ಶಿರಸಿ: ನಗರದ ಬನವಾಸಿ ರಸ್ತೆಗೆ ತಾಗಿಕೊಂಡಿರುವ ಕುಳವೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪಡಂಬೈಲ್ ಮುಖ್ಯ ರಸ್ತೆಯಲ್ಲಿ ಕಸದ (Garbage) ಸಮಸ್ಯೆ ಉಲ್ಬಣವಾಗಿದ್ದು, ಸ್ಥಳೀಯ ಅಂಗಡಿ (Shop), ಹೋಟೆಲ್‌ಗಳ (Hotel) ಕಸದಿಂದಾಗಿ ಜನರ ಸಂಚಾರಕ್ಕೆ ತೀವ್ರ ತೊಂದರೆ ಎದುರಾಗಿದೆ.
ಪಡಂಬೈಲ್ ಮುಖ್ಯ ರಸ್ತೆಯಲ್ಲಿ ಕುಳವೆ, ತೆರಕನಹಳ್ಳಿ ಸೇರಿದಂತೆ ಹಲವು ಹಳ್ಳಿಗಳಿಂದ ಶಿರಸಿಗೆ ಬರುವ ನೂರಾರು ಜನರು ಸಂಚಾರ ಮಾಡುತ್ತಾರೆ. ಇವರೆಲ್ಲರೂ ಪ್ರತಿ ದಿವಸ ಗಬ್ಬು ನಾರುವ ವಾಸನೆಯನ್ನು ಸೇವಿಸಿಕೊಂಡೇ ಶಿರಸಿಗೆ ಬರಬೇಕಾದ ಸ್ಥಿತಿಯಿದ್ದು, ಸ್ಥಳೀಯರೂ ಸೇರಿದಂತೆ ಓಡಾಡುವ ಜನರು ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.
ಕಳೆದ ಹಲವು ವರ್ಷಗಳಿಂದ ಇಲ್ಲಿ ಕಸದ ಸಮಸ್ಯೆ ಇದೆ. ಮೊದಲು ಪಂಚಾಯಿತಿ ವತಿಯಿಂದ ಸಿಸಿಟಿವಿ ಅಳವಡಿಸಿ ಇದಕ್ಕೆ ಕಡಿವಾಣ ಹಾಕಲು ಪ್ರಯತ್ನ ನಡೆಸಲಾಗಿತ್ತು. ನಂತರ ಇತ್ತೀಚೆಗೆ ಸ್ಥಳೀಯರು, ಪಂಚಾಯಿತಿ ಸದಸ್ಯರು ಎರಡು ಮೂರು ಬಾರಿ ಕಸ ಹಾಕುವವರನ್ನು ಹಿಡಿದು ದಂಡ ಹಾಕುವ ಕೆಲಸ ಮಾಡಿದ್ದರು. ಜತೆಗೆ ಶಿರಸಿ ನಗರಸಭೆಯವರ ಸಹಕಾರವನ್ನೂ ಇದಕ್ಕೆ ಕೋರಲಾಗಿತ್ತು. ಆದರೆ, ಒಮ್ಮೆ ಮಾತ್ರ ಕಸ ತೆಗೆದುಕೊಂಡು ಹೋಗಿ ಪುನಃ ನಗರಸಭೆಯವರು ಬಾರದ ಕಾರಣ ಕಸದ ಸಮಸ್ಯೆ ಉಲ್ಬಣವಾಗಿದೆ.
ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆಗೆ ಬರುವ ವಿಶ್ವ ನಾಯಕರನ್ನು ಲೈವ್ ಆಗಿ ಇಲ್ಲಿ ನೋಡಿ!
ಗ್ರಾಮ ಪಂಚಾಯಿತಿ ವ್ಯಾಪ್ತಿಯದ್ದಾದರೂ ಇಲ್ಲಿ ಬರುವ ಕಸ ಶೇ.90 ರಷ್ಟು ನಗರ ಭಾಗದ್ದಾಗಿದೆ. ಕಾರಣ ನಗರದ ಬನವಾಸಿ ರಸ್ತೆಯ ಅಂಗಡಿ-ಹೊಟೆಲ್‌ಗಳಿಗೆ ಪುಡ್ ಇನ್ಸ್‌ಪೆಕ್ಟರ್ ಭೇಟಿ ನೀಡಿ, ತಾಲೂಕಿನ ಕುಳವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಂಬೈಲ್ ಮುಖ್ಯ ರಸ್ತೆಯಲ್ಲಿ ಕಸ ಬಿಸಾಡಿದರೆ ಅಂಗಡಿಗಳ ಪರವಾನಿಗೆ ರದ್ದುಪಡಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಬೇಕೆಂದು ಕುಳವೆ ಗ್ರಾ.ಪಂ ಸದಸ್ಯ ಗಂಗಾಧರ ನಾಯ್ಕ ಆಗ್ರಹಿಸಿದ್ದಾರೆ.
ಫುಡ್ ಇನ್ಸ್‌ಪೆಕ್ಟರ್ ಬನವಾಸಿ ರಸ್ತೆಯ ಅಂಗಡಿ ಮತ್ತು ಹೋಟೆಲ್‌ಗಳಿಗೆ ಭೇಟಿ ನೀಡಿ, ರಸ್ತೆ ಪಕ್ಕದಲ್ಲಿ ತ್ಯಾಜ್ಯಗಳನ್ನು ಎಸೆಯುತ್ತಾರೋ ಅಂತಹ ಅಂಗಡಿ ಹಾಗೂ ಹೋಟೆಲ್‌ಗಳ ಲೈಸನ್ಸ್ ರದ್ದುಪಡಿಸಿ ಬಿಸಿ ಮುಟ್ಟಿಸಬೇಕಾಗಿದೆ. ನಗರ ಸಭೆಯ ಅಧಿಕಾರಿಗಳು ನಗರವನ್ನು ಸ್ವಚ್ಛವಾಗಿಡಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಕಸ ಎಸೆಯುವವರಿಂದ ನಗರಕ್ಕೂ ಮತ್ತು ಗ್ರಾಮ ಪಂಚಾಯಿತಿಗೂ ಕೆಟ್ಟ ಹೆಸರು, ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು, ನಗರಸಭೆಯ ಕಸ ಸಂಗ್ರಹಣೆ ವಾಹನಗಳಿಗೆ ನೀಡುವಂತೆ ಗಾಡಿಗೆ ಕಸ ನೀಡುವಂತೆ ಕ್ರಮ ಕೈಗೊಂಡರೆ ನಗರ ಮತ್ತು ಗ್ರಾಮೀಣ ಗಡಿ ಭಾಗವನ್ನು ಸ್ವಚ್ಛತೆಯಾಗಿಟ್ಟುಕೊಳ್ಳಬಹುದು. ಈ ಬಗ್ಗೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಘನತ್ಯಾಜ್ಯ ಘಟಕ ಮಾಡಿದರೂ ಸಹ ಪಡಂಬೈಲ್ ನಲ್ಲಿ ಬೀಳುವುದು ಬಹುತೇಕ ಕೊಳೆತ, ಹೋಟೆಲ್ ತ್ಯಾಜ್ಯಗಳಾಗಿದೆ. ಇದರಿಂದ ಸಮಸ್ಯೆಯಾಗುತ್ತಿದೆ. ಕಾರಣ ಇದನ್ನು ತೆಗೆದುಕೊಂಡು ಹೋಗಲು ನಗರಸಭೆಯವರು ಕ್ರಮ ಕೈಗೊಳ್ಳಬೇಕಾಗಿದ್ದು, ಈ ಹಿಂದೆಯೂ ಪಂಚಾಯಿತಿ ನಾಗರಿಕರು ಹಲವು ಬಾರಿ ಮನವಿ ಮಾಡಿದ್ದರು. ಆದರೂ ಯಾವುದೇ ಸಹಕಾರ ಸಿಕ್ಕಿರಲಿಲ್ಲ. ಇದರಿಂದ ಇನ್ನು ಮುಂದೆಯಾದರೂ ವಾರಕ್ಕೊಮ್ಮೆ ಭೇಟಿ ನೀಡಿ, ಕಸ ಸಂಗ್ರಹಣೆಗೆ ಸಹಕಾರ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಇದನ್ನೂ ಓದಿ: ICC World Cup: ವಿಶ್ವಕಪ್ಗೆ ಅಂಪೈರ್ಗಳ ನೇಮಕ; ನಿತಿನ್ ಮೆನನ್ಗೆ ಅವಕಾಶ
ರಾತ್ರಿ ಸಮಯದಲ್ಲಿ ಅರಣ್ಯ ಮಹಾವಿದ್ಯಾಲಯದ ಎದುರುಗಡೆಯ ಬಸ್ ಸ್ಟಾಪ್ ನಲ್ಲಿ ಮದ್ಯ ಸೇವಿಸಿ, ಬಳಿಕ ಬಾಟಲ್ ಹಾಗೂ ಇತರೆ ವಸ್ತುಗಳನ್ನು ಬಸ್ ಸ್ಟ್ಯಾಂಡ್‌ಗಳಲ್ಲಿ ಹಾಕಿ ಹೋಗುತ್ತಿದ್ದು, ಪೊಲೀಸ್ ಅಧಿಕಾರಿಗಳು ರಾತ್ರಿ ಸಮಯದಲ್ಲಿ ದಾಳಿ ನಡೆಸಿ, ಇಂತಹ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು.
-ಗಂಗಾಧರ ನಾಯ್ಕ, ಕುಳವೆ ಗ್ರಾಪಂ ಸದಸ್ಯ