಾರ್ಯದಲ್ಲಿ ಸೇವಾ ಮನೋಭಾವದಲ್ಲಿ ಭಾಗವಹಿಸುತ್ತಿರುವುದು (Sirsi News) ವಿಶೇಷವಾಗಿದೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲದೇ ದೂರದ ಬೆಂಗಳೂರು, ಮುಂಬಯಿ, ದೆಹಲಿ, ಮಂಗಳೂರು, ಬೆಳಗಾವಿ, ಕಂಚಿ ಪ್ರಾಂತದಿಂದಲೂ ಭಕ್ತರು ಆಗಮಿಸಿ ಸಂಭ್ರಮದ ಕಳೆ ಹೆಚ್ಚಿಸುತ್ತಿದ್ದಾರೆ. ಮಾತೆಯರು ಇಡೀ ದಿನ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದೇ ನೂರಾರು ಕಿಲೋಮೀಟರ್ ದೂರದಿಂದ ಮುಂಜಾನೆಯೇ ಮಠಕ್ಕೆ ಆಗಮಿಸಿದ್ದಾರೆ.

ಮಾತೃ ಭೋಜನ ವಿಶೇಷ

ಮಂಗಳವಾರ ಆಗಮಿಸಿದ ಆರೇಳು ಸಾವಿರಕ್ಕೂ ಅಧಿಕ ಶಿಷ್ಯ-ಭಕ್ತರಿಗೆ ಮಾತೃ ಭೋಜನ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಪುರುಷ ಸ್ವಯಂ ಸೇವಕರು ಮಾತೆಯರಿಗೆ ಅನ್ನ ಸಾಂಬಾರ್‌ ಇತ್ಯಾದಿಗಳನ್ನು ತಂದು ಕೊಡುವುದರ ಮೂಲಕ ಸಹಾಯ ಮಾಡಿದರು. ಒಂದುವರೆ ಸಾವಿರಕ್ಕೂ ಅಧಿಕ‌ ಮಾತೆಯರು ಪ್ರಸಾದ ಭೋಜನ ಬಡಿಸಿ, ಸೇವೆ ಸಲ್ಲಿಸಿದರು. ಮಕ್ಕಳಿಗೆ ಬಡಿಸಿದಂತೆ ಊಟ ಬಡಿಸಿ ಮಾತೃ ಭೋಜನದ ಅರ್ಥಪೂರ್ಣತೆ ಹೆಚ್ಚಿಸಿದರು. ಭವಾನಿ, ಲಲಿತಾಂಭ, ರಾಜೇಶ್ವರಿ, ಗಂಗಾ, ಗೌರಿ, ಸರಸ್ವತೀ ಸೇರಿದಂತೆ ಹತ್ತು ಭೋಜನಾಲಯಗಳಲ್ಲಿ‌ ತಲಾ‌ 20ಕ್ಕೂ ಹೆಚ್ಚು ಮಾತೆಯರಿಂದ ಅನ್ನ ಯಜ್ಞ ನಡೆಯಿತು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಒಟ್ಟೊಟ್ಟಿಗೆ ಏರಿಕೆ

ಮಾತೃಕಾ ಭೋಜ‌ನದಲ್ಲಿ ಗೋವೆಕಾಯಿ ಪಾಯಸ, ಕೇಸರಿ ಪ್ರಸಾದ, ಅನ್ನ, ಸಾಂಬಾರ,‌ ಗೆಣಸಿನ ಹಸಿ, ಕ್ಯಾಬೀಜ್‌ ಪಲ್ಯ, ಅಪ್ಪೆಹುಳಿ, ಮೊಸರು ಇರುವುದು ವಿಶೇಷ. ಸಂಪೇಸರ ರಾಮಚಂದ್ರ ಜೋಶಿ ಹಾಗೂ ಆನಂದ ಭಟ್ಟ ಬಾರೆ ತಂಡದವರು ಅತ್ಯಂತ ಶುಚಿ ಹಾಗು ರುಚಿಯಾದ ಊಟೋಪಚಾರ ವ್ಯವಸ್ಥೆ ಮಾಡುತ್ತಿದ್ದಾರೆ. ಈ ಮಹೋತ್ಸವದಲ್ಲಿ ಅನ್ನಪ್ರಸಾದ ಸಮಿತಿಯ ಎಲ್ಲಾ ಸದಸ್ಯರು, ಸ್ವಯಂ ಸೇವಕರು, ಮತ್ತು ಅನೇಕ ಕಾರ್ಮಿಕರು ಭಕ್ತಿ ಶ್ರದ್ಧೆಯಿಂದ ರಾತ್ರಿ-ಹಗಲೆನ್ನದೇ ಶ್ರಮಿಸುತ್ತಿದ್ದಾರೆ. ಆಗಮಿಸಿದ ಎಲ್ಲ ಶಿಷ್ಯ-ಭಕ್ತರಿಗೆ ಶುದ್ಧ ಕುಡಿಯುವ ನೀರನ್ನೇ ನೀಡಲಾಗುತ್ತಿದೆ. ಸಂಜೆ ಮಹಿಳೆಯರು 10 ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದವನ್ನೂ ಕಟ್ಟಿದರು.

ಅಷ್ಟಶ್ರಾದ್ಧ, ಶ್ರೀಲಕ್ಷ್ಮೀ ನೃಸಿಂಹ ಜಪ

ಶಿಷ್ಯ ಸ್ವೀಕಾರ ಮಹೋತ್ಸವ ಹಿನ್ನೆಲೆಯಲ್ಲಿ ಮೂರನೇ ದಿ‌ನ ಮಂಗಳವಾರ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ‌ ಸರಸ್ವತೀ ಮಹಾ ಸ್ವಾಮೀಜಿಗಳ‌ ಸಾನ್ನಿಧ್ಯದಲ್ಲಿ ಒಂದು ಸಾವಿರ ಗಣಪತ್ಯಥರ್ವಶೀರ್ಷ ಜಪ, ಹವನದ ಪೂರ್ಣಾಹುತಿ, ಬ್ರಹ್ಮಚಾರಿ ನಾಗರಾಜ ಭಟ್ಟರಿಂದ ಅಷ್ಟಶ್ರಾದ್ಧ ನೆರವೇರಿತು. ಮಧ್ಯಾಹ್ನೋತ್ತರ ವೈದಿಕರಿಂದ ಶ್ರೀಲಕ್ಷ್ಮೀನೃಸಿಂಹ ಜಪ ನಡೆಯಿತು. ಸಂಜೆ‌ ಶ್ರೀಮಠದ ಇತಿಹಾಸದ ಕುರಿತು ಡಾ. ಲಕ್ಷ್ಮೀಶ ಸೋಂದಾ ಉಪನ್ಯಾಸ, ಮಾತೆಯರಿಂದ ಭಜನೆ, ಶಂಕರ ಭಟ್ಟ ಉಂಚಳ್ಳಿ ಅವರ ಕೀರ್ತನೆ ಜರುಗಿದವು.

ಇದನ್ನೂ ಓದಿ: Hair Bow Fashion: ಮುದ್ದಾದ ಮಕ್ಕಳಿಗೆ ಕ್ಯೂಟಾದ ಹೇರ್‌ ಬೋ ಸಿಂಗಾರ

ಶಿಷ್ಯ ಸ್ವೀಕಾರದ ಪೂರ್ವಾಂಗದ ಕಾರ್ಯಕ್ರಮಗಳು ಬುಧವಾರ ಇರುವುದರಿಂದ ಹತ್ತರಿಂದ ಹನ್ನೆರಡು ಸಾವಿರಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ. ಇದಕ್ಕೆ ಸಂಬಂಧಿಸಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಪಾಹಾರದ ಕೌಂಟರ್ ಮತ್ತು ಬೆಳಗ್ಗೆಯಿಂದ ಸಂಜೆತನಕ ಎಳ್ಳಿನ ನೀರಿನ ವ್ಯವಸ್ಥೆ, ಚಹಾ, ಕಷಾಯ, ತಿಂಡಿ ಇಡಲಾಗಿದೆ. ಎರಡು‌ ತಿಂಗಳ‌ ಶ್ರಮ ಐದು ದಿನಗಳಲ್ಲಿ ಸಂಭ್ರಮವಾಗಿ‌ ಕಾಣಬೇಕಿದೆ.

-ಅನಂತ ಭಟ್ಟ, ಹುಳಗೋಳ, ಸಂಚಾಲಕ, ಅನ್ನ ಪ್ರಸಾದ ಸಮಿತಿ

ಪೂರ್ಣ ಕುಂಭ ಸ್ವಾಗತಕ್ಕೆ ಬನ್ನಿ ಎಂದು ಶ್ರೀಮಠದ ಕೇಂದ್ರ ಮಾತೃ‌ ಮಂಡಳಿ‌ ಮನವಿ ಮಾಡಿಕೊಂಡಿದೆ. ಫೆ.22ರಂದು ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಆಗಮಿಸುವ ಯತಿಗಳನ್ನು, ಸ್ವರ್ಣವಲ್ಲೀ ಶ್ರೀಗಳನ್ನು, ಸಂನ್ಯಾಸ‌ ಸ್ವೀಕಾರದ ನೂತನ ಶ್ರೀಗಳನ್ನೂ ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುತ್ತಿದ್ದು, ಬೆಳಗ್ಗೆ 8.30ರೊಳಗೆ‌ ಸ್ವರ್ಣವಲ್ಲೀ ಮಠದಲ್ಲಿ‌ ಇರಬೇಕಿದೆ.

-ಗೀತಾ ಹೆಗಡೆ, ಶೀಗೇಮನೆ, ಅಧ್ಯಕ್ಷರು, ಕೇಂದ್ರ ಮಾತೃ ಮಂಡಳಿ

ಇದನ್ನೂ ಓದಿ: Salary Hike: 300 ಶೇಕಡಾ ಸಂಬಳ ಹೆಚ್ಚಳ! ಯಾವ ಕಂಪನಿಯಲ್ಲಿ ನೋಡಿ

ಫೆ.22ರ ಬೆಳಗ್ಗೆ 9ರಿಂದ 10.15ರ ತನಕ ಸಂನ್ಯಾಸ ಸ್ವೀಕಾರ ಕಾರ್ಯಕ್ರಮ ಶಾಲ್ಮಲಾ ನದಿಯ ಬಳಿ ಆಗಲಿದ್ದು, ಮಠಕ್ಕೆ ಬರುವ ಮಾರ್ಗವೂ ಅದರ ದಡದಲ್ಲಿಯೆ ಇರುವುದರಿಂದ ಕೆಲ ಸಮಯ ಈ‌ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ‌ ಇರಲಿದೆ.

-ಜಿ.ವಿ.ಹೆಗಡೆ ಗೊಡವೆಮನೆ ಕಾರ್ಯದರ್ಶಿ, ಮಠದ ಆಡಳಿತ‌ ಮಂಡಳಿ

Exit mobile version