ಶಿರಸಿ: ಸಮಾಜದಲ್ಲಿರುವ ತನ್ನ ತನದ ಮರೆಯನ್ನು ಹೋಗಲಾಡಿಸಿ ಆತ್ಮ ಜಾಗೃತಿಯೆಡೆಗೆ ಕರೆದೊಯ್ಯುವುದೇ ಸ್ವರ್ಣವಲ್ಲೀ ಪ್ರಭಾದ ಮುಖ್ಯ ಆಶಯ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ತಿಳಿಸಿದರು.
ಶಿರಸಿ ತಾಲೂಕಿನ ಸ್ವರ್ಣವಲ್ಲೀಯ ಸುಧರ್ಮಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀಮಠದ ಅಂಗ ಸಂಸ್ಥೆಯಾದ ಶ್ರೀ ಭಗವತ್ಪಾದ ಪ್ರಕಾಶನದ ರಜತ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
25 ವರ್ಷಗಳ ಹಿಂದೆ ಸ್ವರ್ಣವಲ್ಲೀ ಪ್ರಭಾ, ಶ್ರೀಭಗವತ್ಪಾದ ಪ್ರಕಾಶನ ಆರಂಭವಾದವು. ಸಮಾಜವನ್ನು ಆತ್ಮ ಜಾಗೃತಿಯತ್ತ ತರುವುದೇ ಪ್ರಕಾಶನದ ಆಶಯವಾಗಿದೆ. ಕೆಲವು ಸಲ ಗೊತ್ತಿಲ್ಲದೇ, ಗೊತ್ತಿದ್ದೂ ಕೆಲವು ಘಟನೆಗಳು ನಡೆಯುತ್ತಿರುತ್ತವೆ. ನಾವು ಇನ್ನೇನನ್ನೋ ಆಕರ್ಷಣೆಯಿಂದ ನೋಡುತ್ತಿದ್ದೇವೆ. ನಮ್ಮ ತನ ಮರೆಯುತ್ತಿದ್ದೇವೆ ಎಂದು ಹೇಳಿದರು.
ಇಂದು ವಿದೇಶ ಸಂಸ್ಕೃತಿ, ಭಾಷೆ, ವೇಷ, ಆಹಾರ ಸೇರಿದಂತೆ ಅನೇಕ ಸಂಗತಿ ನೋಡುತ್ತಿದ್ದೇವೆ. ನಮ್ಮ ತನ ಮರೆತು ಅತ್ತ ವಾಲುತ್ತಿದ್ದೇವೆ. ಒಳ್ಳೆಯ ಸಂಗತಿ ಇದ್ದರೆ ವಿದೇಶದ್ದು ಕೂಡ ಪಡೆಯಬಹುದು. ಆದರೆ, ನಮ್ಮದು ಚೆನ್ನಾಗಿದ್ದರೂ ಇನ್ನೊಂದರೆಡೆ ಮರೆತು ಆಕರ್ಷಿತರಾಗುತ್ತಿರುವುದು ಸರಿಯಲ್ಲ ಎಂದು ಶ್ರೀಗಳು ತಿಳಿಸಿದರು.
ಇದನ್ನೂ ಓದಿ: Rohit Sharma : ಡಿಸೆಂಬರ್ನಲ್ಲಿ ರೋಹಿತ್ ಶರ್ಮಾ ನಾಯಕತ್ವ ಭವಿಷ್ಯ ನಿರ್ಧಾರ?
ಸಂದೇಶ ಮಾಲಿಕಾ ಎಂಬ ಕೃತಿ ಬಿಡುಗಡೆಗೊಳಿಸಿದ ಅದಮ್ಯ ಚೇತನದ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಮನುಷ್ಯ ಅಭಿವೃದ್ಧಿ ಹೆಸರಿನಲ್ಲಿ ಏನೆಲ್ಲಾ ಮಾಡಿರಬಹುದು. ಆದರೆ, ಪ್ರಕೃತಿಯ ಕೊಡುಗೆಯಲ್ಲಿ ಶೇ.1 ರಷ್ಟೂ ಮನುಷ್ಯ ಮಾಡಲು ಆಗಲಿಲ್ಲ. ಕಳೆದ 50 ವರ್ಷದಲ್ಲಿ ಪರಿಸರ ನಾಶವನ್ನು ಮಾಡುತ್ತಾ ಅಭಿವೃದ್ಧಿಯತ್ತ ಸಾಗಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಮಾತನಾಡಿ, ಮಠ ಮಂದಿರಗಳು ಸನಾತನ ಧರ್ಮ ಉಳಿಸಬೇಕು. ಸನಾತನೀಯರು ಒಂದು ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ ವಾನಳ್ಳಿ ಮಾತನಾಡಿ, ಲಾಭದ ಉದ್ದೇಶ ಇಲ್ಲದೇ ಪತ್ರಿಕೆ ನಡೆಯುವುದು ದೊಡ್ಡ ಸಂಗತಿ. ಕನ್ನಡಕ್ಕೆ ಕೂಡ ಅನುಪಮ ಕೊಡುಗೆಯಾಗಿದೆ ಎಂದರು.
ಇದನ್ನೂ ಓದಿ: Job Alert: ನಮ್ಮ ಮೆಟ್ರೋದಲ್ಲಿದೆ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ
ಹಿರಿಯ ಪತ್ರಕರ್ತ ಮೋಹನ ಹೆಗಡೆ ಮಾತನಾಡಿ, ನೈತಿಕತೆ, ಪ್ರಾಮಾಣಿಕತೆ, ಧರ್ಮದಲ್ಲಿ ನಿಷ್ಠೆ ಕಡಿಮೆ ಆಗುತ್ತಿರುವ ನಡುವೆ, ಇಂತಹ ವಿಚಾರದಲ್ಲಿ ಶ್ರೀಮಠ ಅತ್ಯಂತ ಎತ್ತರದಲ್ಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಟಿಎಂಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಇತರರು ಇದ್ದರು. ನಾಗರತ್ನ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಎನ್.ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಫಲ ಸಮರ್ಪಿಸಿದರು. ವನರಾಗ ಶರ್ಮಾ ಗ್ರಂಥ ಪರಿಚಯ ಮಾಡಿದರು.
ಎಂ.ಎನ್.ಭಟ್ಟ ಕರಸುಳ್ಳಿ ಸನ್ಮಾನ ಪತ್ರ ವಾಚಿಸಿದರು. ಪ್ರಕಾಶನದ ಕಾರ್ಯದರ್ಶಿ ಪ್ರೊ. ಕಮಲಾಕರ ವಿ.ಭಟ್ಟ ನಿರೂಪಿಸಿದರು. ಜಿ.ಎನ್.ಕೋಮಾರ ವಂದಿಸಿದರು. ಮಠದ ಆಡಳಿತದ ರಾಜರಾಜೇಶ್ವರಿ ಮಹಾ ಪಾಠಶಾಲೆಯ ವಿದ್ಯಾರ್ಥಿಗಳು ಶಾಂತಿಮಂತ್ರ ಪಠಿಸಿದರು. ಇದೇ ವೇಳೆ ಅಧ್ಯಾತ್ಮ ಪ್ರಕಾಶ ಸಂಸ್ಥೆ ಪರವಾಗಿ ಶ್ರೀಮಠದಿಂದ ಲಕ್ಷ್ಮೀಶ ಭಟ್ಟ ಅವರು ಸಮ್ಮಾನ ಸ್ವೀಕರಿಸಿದರು.
ಇದನ್ನೂ ಓದಿ: Money Guide: ಬ್ಯಾಂಕ್ ದಿವಾಳಿಯಾದರೆ ಠೇವಣಿ ಹಣ ಏನಾಗುತ್ತದೆ? ಹಣ ಮರಳಿ ಪಡೆಯುವುದು ಹೇಗೆ?
ಬಳಿಕ ಪಂಡಿತ್ ಗಣಪತಿ ಭಟ್ ಗಾಯನ ಕಾರ್ಯಕ್ರಮ ನಡೆಯಿತು. ಆರ್.ಎನ್.ಭಟ್ಟ ಸಂಗೀತ ಕಾರ್ಯಕ್ರಮ ನಿರ್ವಹಿಸಿದರು.