Site icon Vistara News

Srinivas Hebbar: ಜೈನ ಮಠದ ಕೆರೆಗೆ ಜೀವ ತುಂಬಿದ ಶ್ರೀನಿವಾಸ ಹೆಬ್ಬಾರ್‌; ಇನ್ನೊಂದು ವಾರದಲ್ಲಿ ಕಾಮಗಾರಿ ಪೂರ್ಣ

#image_title

ಶಿರಸಿ: ಆಧುನಿಕ ಭಗೀರಥ ಎಂದು ಕರೆಸಿಕೊಳ್ಳುವ ಶ್ರೀನಿವಾಸ್ ಹೆಬ್ಬಾರ್ (Srinivas Hebbar) ಅವರು ಜೀವ ಜಲಕ್ಕೆ ತಮ್ಮದೇ ಆದ ಸೇವೆ ನೀಡುತ್ತಾ ಬಂದವರು. ಹೂಳು ತುಂಬಿದ ಕೆರೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತು ತಮ್ಮ ನಿಸ್ವಾರ್ಥ ಸೇವೆಯಿಂದ ಅದೆಷ್ಟೋ ಕೆರೆಗಳ ಅಭಿವೃದ್ಧಿ ಮಾಡಿದ್ದಾರೆ. ಇದೀಗ ಶಿರಸಿಯ ಜೈನ ಮಠದ ಆವರಣದಲ್ಲಿರುವ ಪುರಾತನ‌ ಕಾಲದ ಕೆರೆಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಕೆರೆ ಪುನಶ್ಚೇತನವು ಬಹುತೇಕ ಮುಕ್ತಾಯದ ಹಂತದಲ್ಲಿದೆ.

ಶಿರಸಿ ತಾಲೂಕಿನ‌ ಜೈನ‌ ಮಠದ ಪುರಾತನ ಕೆರೆಗೆ ಮತ್ತೆ ಜೀವ ಬಂದಿದೆ. ಈ ಮಹತ್ಕಾರ್ಯಕ್ಕೆ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ಅವರು ಸಾಕ್ಷಿಯಾಗಿದ್ದಾರೆ. ಕಳೆದ ಎರಡು ತಿಂಗಳಿಂದ ನಡೆಯುತ್ತಿದ್ದ ಪುನಶ್ಚೇತನ ಕಾರ್ಯವು ಪೂರ್ಣ ಆಗುತ್ತಿದೆ. ಕೆರೆಯೇ ಇಲ್ಲದಂತೆ ಕಾಣುತ್ತಿದ್ದ ಜೈನ ಮಠದ ಪುರಾತನ ‌ಕೆರೆಯು ಈಗೊಂದು ಆಕಾರಕ್ಕೆ ಬಂದಿದೆ.

ಇದನ್ನೂ ಓದಿ: Karnataka Election 2023: ದೂರದೂರಿನ ಪ್ರಯಾಣಿಕರಿಗೆ ತಟ್ಟಿದ ಎಲೆಕ್ಷನ್‌ ಬಿಸಿ; ಬಸ್ಸಿಲ್ಲದೆ ಪರದಾಟ

ಶಿರಸಿ ಭಾಗದಲ್ಲಿ ಕೆರೆ ಅಭಿವೃದ್ಧಿ ಎಂದರೆ ತಕ್ಷಣ ನೆನಪಾಗುವುದು ಕೆರೆ ಹೆಬ್ಬಾರರು. ಕೆರೆಗಳ ಅಭಿವೃದ್ಧಿಗೆ ಇವರ ಕೊಡುಗೆ ಕಾರಣವಾಗಿದೆ. ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷರಾಗಿ ಜಲ ಸಂರಕ್ಷಣೆಯ ಕೆರೆಯನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ಈಗ ಕಾರ್ಯಪಡೆಯ ಪರವಾಗಿ ಶ್ರೀನಿವಾಸ ಹೆಬ್ಬಾರ್‌ ಅವರು ಜೈನ ಮಠದ ಕೆರೆ ಅಭಿವೃದ್ಧಿಗೆ ಕಂಕಣ ಕಟ್ಟಿದ್ದಾರೆ. ಕೆರೆಯು ಹೂಳು ಮಿಶ್ರಿತ ಕಸಗಳಿಂದ ತುಂಬಿಕೊಂಡಿದ್ದ ಬಗ್ಗೆ ಮಾಹಿತಿ ಸಿಕ್ಕಾಕ್ಷಣ ಜಲ ಸಂರಕ್ಷಣೆಗೆ ಮುಂದಾಗಿರುವ ಅವರು, ಕಾಮಗಾರಿಯನ್ನೂ ಪ್ರಾರಂಭಿಸಿದ್ದರು. ಈಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಬಳಕೆಗೆ ಮುಕ್ತವಾಗಲಿದೆ.

ಕಳೆದ ಹಲವು ದಶಕಗಳಿಂದ ಹೂಳು ತುಂಬಿಕೊಂಡಿದ್ದ ಸುಧಾಪುರ ಕೆರೆ ಈಗ ಒಂದು ರೂಪನ್ನು ಪಡೆದುಕೊಂಡಿದೆ. ಕೆರೆಯಿಂದ ತೆಗೆಯಲಾದ ಹೂಳನ್ನು ಮಠದ ಆವರಣದ ತಗ್ಗಿನ ಇನ್ನೊಂದು ಪಾರ್ಶ್ವಕ್ಕೆ ಸಾಗಿಸಲಾಗುತ್ತಿದೆ. ಜೈನ ಮಠದ ಆವರಣದಲ್ಲೇ‌ ಇರುವ ಒಂದು ಎಕರೆಗೂ ಹೆಚ್ಚು ವ್ಯಾಪ್ತಿಯ ಈ ಕೆರೆಯನ್ನು ಸುಮಾರು 30 ಅಡಿ ಆಳದ ತ‌ನಕ ಶ್ರೀನಿವಾಸ್‌ ಹೆಬ್ಬಾರ್ ನೇತೃತ್ವದ ಕಾರ್ಯಪಡೆ ಕಳೆದ 45 ದಿನಗಳಿಂದ ಕೆಲಸ ಮಾಡುತ್ತಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: Karnataka Election: ಜತೆಯಾಗಿ ಚಾಮುಂಡಿ ದರ್ಶನ ಪಡೆದ ಸಿದ್ದು-ಡಿಕೆಶಿ, ಗ್ಯಾರಂಟಿ ಪ್ರತಿ ಇಟ್ಟು ಪ್ರಾರ್ಥನೆ

ಈ ಕೆರೆ ಅಭಿವೃದ್ಧಿಯಿಂದ ಸುತ್ತಲಿನ ಅಡಿಕೆ ತೋಟ, ಭತ್ತದ ಗದ್ದೆಗೆ ನೀರಾವರಿ ಅನುಕೂಲ ಆಗಲಿದೆ. ಜೀವಜಲಕ್ಕೆ ಶಕ್ತಿ ಬರಲಿದೆ. ಜೈನ ಮಠದ ಶ್ರೀಭಟ್ಟಾಕಳಂಕ ಭಟ್ಟಾರಕ ಪಟ್ಟಾಚಾರ್ಯ ವರ್ಯ ಶ್ರೀಗಳ ಸಲಹೆ‌ ಮೇರೆಗೆ ಕಾರ್ಯಪಡೆ‌ ಅಭಿವೃದ್ಧಿಗೆ ಮುಂದಾಗಿದೆ. ಶ್ರೀನಿವಾಸ ಹೆಬ್ಬಾರ್ ತಮ್ಮ ಸ್ವಂತ ಖರ್ಚಿನಲ್ಲಿ ಮೂರು ಹಿಟಾಚಿ, ಮೂರ್ನಾಲ್ಕು ಟ್ರ್ಯಾಕ್ಟರ್ ಬಳಸಿ ಹೂಳೆತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ.

ಮೇ ತಿಂಗಳಲ್ಲಿ 20 ಅಡಿ ಕನಿಷ್ಠ ನೀರು ನಿಲ್ಲುವ ಸಾಧ್ಯತೆ

ಕೆರೆ ಅಭಿವೃದ್ಧಿ ವೀಕ್ಷಣೆಯ ನಡುವೆ ಮಾತನಾಡಿದ ಶ್ರೀನಿವಾಸ ಹೆಬ್ಬಾರ್, “ಶಿರಸಿ ಜೀವಜಲ ಕಾರ್ಯಪಡೆಯಿಂದ ಹಲವಾರು ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಈಗ ಜೈನ ಮಠದ ಆವರಣದಲ್ಲಿರುವ ಕೆರೆ ಹೂಳೆತ್ತುವ ಕಾರ್ಯ ಬಹುತೇಕ ಮುಗಿದಿದೆ. ಅಂದಾಜು 30 ಅಡಿ ಹೂಳು ಎತ್ತಲಾಗಿದೆ. ಮುಂದಿನ ವರ್ಷದ ಮೇ ತಿಂಗಳಲ್ಲಿ 20 ಅಡಿ ಕನಿಷ್ಠ ನೀರು ನಿಲ್ಲುವ ಸಾಧ್ಯತೆ ಇದೆ” ಎಂದು ಹರ್ಷ ವ್ಯಕ್ತಪಡಿಸಿದರು. ಹಾಗೆಯೇ ಮಠದ ಕೆರೆಯ ಜೀರ್ಣೋದ್ಧಾರ ಅವಕಾಶ ಸಿಕ್ಕಿದ್ದು ಪುಣ್ಯ ಎಂದೂ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Karnataka Election : ಉದ್ಧಟ ಇನ್‌ಸ್ಪೆಕ್ಟರ್‌ ಸಸ್ಪೆಂಡ್‌, ತಾಯಿ ಮೃತಪಟ್ಟರೂ ಕರ್ತವ್ಯಕ್ಕೆ ಬಂದ ಕಾನ್‌ಸ್ಟೆಬಲ್‌ಗೆ ಗೌರವ

ಈ ಬಗ್ಗೆ ಅಂಕಣಕಾರರಾದ ವೈಶಾಲಿ ವಿ.ಪಿ. ಹೆಗಡೆ ಮಾತನಾಡಿ, “ಸರ್ಕಾರದಿಂದಾಗಲಿ, ಸಂಘ ಸಂಸ್ಥೆಗಳಿಂದಾಗಲೀ ಯಾವ ಸಹಾಯವನ್ನೂ ನಿರೀಕ್ಷಿಸದೇ ತಮ್ಮದೇ ಮಾರ್ಗದಲ್ಲಿ ಖುಷಿ ಕಂಡುಕೊಳ್ಳುತ್ತಿರುವ ಜೀವಜಲ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್ ಅವರು ಸಮಾಜಕ್ಕೊಂದು ಭೂಷಣ. ಅವರಿಗೆ ನೈತಿಕ ಬೆಂಬಲ ನೀಡುವಷ್ಟಕ್ಕಾದರೂ ಅವರ ಜತೆಗಿರಬೇಕು” ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಅಕ್ಷಯ್ ಹೆಗಡೆ, ಎಂ.ಎಂ.ಭಟ್, ಶ್ರೀಧರ ಭಟ್ಟ ಕೊಳಗಿಬೀಸ್, ನಾಗರಾಜ ಶೆಟ್ಟಿ ಮುಂತಾದವರು ಇದ್ದರು.‌

Exit mobile version