ಶಿರಸಿ: ಅಗ್ನಿಯ ಕೆನ್ನಾಲಿಗೆಯಿಂದ ಸುಟ್ಟು ಕರಕಲಾದ ಶಿರಸಿ ತಾಲೂಕಿನ ಕಲ್ಲಕೈ ಐದಾಳಿಗದ್ದೆ ಅಡಿಕೆ ತೋಟಕ್ಕೆ (Sirsi News) ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಭೇಟಿ ನೀಡಿ ಬೆಂಕಿಯಿಂದ ಆದ ಹಾನಿಯನ್ನು ಪರಿಶೀಲಿಸಿದರು.
ಸೋಮವಾರ ಮಧ್ಯಾಹ್ನ ಅಚಾನಕ್ ಬಿದ್ದ ಬೆಂಕಿಗೆ ಮಧುಕೇಶ್ವರ ಗಣಪತಿ ಹೆಗಡೆ ಎಂಬುವವರಿಗೆ ಸೇರಿದ ಸುಮಾರು 2 ಎಕರೆ ವ್ಯಾಪ್ತಿಯ ತೋಟ ಸುಟ್ಟು ಹೋಗಿತ್ತು. ತೆಂಗಿನ ಮರಗಳೂ ಭಸ್ಮವಾಗಿದೆ. ವಿಷಯ ತಿಳಿದ ಕಾಗೇರಿ ಅವರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಳೆಗಾರರಿಗೆ ಸಾಂತ್ವನ ಹೇಳಿದರು.
ಫಸಲು ಕೊಡುವ ಅಡಿಕೆ, ಬಾಳೆ, ಕಾಳು ಮೆಣಸು, ಜಾಯಿಕಾಯಿ ಮರಗಳು ದಹಿಸಿ ಹೋಗಿದ್ದು, ಅದರ ಪುನರ್ ಸೃಷ್ಟಿಯ ಬಗ್ಗೆಯೂ ಕಾಗೇರಿ ಸಮಾಲೋಚನೆ ನಡೆಸಿದರು. ಸುಟ್ಟು 24 ಗಂಟೆಯಾದರೂ ಘಟನಾ ಸ್ಥಳದಲ್ಲಿ ಕಂದಾಯ ಅಧಿಕಾರಿಗಳು ಪಂಚನಾಮೆ ನಡೆಸದ ಬಗ್ಗೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿ ತಕ್ಷಣ ಪಂಚನಾಮೆ ನಡೆಸಲು ಸೂಚಿಸುವುದಾಗಿ ಹೇಳಿದರು.
ವಿದ್ಯುತ್ ತಂತಿ ಮಾರ್ಗ ಕೂಡ ಇದೆ ಮಾರ್ಗದಲ್ಲಿ ಹಾದು ಹೋಗಿರುವುದರಿಂದ ಅದರಿಂದ ಹಾನಿ ಸಂಭವಿಸುತ್ತದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಕೊಟ್ಟು ಪರಿಹಾರ ಒದಗಿಸಲು ಸೂಚನೆ ನೀಡುವುದಾಗಿ ಹೇಳಿದರು. ಅಲ್ಲದೆ, ತಕ್ಷಣ ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿ ಪಂಚನಾಮೆ ನಡೆಸುವಂತೆ ಸೂಚಿಸುವುದಾಗಿ ಹೇಳಿದರು.
ಯಡಹಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ಮಾತನಾಡಿ, “ಅಡಿಕೆ ಬೆಳೆ ವಿಮೆಯ ವ್ಯಾಪ್ತಿಯಲ್ಲಿ ಅಗ್ನಿ ಅವಘಡ, ಸಿಡಿಲು ಬಡಿದರೆ ಆಗುವ ಹಾನಿಗೆ ಪರಿಹಾರ ಸಂಗತಿ ಸೇರ್ಪಡೆಗೊಂಡಿಲ್ಲ. ಅಡಿಕೆ ಬೆಳೆ ವಿಮೆಯ ವ್ಯಾಪ್ತಿಯಲ್ಲಿ ಸೇರ್ಪಡೆಗೊಳಿಸಲು ಸೂಚಿಸಬೇಕಾದ ಅಗತ್ಯವಿದೆ” ಎಂದು ಆಗ್ರಹಿಸಿದರು.
ಸ್ಥಳೀಯ ಪ್ರಮುಖ ಭಾಸ್ಕರ ಹೆಗಡೆ ಯಡಹಳ್ಳಿ ಅವರು, “ಅರಣ್ಯ ಇಲಾಖೆ ನೀಡುವ ವಿಮಾ ಪರಿಹಾರ ಮೊತ್ತಕ್ಕಿಂತ ಅತ್ಯಂತ ಕಡಿಮೆ ಮೊತ್ತ ಕಂದಾಯ ಇಲಾಖೆಯಲ್ಲಿದೆ. ಇದನ್ನು ಏರಿಸುವ ಅಗತ್ಯವಿದೆ” ಎಂಬ ಆಗ್ರಹವನ್ನು ಮಾಡಿದರು. ಅಡಿಕೆ ಬೆಳೆಗಾರರಿಗೆ ಇತರ ದುರಂತಗಳಿಂದ ನಷ್ಟ 10 – 15 ವರ್ಷಗಳ ತನಕ ಆಗಲಿದ್ದು ಅದನ್ನು ಒದಗಿಸಲು ಸರ್ಕಾರದಿಂದ ಮಾತ್ರ ಸಾಧ್ಯ ಎಂಬ ಒತ್ತಾಯ ಕೂಡ ವ್ಯಕ್ತವಾಯಿತು.
ಇದನ್ನೂ ಓದಿ: Documents Digitalization: ಶ್ರೀನಿವಾಸ್ ಹೆಬ್ಬಾರ್ ಮತ್ತೊಂದು ಸಾಹಸ; ಶಿರಸಿ ಉಪ ವಿಭಾಗದ ದಾಖಲೆ ಸಂಪೂರ್ಣ ಡಿಜಿಟಲೀಕರಣ
ಈ ವೇಳೆ ವಸಂತ ಭಟ್ಟ ಸಹಸ್ರಳ್ಳಿ, ಗ್ರಾಮ ಉಪಾಧ್ಯಕ್ಷ ರವೀಶ ಹೆಗಡೆ, ವಿನಾಯಕ ಹೆಗಡೆ, ಸತೀಶ್ ಹೆಗಡೆ, ರಮೇಶ ಹೆಗಡೆ, ಸೀತಾರಾಮ್ ಜಿ. ಹೆಗಡೆ, ಮಂಜುನಾಥ ಹೆಗಡೆ, ಎಸ್.ಪಿ. ಹೆಗಡೆ, ವಿ.ಯು. ಭಟ್ ಇತರರು ಇದ್ದರು.