ಶಿರಸಿ: ಮಠಕ್ಕೆ ಆಗಮಿಸಿರುವ ಯತಿವರ್ಯೇಣ್ಯರೇ ನೆಂಟರು, ಅವರ ಸಮ್ಮುಖದಲ್ಲಿ ಸಂಭ್ರಮದಿಂದ ಶಿಷ್ಯೋತ್ಸವ ನಡೆಯುತ್ತಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀಮಜ್ಜಗದ್ಗುರು ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ (Sirsi News) ತಿಳಿಸಿದರು.
ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಹಮ್ಮಿಕೊಂಡ ಶಿಷ್ಯ ಸ್ವೀಕಾರ ಮಹೋತ್ಸವದ ಧರ್ಮಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿದೆ, ಅದರಂತೆ ಫೆಬ್ರವರಿ 22ರಂದು ಸ್ವರ್ಣವಲ್ಲೀ ಮಠದಲ್ಲಿ ರಾಮನ ಪ್ರತಿಷ್ಠಾಪನೆಯಾಗಿದೆ. ನೂತನ ಯತಿಗಳಿಗೆ ಆನಂದಬೋಧೇಂದ್ರ ಹೆಸರಿಡಲು ನನಗಾಗಿರುವ ಆನಂದವೂ ಒಂದು ಕಾರಣ. ಆಧ್ಯಾತ್ಮಿಕತೆ, ಲೌಕಿಕತೆಯನ್ನು ಸಮನ್ವಯ ಮಾಡಿಕೊಂಡು ಹೋಗಬೇಕಾಗಿದೆ. ಮಠದ ಪರಂಪರೆ ಮುಂದುವರೆಯುತ್ತಾ ಹೋಗಬೇಕು ಎನ್ನುವುದೇ ನಮ್ಮೆಲ್ಲರ ಆಶಯ ಎಂದು ಶ್ರೀಗಳು ತಿಳಿಸಿದರು.
ಮಠದ ಒಳಗೆ ಅನುಷ್ಠಾನ, ಜಪ-ತಪ, ಹೊರಗಡೆ ಬಂದರೆ ಸಾಮಾಜಿಕ ಕಳಕಳಿಯನ್ನು ಭಕ್ತರು ಭಯಸುತ್ತಾರೆ. ನೂತನ ಯತಿಗಳಿಗೆ ದೀರ್ಘಕಾಲ ಮಾರ್ಗದರ್ಶನ ಲಭಿಸಲಿ ಎಂದು ಬೇಗ ಶಿಷ್ಯರನ್ನು ಸ್ವೀಕರಿಸಿದ್ದೇವೆ ಎಂದರು.
ತಂದೆ ತಾಯಿಗಿಂತ ಹೆಚ್ಚಾಗಿ ನೋಡಿಕೊಳ್ಳುವ ಗುರುಗಳು ಸಿಕ್ಕಿದ್ದಾರೆ ಎನ್ನುವ ಆನಂದ ಬೋಧೇಂದ್ರರ ಮಾತು ಕೇಳಿ ಜವಾಬ್ದಾರಿ ಹೆಚ್ಚಾಗಿದೆ, ಜನರ ಮನಸ್ಸಿನ ಮೂಲೆಯಲ್ಲಿ ಧರ್ಮ ಇನ್ನೂ ಇದೆ ಎನ್ನುವುದಕ್ಕೆ ಶಿಷ್ಯ ಸ್ವೀಕಾರ ಕಾರ್ಯಕ್ರಮದ ಯಶಸ್ಸೇ ಸಾಕ್ಷಿ ಎಂದು ತಿಳಿಸಿದರು.
ನೂತನ ಯತಿಗಳಾದ ಆನಂದಬೋಧೇಂದ್ರ ಸರಸ್ವತೀ ಶ್ರೀಗಳು ಮಾತನಾಡಿ, ದೃಢಭಕ್ತಿಯಿಂದ ಪ್ರಾಪ್ತವಾಗುವ ಅನುಗ್ರಹ ಮಾತುಗಳಲ್ಲಿ ವರ್ಣಿಸಲಾಗುವುದಿಲ್ಲ. ಸದ್ಗುರುಗಳ ಅನುಗ್ರಹದಿಂದ ನನ್ನ ಜನ್ಮ ಪಾವನವಾಗಿದೆ. ಪರಮಪೂಜ್ಯ ಗುರುಗಳು ಸನ್ಯಾಸದೀಕ್ಷೆ ನೀಡಿ ನನ್ನನ್ನ ಉದ್ಧರಿಸಿದ್ದಾರೆ. ಶ್ರೀಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Onion Export: ನಾಲ್ಕು ರಾಷ್ಟ್ರಗಳಿಗೆ 54,760 ಟನ್ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್
ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಯತಿಗಳಾದ ಯಡತೋರೆ ಶ್ರೀಶಂಕರ ಭಾರತೀ ಮಹಾ ಸ್ವಾಮೀಜಿ, ಹರಿಹರಪುರದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮೀಜಿ, ಬೆಂಗಳೂರಿನ ಕೂಡ್ಲಿ ಶೃಂಗೇರಿ ಮಠದ ವಿದ್ಯಾ ವಿಶ್ವೇಶ್ವರ ಭಾರತೀ ಮಹಾ ಸ್ವಾಮೀಜಿ, ಹೋಳೆನರಸೀಪುರದ ಶ್ರೀಪ್ರಕಾಶಾನಂದೇಂದ್ರ ಮಹಾ ಸ್ವಾಮೀಜಿ , ಶ್ರೀಮನ್ನೆಲಮಾವಿನ ಮಠದ ಶ್ರೀಮಾಧವಾನಂದ ಭಾರತೀ ಮಹಾ ಸ್ವಾಮೀಜಿ, ತುರುವೇಕೇರೆಯ ಶ್ರೀಪ್ರಣವಾನಂದ ತೀರ್ಥ ಮಹಾಸ್ವಾಮೀಜಿ ಅವರು ಮಾತನಾಡಿದರು.
ಇದನ್ನೂ ಓದಿ: IPL 2024 : ಆರ್ಸಿಬಿ ತಂಡದ ವೇಳಾಪಟ್ಟಿ, ಪಂದ್ಯದ ವಿವರಗಳು ಇಲ್ಲಿವೆ
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ, ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಹಲವು ವಿದ್ವಾಂಸರು, ಸಾವಿರಾರು ಭಕ್ತರು, ಶಿಷ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.