Site icon Vistara News

Sirsi News: ಶಿರಸಿಯಲ್ಲಿ ಪಾಳು ಬಿದ್ದ ರಾಜ್ಯದ ಪ್ರಥಮ ಮೊಲ ಸಾಕಾಣಿಕಾ ಕೇಂದ್ರ

State first rabbit breeding center in sirsi

-ಭಾಸ್ಕರ್ ಆರ್. ಗೆಂಡ್ಲ, ವಿಸ್ತಾರ ನ್ಯೂಸ್

ಶಿರಸಿ: ರಾಜ್ಯದ ಪ್ರಥಮ ಮೊಲ ಸಾಕಾಣಿಕಾ ಕೇಂದ್ರ (Rabbit Breeding Center) ಎನಿಸಿಕೊಂಡ ಉ.ಕ ಜಿಲ್ಲೆ ಶಿರಸಿಯ ಮೊಲ ಸಾಕಾಣೆ ಕೇಂದ್ರವು ಇದ್ದರೂ ಇಲ್ಲದಂತಾಗಿದೆ. ಸುಮಾರು 25 ವರ್ಷಗಳ ಹಿಂದೆ ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭವಾದ ಶಿರಸಿಯ ಕೇಂದ್ರ ಇದೀಗ ನಿರ್ವಹಣೆಯ (Maintenance) ಕೊರತೆಯಿಂದ ಸೊರಗುವಂತಾಗಿದೆ.

ಹೌದು, ರಾಜ್ಯದಲ್ಲಿ ಎರಡು ಕಡೆ ಮಾತ್ರ ಮೊಲ ಸಾಕಾಣಿಕೆ ಕೇಂದ್ರವಿದೆ. ಸದ್ಯ ಹಾವೇರಿ ಜಿಲ್ಲೆಯ ಬಂಕಾಪುರ ಬಿಟ್ಟರೆ, ಶಿರಸಿಯಲ್ಲಿ ಮಾತ್ರ ಈ ಸಾಕಾಣಿಕಾ ಕೇಂದ್ರವಿದೆ. ಅತ್ಯಂತ ಸುಂದರವಾದ ಮೊಲ ಬೆಳೆಸಿ, ಅಭಿವೃದ್ದಿಪಡಿಸಲು ಇಲ್ಲಿ ಕಟ್ಟಡದ ವ್ಯವಸ್ಥೆ ಇದೆ. ಆದರೆ ಸರ್ಕಾರದ ವಿಶೇಷ ಅನುದಾನವಿಲ್ಲದೇ, ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಮೊಲ ಸಾಕಾಣಿಕೆ ಕೇಂದ್ರ ದಿನೇ ದಿನೇ ಅಧೋಗತಿಗೆ ತಲುಪುವಂತಾಗಿದೆ.

ಹಲವು ದಶಕಗಳ ಹಿಂದೆ ರಾಜ್ಯದ ಹಲವು ಕಡೆ ಮೊಲ ಸಾಕಾಣಿಕೆ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಿತು. 1984 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜ್ಯದ ಪ್ರಥಮ ಮೊಲ ಸಾಕಾಣಿಕಾ ಕೇಂದ್ರ ಪ್ರಾರಂಭವಾಯಿತು. . ಮೊದಲು ಈ ಕೇಂದ್ರಕ್ಕೆ ಒಬ್ಬ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ದಿನ ಕಳೆದಂತೆ 2003 ರಲ್ಲಿ ಈ ಕೇಂದ್ರದಲ್ಲಿ ನೇಮಕವಾಗಿದ್ದ ಸಿಬ್ಬಂದಿಯನ್ನು ಸರ್ಕಾರ ರದ್ದು ಮಾಡಿತು.

ಇದನ್ನೂ ಓದಿ: CDAC Recruitment 2023: 278 ಹುದ್ದೆಗಳಿವೆ; ಇಂದೇ ಅರ್ಜಿ ಸಲ್ಲಿಸಿ

ಈ ಕೇಂದ್ರ ಪಶುಸಂಗೋಪನಾ ಇಲಾಖಾ ಅಧೀನದಲ್ಲಿದ್ದು, ಇಲ್ಲಿಗೆ ಪ್ರತ್ಯೇಕ ಸಿಬ್ಬಂದಿಗಳು ಬೇಕಿದ್ದರೂ ಕೂಡ ಸಿಬ್ಬಂದಿ ನೇಮಕವಾಗಿಲ್ಲ. ಸದ್ಯ ಪಶು ಇಲಾಖೆಯ ಡಿ ಗ್ರೂಪ್ ನ ಒಬ್ಬರೇ ಸಿಬ್ಬಂದಿ ಎಲ್ಲ ನಿರ್ವಹಿಸಬೇಕಿದೆ. ಇಲ್ಲಿ 5 ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಮೊಲ ಸಾಕಲಾಗುತ್ತಿದೆ. ಸದ್ಯ ಈ ಮೊಲ ಸಾಕಾಣಿಕೆ ಕೇಂದ್ರದಲ್ಲಿ ಅಂದಾಜು 50 ರಿಂದ 60 ಮೊಲಗಳು ಇವೆ.

ಶಿರಸಿಯ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊಲ ಸಾಕಾಣಿಕಾ ಕೇಂದ್ರವಿದೆ. ಗ್ರಾಮೀಣ ಭಾಗದಲ್ಲಿದ್ದರೂ ಮೊದಲು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲಾಗಿತ್ತು. ಇಲ್ಲಿ ಮೊಲದ ದರ 150 ರೂ.ನಿಂದ ಆರಂಭಗೊಂಡು 500ರೂ. ವರೆಗೂ ಮೊಲಗಳು ಖರೀದಿ ಆಗುತ್ತದೆ. ಮೊದಲು ಮೊಲಗಳ ಬೇಡಿಕೆ ಹೆಚ್ಚಿದ್ದರೂ ಸದ್ಯ ಅಂತಹ ಬೇಡಿಕೆ ಇಲ್ಲವಾಗಿದೆ.

ಶಿರಸಿಯ ಮೊಲ ಸಾಕಾಣಿಕಾ ಕೇಂದ್ರದಲ್ಲಿರುವ ಮೊಲಗಳು.

ಇದನ್ನೂ ಓದಿ: Health Benefits Of Apple: ಪ್ರತಿದಿನ ಸೇಬು ತಿನ್ನುವುದಕ್ಕೆ ಕಾರಣಗಳು ಎಷ್ಟೊಂದು!

ಪೆಟ್ ಬ್ರೀಡ್ ಆಗಿ ಸಾಕುವ ಮಂದಿ ಕೂಡ ಕಡಿಮೆಯಾಗದ್ದಾರೆ. ಕೇವಲ ಮೊಲದ ಮಾಂಸಕ್ಕಾಗಿ ಖರೀದಿಸುವರಿದ್ದು, ಇತ್ತೀಚೆಗೆ ಅದಕ್ಕೂ ಬೇಡಿಕೆ ಕಡಿಮೆಯಾಗಿದೆ. ಆದರೆ ಕೇಂದ್ರದಲ್ಲಿನ ಮೊಲದ ಆಹಾರಕ್ಕೆ ಅನುದಾನವಿದೆ. ಆದರೆ ಕಟ್ಟಡ ನಿರ್ವಹಣೆ ಹಾಗೂ ಇತರ ವಿಷಯಗಳಿಗೆ ಯಾವುದೇ ಅನುದಾನ ಬರುತ್ತಿಲ್ಲ.

ಒಟ್ಟಾರೆ ರಾಜ್ಯದಲ್ಲೇ ಪ್ರಥಮ ಮೊಲ ಸಾಕಾಣಿಕೆ ಕೇಂದ್ರ ಎನಿಸಿಕೊಂಡಿರೋ ಶಿರಸಿಯಲ್ಲಿ ಕೇಂದ್ರದ ಉಳಿವಿಗೆ ಅಧಿಕಾರಿಗಳೂ ಸೇರಿದಂತೆ ಜನಪ್ರತಿನಿಧಿಗಳು ಕೈ ಜೋಡಿಸಬೇಕಿದೆ. ವಿಶೇಷ ಅನುದಾನವನ್ನು ಈ ಕೇಂದ್ರಕ್ಕೆ ನೀಡಿದಲ್ಲಿ ಇನ್ನೂ ಹೆಚ್ಚಿನ ಮೊಲಗಳ ತಳಿಗಳ ಸಾಕಾಣಿಕೆ ಜತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಬಹುದಾಗಿದೆ.

ಇದನ್ನೂ ಓದಿ: ICC World Cup 2023 : ಬಿಕೋ ಎನ್ನುತ್ತಿದೆ ವಿಶ್ವ ಕಪ್​ ಪಂದ್ಯ ನಡೆಯುವ ಸ್ಟೇಡಿಯಮ್​!

ಸಿಬ್ಬಂದಿ ಹಾಗೂ ಅನುದಾನದ ಕೊರತೆಯಿಂದ ನಿರ್ವಹಣೆ ಕಷ್ಟವಾಗಿದ್ದು, ಮಾರುಕಟ್ಟೆಯ ಅಲಭ್ಯತೆಯಿಂದ ಮೊಲ ಸಾಕಾಣಿಕಾ ಕೇಂದ್ರ ಉತ್ತಮ ಸ್ಥಿತಿಯಲ್ಲಿ‌ ಇಲ್ಲ. ಮೊಲ ಸಾಕಣೆಗೆ ಯಾರು ಕೂಡ ಖರೀದಿ ಮಾಡುತ್ತಿಲ್ಲ.

-ಡಾ.ಗಜಾನನ ಹೊಸ್ಮನಿ, ಪಶು ಇಲಾಖೆ ಸಹಾಯಕ ನಿರ್ದೇಶಕ.

ಮೊಲವನ್ನು ಸಾಕುವ ಪಂಜರಗಳು ಸಂಪೂರ್ಣ ಶಿಥಿಲಗೊಂಡಿವೆ. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಮೊಲ ಸಾಕಾಣಿಕಾ ಕೇಂದ್ರವಿದ್ದು, ಕೇವಲ ಕಾಟಾಚಾರಕ್ಕೆ ಮೊಲ ಸಾಕಾಣಿಕೆ ಇರುವ ಕಾರಣ ಜಾಗದ ದುರುಪಯೋಗದ ಸಾಧ್ಯತೆಯೂ ಇದೆ. ಕಾರಣ ಜಾಗವನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಸರ್ಕಾರ ಯೋಚಿಸಲಿ.‌

-ಪರಮಾನಂದ ಹೆಗಡೆ, ಸಾಮಾಜಿಕ ಕಾರ್ಯಕರ್ತ.‌

Exit mobile version